ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಕ್ಕಳ ತಲೆಯಲ್ಲಿ ಕೇವಲ ವಿಷಯಗಳನ್ನು ತುಂಬದೇ ಅದರ ಜೊತೆಗೆ ಈ ದೇಶದ ಪರಂಪರೆ, ಸಂಸ್ಕೃತಿಯ ಪಾಠ ಕಲಿಸುವುದು ಮುಖ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.ನವನಗರದ ಕಲಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ ಉಪನಿರ್ದೇಶಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಿಲ್ಲಾಮಟ್ಟದ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕೆ ಏನಾದರೂ ಭವಿಷ್ಯವಿದೆ ಎಂದರೇ ಶಿಕ್ಷಣದಿಂದ ಸಾಧ್ಯ. ಆ ಶಿಕ್ಷಣದ ಜೊತೆಗೆ ಸಂಸ್ಕಾರವು ಮುಖ್ಯವಾಗಿದೆ ಎಂದರು.ಜೀವನದಲ್ಲಿ ತಮ್ಮ ಕಾಲ ಮೇಲೆ ನಿಲ್ಲಬೇಕಾದಲ್ಲಿ ಶಿಕ್ಷಣ ಬೇಕು. ಆದರೆ, ಇದರ ಜೊತೆಗೆ ಸಂಸ್ಕಾರವನ್ನು ಕಲಿಸಿಕೊಡಬೇಕು. ಹಿಂದೆ ಶಿಕ್ಷಕರೆಂದರೆ ಬಹಳಷ್ಟು ಗೌರವ, ಭಕ್ತಿಭಾವನೆ ಇತ್ತು. ಶಾಲೆಯಲ್ಲಿ ಕಲಿತಂತಹ ಶಿಕ್ಷಣ ಕೊನೆಯವರೆಗೂ ಇರುತ್ತಿತ್ತು. ಶಿಕ್ಷಕರು ಒಳ್ಳೆಯದನ್ನು ಕಲಿಸಿದ್ದು, ಇವತ್ತಿಗೂ ಬರುತ್ತದೆ. ಶಾಲೆಗೆ ದಾಖಲಾತಿಗಾಗಿ ಮಾಡಿಕೊಳ್ಳಲು ಹೋದರೆ ಮಗು ಎಷ್ಟು ಅಂಕ ಪಡೆದಿದೆ. ಇದರ ಜೊತೆಗೆ ತಂದೆ-ತಾಯಿ ಸಂದರ್ಶನ ಮಾಡುವ ಸ್ಥಿತಿ ಒದಗಿ ಬಂದಿದೆ. ಈ ಪದ್ಧತಿ ನಿಲ್ಲಬೇಕು. ಸರ್ಕಾರಿ ಶಾಲೆಯಲ್ಲಿಯೇ ಓದಬೇಕು. ನಾವೆಲ್ಲರೂ ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಸ್ಥಾನ ಪಡೆದುಕೊಂಡಿರುವುದಾಗಿ ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರಿ ಮಾತನಾಡಿ, ಮತ್ತೊಬ್ಬರ ಭವಿಷ್ಯಕ್ಕಾಗಿ ದುಡಿಯುವ ವ್ಯಕ್ತಿತ್ವ ಪ್ರವೃತ್ತಿಯಿಂದ ಬರುವಂತಹದ್ದು. ಹಿಂದಿನ ಕಾಲದಲ್ಲಿ ಜೀವನಕ್ಕೆ ಬೇಕಾಗುವಷ್ಟು ಶಿಕ್ಷಣ ಪಡೆಯಬೇಕೆಂಬುವುದಾಗಿತ್ತು. ನಾಡ, ದೇಶ ಕಟ್ಟುವ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಇಂದು ಸಂಸ್ಕಾರಯುತ ಶಿಕ್ಷಣ ಅವಶ್ಯವಾಗಿದೆ ಎಂದರು.
ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾವು ಪಡೆದ ಶಿಕ್ಷಣ ನೀತಿ, ಈ ಹಿಂದೆ ಇರುವ ಶಿಕ್ಷಣ ನೀತಿಗೆ ಬಹಳ ವ್ಯತ್ಯಾಸವಿದ್ದು, ಇಂದಿನ ವಿದ್ಯಾರ್ಥಿಗಳ ಪಠ್ಯಕ್ಕೆ ಉತ್ತರ ನೀಡುವಷ್ಟು ತಿಳಿವಳಿಕೆ ನಮಗಿಲ್ಲವಂತಾಗಿದೆ. ಅಷ್ಟೊಂದು ಶಿಕ್ಷಣ ಕ್ಷೇತ್ರ ಬೆಳೆದಿದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ, ಒಂದು ತಲೆಮಾರು ರೂಪಿಸುವ ವೃತ್ತಿ ಶಿಕ್ಷಕ ವೃತ್ತಿಯಾಗಿದ್ದು, ಪ್ರತಿಯೊಬ್ಬ ಸಾಧಕರ ಹಿಂದೆ ಒಬ್ಬ ಗುರು, ಮಾರ್ಗದರ್ಶನ ಇದ್ದೇ ಇರುತ್ತಾರೆ. ಗುರುವಿನ ನೆರವು ಇಲ್ಲದೇ ಸಾಧನೆ ಸಾಧ್ಯವಿಲ್ಲ. ವಿದ್ಯೆ ಬದುಕಿನ ಪಾಠ ಕಲಿಸುತ್ತದೆ. ಇಂತಹ ಆದರ್ಶ ಪ್ರವೃತ್ತಿ ಮುಂದುವರಿಯಬೇಕಿದೆ ಎಂದರು.ಜಿಲ್ಲಾ ಪಂಚಾಯತಿ ಸಿಇಒ ಶಶಿಧರ ಕುರೇರ ಮಾತನಾಡಿದರು. ಉಪನ್ಯಾಸಕರಾಗಿ ಆಗಮಿಸಿದ್ದ ಹುಬ್ಬಳ್ಳಿ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಮಾತನಾಡಿದರು.
ಉತ್ತಮ ಶಿಕ್ಷಕರಿಗೆ ಜಿಲ್ಲಾಮಟ್ಟದ ಪಶಸ್ತಿ:
ಜಿಲ್ಲಾಮಟ್ಟದ ಪ್ರಶಸ್ತಿಗೆ ಆಯ್ಕೆಗೊಂಡ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರನ್ನು ಪ್ರಶಸ್ತಿ ನೀಡಿ ಗೌರಿಸಲಾಯಿತು. ಪ್ರಾಥಮಿಕ ವಿಭಾಗದಲ್ಲಿ ಲಕ್ಕಪ್ಪ ಹಳ್ಳಿ, ಅಬ್ದುಲ್ ನದಾಪ್, ಜಯಪ್ರಕಾಶ ಆನೂರ, ಎಸ್.ಆರ್.ಮೇಟಿ, ಬಿ.ವಿ.ಗಣಾಚಾರಿ, ಎಸ್.ಎಚ್.ಮುದಕವಿ, ಎ.ಜೆ.ಸೌದಾಗಾರ, ಮದಿನಾ ಪೀರಜಾದೆ, ದೀಪಾ ಗೋಟೂರ, ಸಂತೋಷ ರಾಮದುರ್ಗ, ರಾಮಪ್ಪ ತಳವಾರ, ಶಿವಲಿಂಗಪ್ಪ ಜುಟ್ಟನಟ್ಟಿ, ಪ್ರೌಢಶಾಲಾ ವಿಭಾಗದಲ್ಲಿ ಕೆ.ಬಿ.ಕಟ್ಟಿಪ್ಪನವರ, ಎ.ಎಂಪಲ್ಲೇದ, ಸಂಗಪ್ಪ ಕರಿಸೈಯಪ್ಪನವರ, ಮಹಾಂತೇಶ ಮಾವಿನಕಾಯಿ, ಡಿ.ಬಿ.ಕಟ್ಟಿ, ರೇಷ್ಮಾ ಕಲಹಾಳ, ವಿಶೇಷ ಪ್ರಾಥಮಿಕ ವಿಭಾಗದಲ್ಲಿ ವೈ.ಎಂ.ಮಂಗಳಗೌರಿ, ಎಸ್.ಡಿ.ಯಲಿಗೋಡ, ಎನ್.ಬಿ.ಮೈಸೂರ, ರಮೇಶ ದೇಸಾಯಿ, ಜೆ.ಎಂ.ಕುಂಬಾರ, ಆರ್.ಎಸ್.ಝಳಕಿ, ರೇಷ್ಮಾ ಗೋರಿ, ವಿಶೇಷ ಪ್ರೌಢಶಾಲಾ ವಿಭಾಗದಲ್ಲಿ ಶ್ರೀಧರ ಗೌಡರ, ಶೋಭಾ ಮುಂಡೆವಾಡಿ, ಬಿ.ಎಸ್.ಮದಿನವರ, ಮೈನುದ್ದಿನ್ ಪೆಂಡಾರಿ, ವಿಜಯಕುಮಾರ ಜಮಖಂಡಿ, ವಿಜಯಲತಾ ಮಬ್ರೂಮಕರ, ಬಿ.ಎಸ್.ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರನ್ನು ಸಹ ಸನ್ಮಾನಿಸಲಾಯಿತು.