ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕೆ.ಬಾಡಗ, ನಾಲ್ಕೇರಿ ಹಾಗೂ ಪಾಲಿಬೆಟ್ಟ ಗ್ರಾಮ ಪಂಚಾಯಿತಿಗಳಿಗೆ ರಾಜ್ಯ 5 ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ.ಸಿ.ನಾರಾಯಣಸ್ವಾಮಿ ಅವರು ಮಂಗಳವಾರ ಭೇಟಿ ನೀಡಿ ಚುನಾಯಿತ ಸದಸ್ಯರುಗಳ ಸಮಾಲೋಚನೆ ಸಭೆಯ ಅಧಕ್ಷತೆ ವಹಿಸಿ ಮಾತನಾಡಿದರು.ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪವಾಗಿ ಬಳಸಿಕೊಂಡು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಶ್ರಮಿಸಿ ಎಂದು ಡಾ.ಸಿ.ನಾರಾಯಣಸ್ವಾಮಿ ಅವರು ತಿಳಿಸಿದರು.
ಕೆ.ಬಾಡಗ ಹಾಗೂ ನಾಲ್ಕೇರಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಾಡಿಗಳಿದ್ದು, ಇಲ್ಲಿನ ಜನರ ಜೀವನ ಮಟ್ಟ ಸುಧಾರಿಸುವಲ್ಲಿ ಕ್ರಮವಹಿಸಿ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.ಕೆ.ಬಾಡಗ ಗ್ರಾ.ಪಂ.ಅಧ್ಯಕ್ಷರಾದ ರಿತೇಶ್ ಬಿದ್ದಪ್ಪ ಅವರು ಮಾತನಾಡಿ, ಚಿಕ್ಕ ಗ್ರಾಮ ಪಂಚಾಯಿತಿಯಾದರೂ ಸಹ ಸರ್ಕಾರದ ವಿವಿಧ ಯೋಜನೆಗಳ ಅನುದಾನವನ್ನು ಉತ್ತಮವಾಗಿ ಬಳಸಿಕೊಂಡು ಅಭಿವೃದ್ಧಿಯನ್ನು ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಹಾಯಕ ನಿರ್ದೇಶಕರಾದ (ಗ್ರಾ.ಉ) ಎಂ.ಡಿ.ಶ್ರೀನಿವಾಸ್ ಅವರು ಮಾತನಾಡಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ತೋಡು ಅಭಿವೃದ್ಧಿ, ಕೆರೆ ಅಭಿವೃದ್ಧಿ, ಕಾಂಕ್ರೀಟ್ ರಸ್ತೆ ಹಾಗೂ ಹಲವು ವೈಯಕ್ತಿಕ ಸೌಲಭ್ಯಗಳನ್ನು ನೀಡುವಲ್ಲಿ ಉತ್ತಮವಾಗಿ ಪ್ರಗತಿ ಸಾಧಿಸಿ, ವಿರಾಜಪೇಟೆ ತಾಲೂಕಿನಲ್ಲಿ ಅತೀ ಹೆಚ್ಚು ಮನೆಗಳನ್ನು ಸೃಜಿಸಿದ ಗ್ರಾಮ ಪಂಚಾಯಿತಿಯಾಗಿದ್ದು, 2024-25 ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನೀಡುವ ಉತ್ತಮ ಗ್ರಾಮ ಪಂಚಾಯಿತಿ ರಾಜ್ಯ ಪ್ರಶಸ್ತಿ ಕೆ.ಬಾಡಗ ಗ್ರಾಮ ಪಂಚಾಯಿತಿಗೆ ಲಭಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.ಸರ್ಕಾರದಿಂದ ಬಿಡುಗಡೆಯಾದ 15 ನೇ ಹಣಕಾಸಿನ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು. ಜಲಜೀವನ್ ಮಿಷನ್, ಸ್ವಚ್ಛ ಬಾರತ್ ಮಿಷನ್, ವಸತಿ ಹಾಗೂ ವಿವಿಧ ಯೋಜನೆಗಳ ಕುರಿತು ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಕೆ.ಬಾಡಗ ಹಾಗೂ ನಾಲ್ಕೇರಿ ಗ್ರಾ.ಪಂ.ಅಧ್ಯಕ್ಷರುಗಳಾದ ರಿತೇಶ್ ಬಿದ್ದಪ್ಪ, ಸೋಮಯ್ಯ, ರಾಜ್ಯ 5 ನೇ ಹಣಕಾಸು ಆಯೋಗದ ಸದಸ್ಯರಾದ ಆರ್.ಎಸ್.ಪೋಂಡೆ, ಮಹಮ್ಮದ್ ಸನಾವುಲ್ಲಾ, ಕೆಂಪೇಗೌಡ, ಕೆ.ಯಾಲಕ್ಕಿಗೌಡ, ಸುಪ್ರಸನ್ನ, ತಾ.ಪಂ.ಇ.ಒ. ಕೆ.ಸಿ.ಅಪ್ಪಣ್ಣ, ಸಹಾಯಕ ನಿರ್ದೇಶಕರುಗಳಾದ ಎಂ.ಡಿ.ಶ್ರೀನಿವಾಸ್, ಹೇಮಂತ್ ಕುಮಾರ್, ಪಿ.ವಿ.ಶ್ರೀನಿವಾಸ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.