ಬಳ್ಳಾರಿ: ಪಾಲಿಕೆ ಆಡಳಿತ ವೈಖರಿ ವಿರುದ್ಧ ಆಡಳಿತಾರೂಢ ಪಕ್ಷದ ಸದಸ್ಯರೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಇಲ್ಲಿನ ಜಿಪಂ ಸಭಾಂಗಣದಲ್ಲಿ ಸೋಮವಾರ ಸಾಮಾನ್ಯ ಸಭೆಯಲ್ಲಿ ಜರುಗಿತು.
ನಗರ ಸ್ವಚ್ಛತೆ ಕಾರ್ಯಕ್ಕೆ ಎಲ್ಲ ಕಾರ್ಮಿಕರು ಬರುವುದಿಲ್ಲ. ಕೆಲವರು ಮಾತ್ರ ಬರುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಸಮರ್ಪಕ ಉತ್ತರ ದೊರೆಯುವುದಿಲ್ಲ. ಹೀಗಾದರೆ ಹೇಗೆ ಎಂದು ಕೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್ ಅವರು, ನಗರ ದಿನೇ ದಿನೇ ಬೆಳೆಯುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೌಚಾಲಯಗಳನ್ನು ನಿರ್ಮಿಸಲಾಗುವುದು. ನಗರದ್ಯಾಂತ ಎಷ್ಟು ಶೌಚಾಲಯಗಳು ನಿರ್ಮಾಣ ಮಾಡಬೇಕು ಎಂದು ಸರ್ವೆ ಮಾಡಿ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿದರಲ್ಲದೆ, ಜಿಂದಾಲ್‌ನ ಸಿಎಸ್‌ಆರ್ ನಿಧಿಯಿಂದ ನಗರದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.ನಗರದಲ್ಲಿ ಹೆಚ್ಚುತ್ತಿರುವ ಬಿಡಾಡಿ ದನಗಳ ಹಾವಳಿ ಹಾಗೂ ಅನಧಿಕೃತ ಬ್ಯಾನರ್ ಅಳವಡಿಕೆ ಕುರಿತು ಸೂಕ್ತ ಕ್ರಮ ಜರುಗಿಸಿ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಗರದಲ್ಲಿ ಅಭಿವೃದ್ಧಿ ಕಾರ್ಯಗಳ ಹಿನ್ನಡೆ ಕುರಿತು ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ಪಕ್ಷಾತೀತವಾಗಿ ಧ್ವನಿ ಎತ್ತಿದರು.
ಮೇಯರ್ ನಂದೀಶ್ ಮುಲ್ಲಂಗಿ ಅಧ್ಯಕ್ಷತೆ ವಹಿಸಿದ್ದರು. ನಗರ ಶಾಸಕ ನಾರಾ ಭರತ್ ರೆಡ್ಡಿ ಸಭೆಯಲ್ಲಿ ಪಾಲ್ಗೊಂಡು ಪಾಲಿಕೆ ಸದಸ್ಯರ ಸಮಸ್ಯೆಗಳನ್ನು ಆಲಿಸಿದರು. ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆ ತಡವಾಗಿ ಸಭೆ ಶುರುಗೊಂಡಿತು.ಪಾಲಿಕೆ ಸದಸ್ಯರಾದ ಕುಬೇರ, ಅಶೋಕ, ಶ್ರೀನಿವಾಸ ಮೋತ್ಕರ್, ಹನುಮಂತಪ್ಪ, ಪಿ. ಗಾದೆಪ್ಪ, ಇಬ್ರಾಹಿಂ ಬಾಬು ಭಾಗವಹಿಸಿ, ತಮ್ಮ ವ್ಯಾಪ್ತಿಯ ಸಮಸ್ಯೆಗಳ ಕುರಿತು ಧ್ವನಿ ಎತ್ತಿದರು. ಉಪ ಮೇಯರ್ ಡಿ. ಸುಕುಂ ಸೇರಿದಂತೆ ಸ್ಥಾಯಿ ಸಮಿತಿ ಅಧ್ಯಕ್ಷರು ಭಾಗವಹಿಸಿದ್ದರು.