ಕಾರ್ಕಳ: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಲಾಗಿರುವುದನ್ನು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಸ್ವಾಗತಿಸಿದ್ದಾರೆ.ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು , ‘ಘಟನೆ ಸಂಭವಿಸಿದ ದಿನದಿಂದಲೂ ಈ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ನಾವು ನಿರಂತರವಾಗಿ ಒತ್ತಾಯಿಸುತ್ತಿದ್ದೆವು. ಅಂತಹ ಸಂದರ್ಭದಲ್ಲಿಯೇ ಈ ನಿರ್ಧಾರ ನಮ್ಮ ಆಕ್ಷೇಪಗಳಿಗೆ ನ್ಯಾಯ ಒದಗಿಸುತ್ತದೆ’ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆಗಳನ್ನೂ ಅವರು ತೀವ್ರವಾಗಿ ಟೀಕಿಸಿ, ಸುಹಾಸ್ ಶೆಟ್ಟಿಯ ಮೇಲೆ ಆರೋಪಗಳ ಪಟ್ಟಿಯನ್ನೇ ಬಿಡುಗಡೆ ಮಾಡಿದ ಮುಖ್ಯಮಂತ್ರಿ, ಈ ಪ್ರಕರಣದಲ್ಲಿ ನ್ಯಾಯ ದೊರೆಯುವ ಬಗ್ಗೆ ಜನರಲ್ಲಿ ಸಂಶಯ ಹುಟ್ಟಿಸಿದರು ಎಂದರು.
ಅಂತಿಮವಾಗಿ, ಎನ್‌ಐಎ ತನಿಖೆಯ ಮೂಲಕ ನಿಜ ಹೇಳಿಕೆ ಹೊರಬೀಳುವ ವಿಶ್ವಾಸ ವ್ಯಕ್ತಪಡಿಸಿರುವ ಸುನಿಲ್ ಕುಮಾರ್, ಸುಹಾಸ್ ಶೆಟ್ಟಿಯ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಶಿಸಿದ್ದಾರೆ.