ಬೋಧನೆ, ಉತ್ತಮ ಸಂಸ್ಕಾರ ನೀಡಬೇಕು: ದರ್ಶನಾಪೂರ

KannadaprabhaNewsNetwork | Published : Nov 27, 2023 1:15 AM

ಸಾರಾಂಶ

ಶಿಕ್ಷಕರು ಮಕ್ಕಳಿಗೆ ಅವರಲ್ಲಿರುವ ಆಸಕ್ತಿಯನ್ನು ಗಮನಿಸಿ, ಗುಣಮಟ್ಟದ ಬೋಧನೆ ಜೊತೆಗೆ ಉತ್ತಮ ಸಂಸ್ಕಾರ ಮೂಡಿಸಿದಾಗ ಮಾತ್ರ ಅವರು ಭವಿಷ್ಯದಲ್ಲಿ ನಾಡು ಕಟ್ಟುವ ಒಳ್ಳೆಯ ನಾಗರಿಕರಾಗುತ್ತಾರೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು

ಅರ್ಯಭಟ್ಟ ಅಂತಾರಾಷ್ಟ್ರೀಯ ಅಕಾಡೆಮಿ ಶಿಕ್ಷಣ ಸಂಸ್ಥೆ 6ನೇ ಸಂಸ್ಥಾಪನಾ ದಿನಾಚರಣೆಯಲ್ಲಿರುಸ್ತುವಾರಿ ಸಚಿವ ಕರೆಕನ್ನಡಪ್ರಭ ವಾರ್ತೆ ಯಾದಗಿರಿ

ಶಿಕ್ಷಕರು ಮಕ್ಕಳಿಗೆ ಅವರಲ್ಲಿರುವ ಆಸಕ್ತಿಯನ್ನು ಗಮನಿಸಿ, ಗುಣಮಟ್ಟದ ಬೋಧನೆ ಜೊತೆಗೆ ಉತ್ತಮ ಸಂಸ್ಕಾರ ಮೂಡಿಸಿದಾಗ ಮಾತ್ರ ಅವರು ಭವಿಷ್ಯದಲ್ಲಿ ನಾಡು ಕಟ್ಟುವ ಒಳ್ಳೆಯ ನಾಗರಿಕರಾಗುತ್ತಾರೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.

ಯಾದಗಿರಿ ಹೊರವಲಯದಲ್ಲಿರುವ ಆರ್ಯಭಟ್ಟ ಅಂತಾರಾಷ್ಟ್ರೀಯ ಅಕಾಡೆಮಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ 6ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ದಿನಗಳಲ್ಲಿ ನಾವೆಲ್ಲರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಆಗ ದೈನಂದಿನ ಬದುಕಿನಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳನ್ನು ಎದುರಿಸುವ ಜೊತೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಇಂದು ದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಅಪಾರ ಬದಲಾವಣೆಯನ್ನು ಕಾಣುತ್ತಿದ್ದೇವೆ. ಆಡಳಿತ ಮಂಡಳಿ ಹಾಗೂ ಶಿಕ್ಷಕರು ಶಿಕ್ಷಣಕ್ಕೆ ಹೊಸ ದಿಕ್ಕನ್ನು ತೋರಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ. ಸ್ಪರ್ಧಾ ಮನೋಭಾವನೆ ಮೂಡಿಸಬೇಕು. ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಪರಿಶ್ರಮದ ಮೂಲಕ ಉನ್ನತ ಗುರಿ ಸಾಧಿಸುತ್ತಾರೆ ಎಂದು ತಿಳಿಸಿದರು.

ಹಲವಾರು ಜನರ ಬಳಿ ಸಾಕಷ್ಟು ಹಣವಿದೆ. ಆದರೆ ಸಮಾಜದ ಯಾವುದಾದರೊಂದು ಕ್ಷೇತ್ರಕ್ಕೆ ಕೊಡುಗೆ ನೀಡಬೇಕೆಂಬುವ ಅಚಲ ನಿರ್ಧಾರ, ಶ್ರದ್ಧೆ, ಪರಿಶ್ರಮ ಕೆಲವರಲ್ಲಿ ಕಾಣುತ್ತೇವೆ. ಒಳ್ಳೆಯ ಶಿಕ್ಷಣ ಸಂಸ್ಥೆ ಕಟ್ಟುವುದು ಒಂದು ಸವಾಲಿನ ಕೆಲಸ, ಅನಪೂರ ಸಹೋದರರು ಹಿಂದುಳಿದ ಜಿಲ್ಲೆಯಲ್ಲಿ ಎಲ್ಲವನ್ನು ಮೆಟ್ಟಿ ನಿಲ್ಲುವ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನ ಕಲ್ಪಿಸಿರುವುದು ಶ್ಲಾಘನೀಯವಾಗಿದೆ ಎಂದರು.

ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರ ಪ್ರಮುಖವಾಗಿದೆ. ಸ್ವಲ್ಪ ಸಮಯ ಮಕ್ಕಳ ಅಭ್ಯಾಸ, ಹವ್ಯಾಸ, ಚಟುವಟಿಕೆಗಳ ಮೇಲೆ ಗಮನ ಹರಿಸಿ, ಕಾಲ ಕಾಲಕ್ಕೆ ಅವರಿಗೆ ಅಗತ್ಯ ಎಚ್ಚರಿಕೆ ಸಲಹೆಗಳನ್ನು ನೀಡಬೇಕು. ಆಗ ಸನ್ಮಾರ್ಗದಲ್ಲಿ ಸಾಗಿ, ಸಮಾಜಕ್ಕೆ ಮಾದರಿಯಾಗುವ ನಾಗರಿಕರಾಗಿ ಭವಿಷ್ಯದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾರೆ ಎಂದು ಸಲಹೆ ನೀಡಿದರು.

ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು, ವಿಧ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. 6 ವರ್ಷಗಳಲ್ಲಿ ಶಿಕ್ಷಣ ಸಂಸ್ಥೆಯಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಶಾಲೆಯ ಆವರಣದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಿರುವುದು ಪ್ರಮುಖವಾಗಿದೆ, ಇದು ಮಕ್ಕಳ ಬೋದನೆ ಮೇಲೆ ಸಕರಾತ್ಮಕ ಪರಿಣಾಮ ಬೀರುತ್ತದೆ. ಬರುವ ದಿನಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಿ, ನಾಡಿನ ಗಮನ ಸೆಳೆದು ಜಿಲ್ಲೆಯ ಕೀರ್ತಿ ಬೆಳಗಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಸಚಿವರು ಬಹುಮಾನ ನೀಡಿ, ಗೌರವಿಸಿದರು.

ಪ್ರಾಂಶುಪಾಲ ಪಿ. ಅರವಿಂದಾಕ್ಷಣ ಮಾತನಾಡಿ, 5 ವರ್ಷಗಳಲ್ಲಿ ಶಾಲೆಯಲ್ಲಿ ಕೈಗೊಂಡಿರುವ ಚಟುವಟಿಕೆಗಳನ್ನು ಹಾಗೂ ವಿದ್ಯಾರ್ಥಿಗಳ ಸಾಧನೆಗಳನ್ನು ವಿವರಿಸಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಧಾಕರರಡ್ಡಿ ಮಾಲಿ ಪಾಟೀಲ್ ಅನಪೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆಯ ಉದ್ದೇಶಗಳನ್ನು ತಿಳಿಸಿದರು.

ವೇದಿಕೆ ಮೇಲೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ, ವೆಂಕಟರಡ್ಡಿ ಪಾಟೀಲ್ ಉಪಸ್ಥಿತರಿದ್ದರು. ಶಿಕ್ಷಕಿ ಮಾಧವಿ ಸ್ವಾಗತಿಸಿ, ಅರವಿಂದರಡ್ಡಿ ವಂದಿಸಿದರು. ನಂತರ ಶಾಲೆಯ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.

Share this article