ಹಿಂದೂ ಕಾರ್ಯಕರ್ತರ ರಕ್ಷಣೆಗೆ ವಕೀಲರ ತಂಡ ರಚನೆ: ವಿಜಯೇಂದ್ರ

KannadaprabhaNewsNetwork |  
Published : Apr 11, 2025, 12:35 AM IST
೩೨ | Kannada Prabha

ಸಾರಾಂಶ

ಬಿಜೆಪಿ ಕಾರ್ಯಕರ್ತರಿಗೆ ಜಾಮೀನು, ಸಹಾಯ, ನ್ಯಾಯ ನೀಡುವುದಕ್ಕಾಗಿ ಹಿರಿಯ ವಕೀಲರ ತಂಡ ನೇಮಿಸಲಾಗಿದೆ. ಅವರು ದಿನದ 24 ಗಂಟೆಯೂ ಕಾರ್ಯಕರ್ತರಿಗೆ ಲಭ್ಯರಿದ್ದು ಕಾನೂನು ಸೇವೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಲ್ಪೆ

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಸರ್ಕಾರದಿಂದ ಗೂಂಡಾಗಿರಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ಟೀಕಿಸಿದರೂ ಕೇಸು ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಜಾಮೀನು, ಸಹಾಯ, ನ್ಯಾಯ ನೀಡುವುದಕ್ಕಾಗಿ ಹಿರಿಯ ವಕೀಲರ ತಂಡ ನೇಮಿಸಲಾಗಿದೆ. ಅವರು ದಿನದ 24 ಗಂಟೆಯೂ ಕಾರ್ಯಕರ್ತರಿಗೆ ಲಭ್ಯರಿದ್ದು ಕಾನೂನು ಸೇವೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಚಹಾಕೂಟದಲ್ಲಿ ಅವರು ಮಾತನಾಡಿದರು.

ಬಿಜೆಪಿ ಯಾವತ್ತೂ ಮುಸ್ಲೀಂ ವಿರೋಧಿ ಪಕ್ಷವಲ್ಲ, ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧಿಸಿ, ಹಿಂದೂ ಹೆಣ್ಣುಮಕ್ಕಳಂತೆ ಮುಸ್ಲಿಂ ಹೆಣ್ಣುಮಕ್ಕಳಿಗೂ ಸ್ವಾತಂತ್ರ್ಯ, ನ್ಯಾಯ ದೊರಕಿಸಿ ಕೊಟ್ಟದ್ದು ಬಿಜೆಪಿ. ಆದರೆ ವಿಧಾನಸೌಧದ ಮೆಟ್ಟಲಲ್ಲಿ ಪಾಕಿಸ್ತಾನ್‌ ಜಿಂದಾಬಾದ್ ಎನ್ನುವ, ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಮುತ್ತಿಕ್ಕುವ ಮುಸ್ಲೀಮರನ್ನು ಬಿಜೆಪಿ ವಿರೋಧಿಸುತ್ತದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆರೋಪಗಳು ಇದ್ದೇ ಇರ್ತವೆ !

ಆರೋಪಗಳು ಇದ್ದೇ ಇರ್ತವೆ, ನನ್ನ ಮೇಲೂ ಇವೆ, ಯಡಿಯೂರಪ್ಪ ಅವರ ಮೇಲೆ 32 ಕೇಸುಗಳಿದ್ದವು. ಅವರು ಬಹಳ ಪ್ರಬಲ ಶಕ್ತಿಯಾಗಿದ್ದರು. ಕೇಸು ಹಾಕಿ ಅವರನ್ನು ದುರ್ಬಲಗೊಳಿಸುವುದಕ್ಕೆ ಪ್ರಯತ್ನಿಸಿದರು, ಅವೆಲ್ಲವೂ ಖುಲಾಸೆಯಾಗುತ್ತದೆ ಎಂದರು.

ಕಾಂಗ್ರೆಸೇ ಅಜೆಂಡಾ ನೀಡಿದೆ:

2028ರ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿಗೆ ಸಾಕಷ್ಟುಅಜೆಂಡಾಗಳನ್ನು ಕಾಂಗ್ರೆರ್ ಸರ್ಕಾರ ಈಗಾಗಲೇ ನೀಡಿದೆ. ಈಗ ಬಿಜೆಪಿ ಜನರಲ್ಲಿ ಸಕಾರಾತ್ಮಕ, ಭರವಸೆ ಮೂಡಿಸುವ ಕೆಲಸ ಮಾಡುತ್ತಿದೆ, ಇದು ಸಾಧ್ಯವಾಗುವ ವಿಶ್ವಾಸವೂಇದೆ. ಈಗ ಬಿಜೆಪಿ ಸ್ಫಷ್ಟ ಬಹುಮತ ಇಲ್ಲ ಎಂಬುದು ಎಷ್ಟು ಸ್ಪಷ್ಟವೋ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುತ್ತದೆ ಎಂಬುದೂ ಅಷ್ಟೇ ಸ್ಪಷ್ಟವಾಗಿದೆ ಎಂದರು.

ಬಿಜೆಪಿಯಲ್ಲೀಗ ಭಿನ್ನಮತ ಇಲ್ಲ:

ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮತದಾರರು ಸಿದ್ಧರಿದ್ದಾರೆ. ಆದರೆ ನಾವು ಪಕ್ಷದ ನಾಯಕರು ಒಗ್ಗಟ್ಟಾಗಿ ಮತದಾರರ ಮುಂದೆ ಹೋಗಬೇಕಾಗಿದೆ. ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಬೇಕಾಗಿದೆ ಎಂದ ರಾಜ್ಯಾಧ್ಯಕ್ಷರು, ಪಕ್ಷದಲ್ಲಿ ಈಗ ಭಿನ್ನಮತ ಇಲ್ಲ, ಕಳೆದ ಮೂರು ವಾರಗಳಿಂದ ಪಕ್ಷದಲ್ಲಿ ಯಾರಾದರೂ ಭಿನ್ನಮತ ಹೇಳಿಕೆ ನೀಡುವುದನ್ನು ಕೇಳಿದ್ದೀರಾ ಎಂದು ಪತ್ರಕರ್ತರ ಪ್ರಶ್ನೆಗೆ ಮರುಪ್ರಶ್ನಿಸಿದರು.

ಮೋದಿ ಒಬ್ಬ ವ್ಯಕ್ತಿಯಲ್ಲ, ಶಕ್ತಿ:

ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಹೇಳುವ ಬಿಜೆಪಿ ನಾಯಕರು ಮೋದಿಯನ್ನು ಪೂಜಿಸುವ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಮೋದಿ ಅವರು ಕೇವಲ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಜಗತ್ತಿನಾದ್ಯಂತ ಭಾರತಕ್ಕೆ ರತ್ನಗಂಬಳಿ ಹಾಸುವಂತೆ ಮಾಡಿದ್ದು ಮೋದಿ, ಆದ್ದರಿಂದ ಪಕ್ಷಕ್ಕೆ ಅವರ ಮೇಲೆ ಬಹಳ ಗೌರವ ಇದೆ ಎಂದರು.

ರಾಜ್ಯ ಭ್ರಷ್ಟಾಚಾರದಲ್ಲಿ ನಂ. 1:

ಬಿಜೆಪಿ ಆಡಳಿತಾವಧಿಯಲ್ಲಿ ಕರ್ನಾಟಕ ಅಭಿವೃದ್ಧಿಯಲ್ಲಿ ಗುಜರಾತ್ ನಂತರ, 2ನೇ ಸ್ಥಾನದಲ್ಲಿತ್ತು. ಈಗ ಕರ್ನಾಟಕ ಭ್ರಷ್ಟಾಚಾರದಲ್ಲಿ ದೇಶದಲ್ಲಿ ನಂ.1 ಸ್ಥಾನದಲ್ಲಿದೆ ಎಂದು ಸ್ವತಃ ಸಿಎಂ ಅವರ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ರಾಜ್ಯದಲ್ಲಿ ಪೂರಕ ವ್ಯವಸ್ಥೆ ಇಲ್ಲದೇ ಅನೇಕ ಕಂಪನಿಗಳು ತಮಿಳುನಾಡಿಗೆ, ಮಹಾರಾಷ್ಟ್ರಕ್ಕೆ ಹೋಗುತ್ತಿವೆ ಎಂದು ವಿಜಯೇಂದ್ರ ಹೇಳಿದರು.

ಶಾಸಕರಾದ ಯಶ್‌ಪಾಲ್ ಸುವರ್ಣ, ಹರೀಶ್ ಪೂಂಜಾ, ಬಿಜೆಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಇದ್ದರು.

...................ಸೋಮಶೇಖರ್ - ಹೆಬ್ಬಾರ್ ಮೇಲೂ ಕ್ರಮ ?ಯತ್ನಾಳ್‌ ಉಚ್ಛಾಟನೆಯಿಂದ ಪಕ್ಷಕ್ಕೆ ನಷ್ಟವಾಗಿದೆ ಎಂದು ಒಪ್ಪಿಕೊಂಡ ರಾಜ್ಯಾಧ್ಯಕ್ಷರು, ಆದರೆ ಯತ್ನಾಳ್‌ ತಮ್ಮ ಬುದ್ಧಿಯನ್ನು ಬೇರೆಯವರ ಕೈಗೆ ಕೊಟ್ಟು, ನಾಲಗೆ ಮೇಲೆ ಹಿಡಿತ ಇಲ್ಲದೇ ಸೋತರು. ಅದೇ ರೀತಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್‌ ಅವರಿಗೂ ಈಗಾಗಲೇ ನೋಟೀಸು ನೀಡಲಾಗಿದೆ. ಒಂದು ವಾರದಲ್ಲಿ ಅವರ ಮೇಲೂ ಕ್ರಮ ಆಗಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''