ತೇಗನಹಳ್ಳಿ ಚಿಕ್ಕಕೆರೆ ಖಾಸಗಿ ವ್ಯಕ್ತಿ ಅತಿಕ್ರಮಣ: ರೈತ ಸಂಘ, ಕರವೇ ಖಂಡನೆ

KannadaprabhaNewsNetwork | Published : Aug 20, 2024 12:54 AM

ಸಾರಾಂಶ

ತೇಗನಹಳ್ಳಿ ಚಿಕ್ಕಕೆರೆಯನ್ನು ಪುರ ಗ್ರಾಮದ ಪ್ರಭಾವಿ ಗುತ್ತಿಗೆದಾರ ಅತಿಕ್ರಮಿಸಿ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾನೆ. ಕೆರೆ ಬಳಿಗೆ ಸಾರ್ವಜನಿಕರು ಬರದಂತೆ ತಂತಿ ಬೇಲಿ ಹಾಕಿದ್ದು, ಕೆರೆ ಒಳಗೆ ಪಿಲ್ಲರ್ ಹಾಕಿ ಅಕ್ರಮವಾಗಿ ರೆಸಾರ್ಟ್ ಮಾದರಿ ಐಷಾರಾಮಿ ಕಟ್ಟಡ ನಿರ್ಮಿಸಿದ್ದಾನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣ ಹೊರವಲಯದ ತೇಗನಹಳ್ಳಿ ಚಿಕ್ಕಕೆರೆಯನ್ನು (ಕಾಳೇಗೌಡನ ಕಟ್ಟೆ) ಖಾಸಗಿ ವ್ಯಕ್ತಿ ಅತಿಕ್ರಮಿಸಿ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿದ್ದರೂ ಅದನ್ನು ತೆರವುಗೊಳಿಸಲು ಅಧಿಕಾರಿಗಳು ವಿಫಲರಾಗಿದ್ದು, ಮುಂದಿನ 15 ದಿನಗಳಲ್ಲಿ ಕ್ರಮ ವಹಿಸದಿದ್ದರೆ ತಾಲೂಕು ಆಡಳಿತ ಸೌಧದ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ರೈತ ಸಂಘ, ಕರವೇ ಎಚ್ಚರಿಸಿವೆ.

ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈತರು ಹಾಗೂ ಕರವೇ ಮುಖಂಡರು, ಚಿಕ್ಕಕೆರೆಯನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡದಿರುವುದು ಮತ್ತು ಹೇಮಾವತಿ ಮುಖ್ಯ ನಾಲೆಯ 54 ನೇ ವಿತರಣಾ ನಾಲೆಯ ಕಳಪೆ ಕಾಮಗಾರಿಗಳ ವಿರುದ್ಧ ಇದುವರೆಗೂ ಯಾವುದೇ ಕ್ರಮ ವಹಿಸದಿರುವ ನೀರಾವರಿ ಇಲಾಖೆ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳ ನಿಲುವನ್ನು ಖಂಡಿಸಿದರು.

ತೇಗನಹಳ್ಳಿ ಚಿಕ್ಕಕೆರೆಯನ್ನು ಪುರ ಗ್ರಾಮದ ಪ್ರಭಾವಿ ಗುತ್ತಿಗೆದಾರ ಅತಿಕ್ರಮಿಸಿ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾನೆ. ಕೆರೆ ಬಳಿಗೆ ಸಾರ್ವಜನಿಕರು ಬರದಂತೆ ತಂತಿ ಬೇಲಿ ಹಾಕಿದ್ದು, ಕೆರೆ ಒಳಗೆ ಪಿಲ್ಲರ್ ಹಾಕಿ ಅಕ್ರಮವಾಗಿ ರೆಸಾರ್ಟ್ ಮಾದರಿ ಐಷಾರಾಮಿ ಕಟ್ಟಡ ನಿರ್ಮಿಸಿದ್ದಾನೆ ಎಂದರು.

ಕೆರೆ ಏರಿಯ ಮೇಲೆ ಕಲ್ಲು ಬೆಂಚುಗಳನ್ನು ಹಾಕಿ ಗ್ರಾಹಕರನ್ನು ಸೆಳೆದು ಪ್ರವಾಸೋದ್ಯಮ ಕೇಂದ್ರವನ್ನಾಗಿಸಿಕೊಳ್ಳುವ ಹುನ್ನಾರ ನಡೆಸಿದ್ದಾನೆ. ನೀರಾವರಿ ಇಲಾಖೆಯಾಗಲೀ ಅಥವಾ ಕೆರೆಗಳನ್ನು ಸಂರಕ್ಷಿಸಿ ಕಾಪಾಡಬೇಕಾದ ಜಿಲ್ಲಾಡಳಿತವಾಗಲೀ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖುದ್ದು ಪರಿಶೀಲನೆ ನಂತರವೂ ಹೇಮಾವತಿ ನಾಲಾ ವಿಭಾಗದ ಅಧೀಕ್ಷಕ ಇಂಜಿನಿಯರ್ ಎಂ.ಎನ್.ಕಿಶೋರ್ ಕೆರೆ ತೆರವು ಮತ್ತು ವಿತರಣಾ ನಾಲೆಯ ಕಳಪೆ ಕಾಮಗಾರಿಯ ವಿರುದ್ದ ಕ್ರಮವಹಿಸಿಲ್ಲ. ಮನವಿ ಸಲ್ಲಿಸಿದರೂ ಜಿಲ್ಲಾಧಿಕಾರಿಗಳು ಇದುವರೆಗೂ ಸ್ಥಳ ಪರಿಶೀಲನೆಗೆ ಬಂದಿಲ್ಲ. ಕನಿಷ್ಠ ತಹಸೀಲ್ದಾರರಿಗಾದರೂ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಆದೇಶಿಸಿಲ್ಲ ಎಂದು ಕಿಡಿಕಾರಿದರು.

ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಹಿರಿಯ ರೈತ ಮುಖಂಡ ಕೆ.ಆರ್.ಜಯರಾಂ, ಎಲ್.ಬಿ.ಜಗದೀಶ್, ಕರೋಟಿ ತಮ್ಮ, ಹೊನ್ನೇಗೌಡ, ಬ್ಯಾಲದಕೆರೆ ಶಿವಣ್ಣ, ಕೃಷ್ಣಾಪುರ ರಾಜಣ್ಣ, ಮಡುವಿನಕೋಡಿ ಪ್ರಕಾಶ್, ಅರುಣ ಕುಮಾರ್, ಸ್ವಾಮೀಗೌಡ, ತಾಲೂಕು ಕರವೇ ಅಧ್ಯಕ್ಷ ಶ್ರೀನಿವಾಸ್ ಉಪಾಧ್ಯಕ್ಷ ಗೋಪಿ ಸೇರಿದಂತೆ ಹಲವಾರು ರೈತ ಮುಖಂಡರು ಇದ್ದರು.

Share this article