ಹೆದ್ದಾರಿ ಬದಿ ಕಸ ಎಸೆಯುವವರ ಮೇಲೆ ನಿಗಾ ವಹಿಸಲು ತಂಡ ರಚನೆ

KannadaprabhaNewsNetwork |  
Published : May 13, 2025, 11:49 PM IST
ಹೆದ್ದಾರಿ ಬದಿ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟುವ ಸಲುವಾಗಿ ಸಭೆ ನಡೆಯಿತು. | Kannada Prabha

ಸಾರಾಂಶ

ದ.ಕ ಜಿಲ್ಲಾ ಪಂಚಾಯ್ತಿ ಮಿನಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 73ರ ಇಕ್ಕೆಲಗಳಲ್ಲಿ ತ್ಯಾಜ್ಯ ಬೀಳುವುದನ್ನು ನಿಯಂತ್ರಿಸುವ ಸಲುವಾಗಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಜಿಲ್ಲೆಯ ರಾಜ್ಯ ಮತ್ತು ಗ್ರಾಮೀಣ ಭಾಗದ ರಸ್ತೆ ಬದಿ ತ್ಯಾಜ್ಯ ಎಸೆಯುವುದನ್ನು ತಡೆಯುವ ಸಲುವಾಗಿ “ಸ್ವಚ್ಛತೆಗಾಗಿ ನಿಮ್ಮೊಂದಿಗೆ ನಾವು; ನಮ್ಮೊಂದಿಗೆ ನೀವು” ಅಭಿಯಾನವನ್ನು ಯಶ್ವಸ್ವಿಯಾಗಿ ಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಯಲಕ್ಷ್ಮೀ ರಾಯಕೊಡ ಸೂಚಿಸಿದ್ದಾರೆ.

ದ.ಕ ಜಿಲ್ಲಾ ಪಂಚಾಯ್ತಿ ಮಿನಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 73ರ ಇಕ್ಕೆಲಗಳಲ್ಲಿ ತ್ಯಾಜ್ಯ ಬೀಳುವುದನ್ನು ನಿಯಂತ್ರಿಸುವ ಸಲುವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ 73ರ ಇಕ್ಕೆಲಗಳಲ್ಲಿ ತ್ಯಾಜ್ಯ ಬೀಳುವುದನ್ನು ತಡೆಗಟ್ಟಲು ಮೊದಲನೆಯದಾಗಿ ಮಂಗಳೂರು ತಾಲೂಕಿನ ಅಡ್ಯಾರ್, ಬಂಟ್ವಾಳ ತಾಲೂಕಿನ ತುಂಬೆ, ಪುದು ಹಾಗೂ ಕಳ್ಳಿಗೆ ಗ್ರಾಮ ಪಂಚಾಯ್ತಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಬೀಳುವ ತ್ಯಾಜ್ಯ ತಡೆಗಟ್ಟಲು ಗಸ್ತು ಪಡೆ ಹಾಗೂ ಬ್ಲಾಕ್ ಸ್ಪಾಟ್‍ಗಳಲ್ಲಿ ನಿಲ್ಲಲು 5 ಜನರ ತಂಡ ರಚಿಸಲು ಸಿದ್ಧತೆ ನಡೆಸಲಾಗಿದೆ. ಬ್ಲಾಕ್ ಸ್ಪಾಟ್‍ನಲ್ಲಿ ನಿಲ್ಲಲು ಪರಿಸರ ಮತ್ತು ಸ್ವಚ್ಛತೆ ವಿಷಯದಲ್ಲಿ ಕಾಳಜಿ ಇರುವವರು ಭಾಗವಹಿಸಬಹುದು. ಈ ಅಭಿಯಾನವು 3 ತಿಂಗಳಿನವರೆಗೆ ನಡೆಯಲಿದ್ದು, ತ್ಯಾಜ್ಯ ಬಿಸಾಡುವವರ ಮೇಲೆ ನಿಗಾ ವಹಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಬಂಟ್ವಾಳ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಸಚಿನ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳ ಕಸ ನಿರ್ವಹಣೆಗೆ ತೊಡಗುವ ಮೊದಲು ವಾಣಿಜ್ಯ ಮಳಿಗೆಗಳಲ್ಲಿ ಹಾಗೂ ಪ್ರತಿ ಮನೆಗಳಲ್ಲಿ ಕಸ ವಿಂಗಡಿಸಿ ಕೊಡುವಂತೆ ಕ್ರಮ ವಹಿಸಬೇಕಿದೆ. ಮನೆಗಳಿಂದ ಶೇ.100ರಷ್ಟು ಸರಿಯಾದ ಕ್ರಮದಲ್ಲಿ ತ್ಯಾಜ್ಯ ಸಂಗ್ರಹ ಆದರೆ ಮಾತ್ರ ರಸ್ತೆ ಬದಿಗಳಲ್ಲಿ ಕಸ ಬೀಳುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ ಎಂದರು.

ಮಂಗಳೂರು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಮಾತನಾಡಿ, ರಸ್ತೆ ಬದಿಯಲ್ಲಿ ಕಸ ಬೀಳುವ ಪ್ರದೇಶಗಳನ್ನು ಗುರುತಿಸಿ ಅದರ ಮೇಲೆ ನಿಗಾ ವಹಿಸಬೇಕಿದೆ. ಕಸ ಎಸೆಯುವವರ ಮೇಲೆ ಕ್ರಮ ಜರುಗಿಸಬೇಕು ಎಂದರು.

ಕಳ್ಳಿಗೆ ಪಂಚಾಯ್ತಿ ಅಧ್ಯಕ್ಷ ಪುರುಷೋತ್ತಮ, ಅಡ್ಯಾರ್ ಪಂಚಾಯ್ತಿ ಅಧ್ಯಕ್ಷ ಅಬ್ದುಲ್ ಜಲೀಲ್, ತುಂಬೆ ಪಂಚಾಯ್ತಿ ಉಪಾಧ್ಯಕ್ಷ ಗಣೇಶ್, ಹಸಿರು ದಳದ ನಾಗರಾಜ್ ಆರ್. ಅಂಚನ್, ಜಿಲ್ಲಾ ಸ್ವಚ್ಛ ಭಾರತ್ ಮಿಷನ್ (ಗ್ರಾ) ಸಮಾಲೋಚಕರು ಇದ್ದರು.

-------------------ಸ್ವಯಂ ಸೇವಕರ ನಿಗಾ

ಕಸ ಬೀಳುವ ಪ್ರದೇಶಗಳನ್ನು ಗುರುತಿಸಿ ಆ ಪ್ರದೇಶದಲ್ಲಿ ಬೆಳಗ್ಗೆ 5ರಿಂದ 8 ಗಂಟೆವರಗೆ ಹಾಗೂ ಸಂಜೆ 6ರಿಂದ 9 ಗಂಟೆವರೆಗೆ ಪರಿಸರ ಮತ್ತು ಸ್ವಚ್ಛತೆಯಲ್ಲಿ ಆಸಕ್ತಿ ಇರುವ 5 ಜನ ಸ್ವಯಂ ಸೇವಕರನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವೇಳೆ ತ್ಯಾಜ್ಯ ಬಿಸಾಡುವರನ್ನು ಗುರುತಿಸಿ ಅವರಿಗೆ ಮನವರಿಕೆ ಮಾಡಲು ಉದ್ದೇಶಿಸಿದೆ. ಅಲ್ಲದೆ ಸ್ವಚ್ಛತೆ ಜಾಗೃತಿ ಮೂಡಿಸುವ ಸಲುವಾಗಿ ವಾಹನದಲ್ಲಿ ಮೈಕ್ ಮೂಲಕ ವ್ಯಾಪಕ ಪ್ರಚಾರ, ತ್ಯಾಜ್ಯ ಬೀಳುವುದನ್ನು ತಡೆಹಿಡಿಯಲು ಗಸ್ತು ಪಡೆ ರಚಿಸಲು ದ.ಕ. ಜಿಲ್ಲಾ ಸ್ವಚ್ಛ ಭಾರತ್ ಮಿಷನ್ (ಗ್ರಾ) ಸಿದ್ಧತೆ ನಡೆಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!