ಶಿಕ್ಷಕರ ವೃತ್ತಿ ವಿದ್ಯಾರ್ಥಿಗಳ ಭವಿಷ್ಯ ಕಟ್ಟುವ ಸತ್ಕಾರ್ಯ: ಬಿಇಒ ವಿ.ವಿ. ಸಾಲಿಮಠ

KannadaprabhaNewsNetwork |  
Published : Jun 10, 2025, 08:34 AM IST
ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಮಗ್ರ ಪರಿಚಯ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಮಾತನಾಡಿದರು. | Kannada Prabha

ಸಾರಾಂಶ

ಶಿಕ್ಷಕ ವೃತ್ತಿ ಪವಿತ್ರ ಗೌರವಾನ್ವಿತವಾಗಿದೆ. ಮಕ್ಕಳ ಭವಿಷ್ಯ ಕಟ್ಟುವ ಸತ್ಕಾರ್ಯವಾಗಿದೆ.

ಹಾನಗಲ್ಲ: ಕಾಲಾಂತರದಲ್ಲಿ ಬದಲಾದ ಶೈಕ್ಷಣಿಕ ವ್ಯವಸ್ಥೆ ಈಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯನ್ನು ಇಣುಕಿ ನೋಡುತ್ತಿದೆಯಲ್ಲದೆ, ಶೈಕ್ಷಣಿಕ ಕ್ಷೇತ್ರದಲ್ಲಿ ಕಪ್ಪು ಹಲಗೆ ಯೋಜನೆ ಕ್ರಾಂತಿಕಾರಕ ಅಭಿವೃದ್ಧಿ ತಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.ಸೋಮವಾರ ಗುರುಭವನದಲ್ಲಿ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಆಡಳಿತ ವ್ಯವಸ್ಥೆಯ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರ ಗೌರವಾನ್ವಿತವಾಗಿದೆ. ಮಕ್ಕಳ ಭವಿಷ್ಯ ಕಟ್ಟುವ ಸತ್ಕಾರ್ಯವಾಗಿದೆ. ಶಿಕ್ಷಕರಿಗೆ ಮೊದಲು ಮಾನವೀಯ ಅರ್ಹತೆ ಬೇಕು. ಅಂದಿನ ಗುರುಕುಲ ಶಿಕ್ಷಣದಲ್ಲಿ ಬದುಕಿನ ಎಲ್ಲ ಹಂತಗಳ ನಿರ್ವಹಣೆಯ ಜ್ಞಾನ ನೀಡಲಾಗುತ್ತಿತ್ತು. ಮಕ್ಕಳ ಕೌಶಲ್ಯವನ್ನು ವೃದ್ಧಿಗೊಳಿಸುವ, ಸದೃಢ ಸಮಾಜ ನಿರ್ಮಿಸುವ ಸಮಗ್ರ ಶಿಕ್ಷಣ ಇಲ್ಲಿಂದ ಸಾಧ್ಯ. ಶಿಕ್ಷಣ ಇಲಾಖೆ ಮಕ್ಕಳ ಭೌತಿಕ, ಬೌದ್ಧಿಕ ವಿಕಾಸಕ್ಕೆ ಎಲ್ಲ ಹಂತದ ಅರಿವು ಮೂಡಿಸಲಿದೆ. ಸೌಲಭ್ಯಗಳನ್ನು ನೀಡಿ ಸಮಸ್ಯೆಗಳನ್ನೂ ನಿವಾರಿಸುವ ಹೊಣೆಗಾರಿಕೆ ಇಲ್ಲಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರ ಪ್ರಾಚಾರ್ಯ ಡಾ. ರಾಘವೇಂದ್ರ ಮಾಡಳ್ಳಿ, ಬಿಇಡಿ ಅಧ್ಯಯನ ಎಂದರೆ ಅದು ಮಕ್ಕಳ ಬದುಕಿನ ಮಾರ್ಗದರ್ಶನಕ್ಕೆ ಬೇಕಾದ ಅಧ್ಯಯನವಾಗಿದೆ. ಶಿಕ್ಷಕನಾಗುವವರಿಗೆ ಇರಬೇಕಾದ ಅರ್ಹತೆಗಳ ಒಟ್ಟು ಮೊತ್ತದ ಜ್ಞಾನವೇ ಬಿಇಡಿ ಶಿಕ್ಷಣ. ನಾಳೆ ಶಿಕ್ಷಕ ವೃತ್ತಿ ಅರಸಿಕೊಂಡು ಹೋಗುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮೌಲ್ಯಗಳ ಅರಿವು ಅತ್ಯಂತ ಮುಖ್ಯವಾದುದು ಎಂದರು.ಆಶಯ ಮಾತುಗಳನ್ನಾಡಿದ ಸಹಾಯಕ ಪ್ರಾಧ್ಯಾಪಕ ಡಾ. ಜಿ.ವಿ. ಪ್ರಕಾಶ ಅವರು, ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಸೈದ್ಧಾಂತಿಕ ತರಬೇತಿ ಅತ್ಯವಶ್ಯಕ. ಶಿಕ್ಷಕರಾಗುವವರಿಗೆ ಸಮಾಜಮುಖಿ ಅರಿವು ಬೇಕು. ಶಿಕ್ಷಕ ವೃತ್ತಿ ಹಾಗೂ ಪ್ರವೃತ್ತಿಗೆ ಕೌಶಲ್ಯ ಅತ್ಯಶ್ಯಕ. ಜ್ಞಾನಾರ್ಜನೆಯೂ ಒಳಗೊಂಡು ನಾಳಿನ ಪೀಳಿಗೆಗೆ ವಿದ್ಯಾದಾನ ಮಾಡುವ ಹೊಣೆ ಹೊತ್ತ ಶಿಕ್ಷಕರು ಎಲ್ಲ ಕಾಲಕ್ಕೂ ಸಲ್ಲುವ ಮೌಲ್ಯಾಧಾರಿತ ಶಿಕ್ಷಕರಾಗಬೇಕು ಎಂದರು.ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಪ್ರಧಾನಮಂತ್ರಿ ಪೋಷಣ ಅಭಿಯಾನದ ಕಾರ್ಯಕ್ರಮಾಧಿಕಾರಿ ಶಿವಯ್ಯ ಹಿರೇಮಠ, ಸಹಾಯಕ ಪ್ರಾಧ್ಯಾಪಕ ಡಾ. ಪ್ರಕಾಶ ಹುಲ್ಲೂರ, ಶಂಭುಲಿಂಗಯ್ಯ ಹಿರೇಮಠ ಅತಿಥಿಗಳಾಗಿದ್ದರು. ಚಂದನಾ ಕಠಾರಿ, ದಿವ್ಯಾ ಸತಾರ್ ಪ್ರಾರ್ಥನೆ ಹಾಡಿದರು. ನಿಖಿತಾ ಬನ್ನೇ ಸ್ವಾಗತಿಸಿದರು. ಪವಿತ್ರಾ ಹೀರೂರ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ