ಕನ್ನಡಪ್ರಭ ವಾರ್ತೆ ತುಮಕೂರು
ವಿಜ್ಞಾನ, ತಂತ್ರಜ್ಞಾನದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು, ಅಂರ್ತಜಾಲದಲ್ಲಿ ದೊರೆಯುವ ಮಾಹಿತಿಯನ್ನು ಜ್ಞಾನವಾಗಿ ಪರಿವರ್ತಿಸುವ ಗುರುತರ ಜವಾಬ್ದಾರಿ ಮತ್ತು ಸವಾಲು ಪ್ರತಿಯೊಬ್ಬರ ಶಿಕ್ಷಕರ ಮೇಲಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.ನಗರದ ಶ್ರೀಸಿದ್ದಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ 2025-26ನೇ ಸಾಲಿನ ಎನ್.ಸಿ.ಸಿ., ಎನ್.ಎಸ್.ಎಸ್,ಕ್ರೀಡೆ,ಸಾಂಸ್ಕೃತಿಕ ಮತ್ತು ರೆಡ್‌ಕ್ರಾಸ್ ಚಟುವಟಿಕೆಗಳ ಅಭಿವ್ಯಕ್ತಿ 2025ಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು,ವಿದ್ಯಾರ್ಥಿಗಳು ಸಹ ಅಂರ್ತಜಾಲದ ಮಾಹಿತಿಯನ್ನು ತಮ್ಮ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಸಿದ್ದಗಂಗಾ ಶಿಕ್ಷಣ ಸಂಸ್ಥೆ 1965ರಿಂದಲೂ ನಾಡಿನ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಬಂದಿದ್ದು, ಆರಂಭಿಕ ದಿನಗಳಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜು ಹೊರತು ಪಡಿಸಿದರೆ, ಸಿದ್ದಗಂಗಾ ಕಾಲೇಜು ಮಾತ್ರ ಬಡ ಮಕ್ಕಳಿಗೆ ಕೈಗೆಟುಕುವ ರೀತಿಯಲ್ಲಿ ಶಿಕ್ಷಣ ನೀಡುತ್ತಿದ್ದ ಏಕೈಕ ಸಂಸ್ಥೆಯಾಗಿದೆ ಎಂದರು.ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ದೂರದೃಷ್ಟಿಯ ಫಲವಾಗಿ ಹಂತ ಹಂತವಾಗಿ ಶಿಕ್ಷಣ ಸಂಸ್ಥೆಗಳು ಬೆಳೆದು ಇಂದು ಎಲ್.ಕೆ.ಜಿ.ಯಿಂದ ವೈದ್ಯಕೀಯ ಶಿಕ್ಷಣದವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡುವ ಕೆಲವೇ ವಿದ್ಯಾಸಂಸ್ಥೆಗಳಲ್ಲಿ ಶ್ರೀಸಿದ್ದಗಂಗಾ ಸಂಸ್ಥೆಯೂ ಒಂದಾಗಿದೆ. ಮಕ್ಕಳಿಗೆ ಅನ್ನ, ಅಕ್ಷರದ ಜೊತೆಗೆ ಸಂಸ್ಕಾರವನ್ನು ನೀಡಿ, ತ್ರಿವಿಧ ದಾಸೋಹ ಕೇಂದ್ರವಾಗಿವೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಇಡಿ ಪ್ರಪಂಚದಾದ್ಯಂತ ಕಂಡು ಬರುತ್ತಾರೆ. ಬಡವಿದ್ಯಾರ್ಥಿಗಳ ಕನಸು ನನಸಾಗಿದ್ದು ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆ. ಸಂಗೀತ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿ ಜೀವನದಲ್ಲಿ ಅತಿ ಮುಖ್ಯ. ಹಾಗಾಗಿ ವಿದ್ಯಾರ್ಥಿಗಳೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಅಭಿವ್ಯಕ್ತಿ ಸಾಂಸ್ಕೃತಿಕ ಸ್ಪರ್ಧೆಗಳ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಹಂಪಿ ಕನ್ನಡ ವಿವಿಯ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ, ಇಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ಸೇರಿದಂತೆ ಅನೇಕ ರೀತಿಯ ಒತ್ತಡದಲ್ಲಿ ಭಾವನೆಗಳನ್ನು ವ್ಯಕ್ತಿಪಡಿಸಲು ಸಮಯವೇ ಇಲ್ಲದಂತಾಗಿದೆ. ಸಂಬಂಧಗಳೇ ಬೇಡದ ಭಾವನ ರಹಿತ ಜೀವನ ಇಂದಿನ ಯುವ ಸಮೂಹದಲ್ಲಿ ಕಂಡು ಬರುತ್ತಿದೆ.ದಯೆ, ಕರುಣೆ, ಪ್ರೀತಿ,ಮಾನವೀಯತೆ ಮರೆಯಾಗುತ್ತಿದ್ದು, ಇದು ನಿಜವಾದ ಜೀವನವಲ್ಲ.ನಾವು, ನಮ್ಮವರು ಎಂಬ ಭಾವನೆ ಒಡಮೂಡಿದಾಗ ಮಾತ್ರ ಮನುಷ್ಯ ಪರಿಪೂರ್ಣನಾಗಲು ಸಾಧ್ಯ.ನಾನು ಕೂಡ ಇದೇ ಕಾಲೇಜಿ ಹಳೆಯ ವಿದ್ಯಾರ್ಥಿ, ನಾವೆಲ್ಲರೂ ಶ್ರೀಸಿದ್ದಗಂಗಾ ಸಂಸ್ಥೆಯ ವಿದ್ಯಾರ್ಥಿಗಳು ಎಂಬುದೇ ಹೆಮ್ಮೆಯ ವಿಚಾರ ಎಂದರು.ಶ್ರೀಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜಕ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನ 15ನೇ ವರ್ಷದಿಂದ 25ನೇ ವರ್ಷದ ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖವಾದುದ್ದು, ಈ ಸಮಯದಲ್ಲಿ ಕಷ್ಟ ಪಟ್ಟರೆ, ಮುಂದಿನ ಭವಿಷ್ಯ ಸುಖಃಕರವಾಗಿ ಇರಲಿದೆ ಎಂಬುದಕ್ಕೆ ಇಂದು ವೇದಿಕೆ ಮೇಲಿರುವ ಡಾ.ಡಿ.ವಿ.ಪರಮಶಿವಮೂರ್ತಿ, ಶಿವಸಿದ್ದೇಶ್ವರಸ್ವಾಮೀಜಿಗಳೇ ಜೀವಂತ ಉದಾಹರಣೆ. ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು.ಕೀಳಿರಿಮೆ ಬಿಟ್ಟು ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವಂತಾಗಬೇಕು.ಪರೀಕ್ಷಾ ದೃಷ್ಟಿಯಿಂದ ಓದು ಒಳ್ಳೆಯದಲ್ಲ ಎಂದರು.
ಗಾಯಕ ಹಾಗೂ ಸಿದ್ದಗಂಗಾ ಕಾಲೇಜಿನ ಹಳೆಯ ವಿದ್ಯಾರ್ಥಿ ವಿಜಯ್ ಮಾತನಾಡಿ, ನಾನು ಈ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಅಭಿವ್ಯಕ್ತಿ ಕಾರ್ಯಕ್ರಮದಲ್ಲಿ ಹಾಡಿದ ಒಂದು ಹಾಡು ಇಂದು ನನ್ನನ್ನು ನಾಡಿನಲ್ಲಿ ಗಾಯಕನಾಗಿ ಗುರುತಿಸಿಕೊಳ್ಳುವಂತೆ ಮಾಡಿದೆ. ವಿದ್ಯಾರ್ಥಿ ಜೀವನದಲ್ಲಿ ಸುಖಃಕ್ಕಾಗಿ ಅಲೆಯದೆ, ನಿರಂತರ ಪರಿಶ್ರಮ ಪಟ್ಟರೆ ಭವಿಷ್ಯ ಸಂತೋಷವಾಗಿರಲಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ನಿಜಲಿಂಗಪ್ಪ ಮಾತನಾಡಿ,ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ನಮ್ಮ ಕಾಲೇಜಿನಲ್ಲಿ ಪಠ್ಯದಷ್ಟೇ, ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿಯೂ ಹೆಸರು ಮಾಡಿರುವುದು ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ನಮ್ಮ ದೇಶದಲ್ಲಿ ಉಪನ್ಯಾಸ ನೀಡುವವರು ಸಾಕಷ್ಟು ಜನರಿದ್ದಾರೆ.ಆ ದರೆ ಅವುಗಳನ್ನು ಆಚರಣೆಗೆ ತರುವವರು ಬಹಳ ಕಡಿಮೆ. ಇಂದಿನ ಮಕ್ಕಳು ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತಿದ್ದಾರೆ. ಅತ್ತಾಗ ಅಳದೆ, ನಕ್ಕಾಗ ನಗದೆ ಭಾವನ ರಹಿತ ಜೀವಿಗಳಾಗುತ್ತಿದ್ದಾರೆ. ಗ್ರಾಮೀಣ ಮಕ್ಕಳ ಬದುಕು ಹಸನಾಗಬೇಕು. ಅವರು ಸಹ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕೆಂಬುದು ಹಿರಿಯ ಶ್ರೀಗಳ ಕನಸಾಗಿತ್ತು. ವ್ಯಕ್ತಿ ಬುದ್ದಿ ಮತ್ತು ಭಾವನೆಗಳ ವಿಕಾಸವೇ ನಿಜವಾದ ಶಿಕ್ಷಣ. ಒಳ್ಳೆಯ ಚಾರಿತ್ರ ನಿರ್ಮಾಣವೇ ಶಿಕ್ಷಣದ ಗುರಿ ಎಂದು ಸ್ವಾಮೀಜಿ ನುಡಿದರು.ಕಾರ್ಯಕ್ರಮದಲ್ಲಿ ಅಭಿವ್ಯಕ್ತಿ ಸಂಚಾಲಕರಾದ ರತ್ನಮ್ಮ, ಸಹ ಸಂಚಾಲಕರಾದ ಶ್ರಿವಲ್ಲಿ, ಎನ್.ಸಿ.ಸಿ.ಅಧಿಕಾರಿ ರಾಮಲಿಂಗಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.