ಕನ್ನಡಪ್ರಭ ವಾರ್ತೆ ರಾಮನಗರ
ಬಿಡದಿ ಸಮೀಪದ ಬೈರಮಂಗಲ ಕ್ರಾಸ್ ಬಳಿಯ ಕೆಪಿಸಿಎಲ್ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಐವರು ಕಾರ್ಮಿಕರು ಗಾಯಗೊಂಡ ಹಿನ್ನೆಲೆಯಲ್ಲಿ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ತ್ಯಾಜ್ಯ ಉತ್ಪಾದನಾ ಘಟಕದಲ್ಲಿ ಅವಘಡ ಸಂಭವಿಸಿರುವುದು ವಿಷಾದನೀಯ. ಕಾರ್ಮಿಕರು ಬಾಯ್ಲರ್ ಆಪರೇಟ್ ಮಾಡುವ ಹಾಗಿಲ್ಲ. ಆದರೆ, ಏಕೆ ಮಾಡಿದರೆಂದು ಗೊತ್ತಿಲ್ಲ. ಈ ಬಗ್ಗೆ ತಂಡ ರಚಿಸಿ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ. ತನಿಖಾ ವರದಿ ಬಂದ ಮೇಲೆ ನಿರ್ಲಕ್ಷ್ಯ ತೋರಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದರು.ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಉಷ್ಣ ವಿದ್ಯುತ್ ಸ್ಥಾವರದ ಬಾಯ್ಲರ್ ಅನ್ನು ತಾಂತ್ರಿಕ ಪರಿಣತರಿಲ್ಲದೇ ತೆರೆದ ಕಾರಣ ಬೆಂಕಿ ಹಾಗೂ ಬಿಸಿ ಬೂದಿ ಅಲ್ಲಿದ್ದ ಕಾರ್ಮಿಕರ ಮೇಲೆ ಏಕಾಏಕಿ ಚಿಮ್ಮಿದೆ. ಇದರಿಂದಾಗಿ ಇಂತಹ ಅನಾಹುತ ಸಂಭವಿಸಿದೆ ಎಂದು ತಿಳಿಸಿದರು.
ಘಟಕ ಉದ್ಘಾಟನೆಗೂ ಮುನ್ನವೇ ಅವಘಡ ಸಂಭವಿಸಿದೆ. ಹಾಗಾಗಿ ಎಲ್ಲವನ್ನೂ ಸರಿಪಡಿಸಿಕೊಂಡು ಉದ್ಘಾಟನೆ ಮಾಡುತ್ತೇವೆ. ಇಲ್ಲಿ ಕೇವಲ ವಿದ್ಯುತ್ ಉತ್ಪಾದನೆ ಮಾಡುವುದಷ್ಟೇ ನಮ್ಮ ಗುರಿ ಅಲ್ಲ. ಬೆಂಗಳೂರಿನ ಕಸದ ಸಮಸ್ಯೆ ನಿರ್ವಹಣೆಗೆ ಈ ಘಟಕ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಕಾರ್ಮಿಕರಿಂದ ಗುತ್ತಿಗೆದಾರರು ಕಮಿಷನ್ ಪಡೆಯುತ್ತಿದ್ದಾರೆ ಎಂಬ ಪ್ರಶ್ನೆಗೆ, ಹೊರ ಗುತ್ತಿಗೆ ಆಧಾರದ ಮೇಲೆ ನಮಗೆ ಕಾರ್ಮಿಕರನ್ನು ಅವರು ಕೊಡುತ್ತಾರೆ. ಏಜೆನ್ಸಿಗೆ ನಾವು ಹಣ ಕೊಡುತ್ತೇವೆ. ಕಾರ್ಮಿಕರಿಂದ ಅವರು ಏಕೆ ಹಣ ವಸೂಲಿ ಮಾಡುತ್ತಾರೋ ಗೊತ್ತಿಲ್ಲ. ಈ ರೀತಿ ಮಾಡಬಾರದು. ಇದರ ಬಗ್ಗೆ ವಿಚಾರಿಸಿ ಕ್ರಮ ವಹಿಸುತ್ತೇನೆ ಎಂದು ಕೆ.ಜೆ.ಜಾರ್ಜ್ ಹೇಳಿದರು.
ರಾಜಕೀಯ ಕಾರಣಕ್ಕಾಗಿ ವಿಪಕ್ಷಗಳಿಂದ ಕಮಿಷನ್ ಆರೋಪ:
ಆದರೀಗ ರಾಜಕೀಯ ಕಾರಣಕ್ಕಾಗಿ ವಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ 60 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಿವೆ ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ಟೀಕಿಸಿದರು.
ಡಿನ್ನರ್ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡಿದ ಸಚಿವರು, ಏಕೆ ಡಿನ್ನರ್ ಕೊಡಬಾರಾದ. ಅದು ಅವರ ವೈಯಕ್ತಿಕ ವಿಚಾರ.
ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಡಿಸಿಎಂ ಇಲ್ಲ ಅಂತ ಊಟಕ್ಕೆ ಕರೆಯಬಾರಾದ. ಡಿಸಿಎಂ ಇದ್ದಾಗಲೂ ಊಟಕ್ಕೆ ಕರೆದಿದ್ದೇವೆ.
ಈ ಬಗ್ಗೆ ಡಿಸಿಎಂ ಕಂಪ್ಲೇಂಟ್ ಮಾಡಿದ್ದಾರಾ ಎಂದು ಪ್ರಶ್ನಿಸಿದರು.ಕೆಪಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಹೈಕಮಾಂಡ್, ಬದಲಾವಣೆ ಮಾಡುವುದು ಕೂಡ ಹೈಕಮಾಂಡ್. ಈ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಇನ್ನು ಸಂಕ್ರಾಂತಿ ವೇಳೆಗೆ ಸಂಪುಟ ವಿಸ್ತರಣೆ ತೀರ್ಮಾನವನ್ನು ಮುಖ್ಯಮಂತ್ರಿ ಹಾಗೂ ವರಿಷ್ಠರು ಮಾಡುತ್ತಾರೆ ಎಂದು ಕೆ.ಜೆ.ಜಾರ್ಜ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.