ಶಿರಹಟ್ಟಿ, ಬೆಳ್ಳಟ್ಟಿ ಗ್ರಾಮದಲ್ಲಿ ಪಟಾಕಿ ಮಳಿಗೆ, ಗೋದಾಮುಗಳಿಗೆ ಭೇಟಿ ಶಿರಹಟ್ಟಿ: ಸರ್ಕಾರ ರಾಜಕೀಯ ಸಮಾವೇಶ, ಮದುವೆ, ಹಬ್ಬ, ಶುಭ ಸಮಾರಂಭ, ರ‍್ಯಾಲಿಗಳಲ್ಲಿಯೂ ಅಪಾಯಕಾರಿ ಪಟಾಕಿಗಳ ಬದಲು ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ ನೀಡಿದೆ. ಪಟಾಕಿ ಪರವಾನಗಿದಾರರು ಇದನ್ನು ಗಂಭೀರವಾಗಿ ಪರಿಗಣಿಸಿ ವ್ಯವಹರಿಸಬೇಕು ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು. ಶಿರಹಟ್ಟಿ ಪಟ್ಟಣ ಹಾಗೂ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಸ್ಫೋಟಕ ವಸ್ತು ಪಟಾಕಿ ಸಂಗ್ರಹಿಸುವ ಅಧಿಕೃತ ಪಟಾಕಿ ಮಳಿಗೆ, ಗೋದಾಮುಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ಸರ್ಕಾರದ ಸೂಚನೆ ಮೇರೆಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು. ಸರ್ಕಾರದ ಹೊಸ ಮಾರ್ಗ ಸೂಚಿಯಂತೆ ಪಟಾಕಿ ಮಳಿಗೆ, ದಾಸ್ತಾನಿಗೆ ಐದು ವರ್ಷ ಅವಧಿಗೆ ನೀಡಲಾಗುವ ಪರವಾನಗಿಯನ್ನು ಇನ್ನು ಮುಂದೆ ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳಸಲಾಗುವುದು ಎಂದರು. ಹೀಗಾಗಿ ಪರವಾನಗಿದಾರರು ಪ್ರತಿ ವರ್ಷ ನವೀಕರಣ ಮಾಡಿಕೊಳ್ಳಬೇಕು. ಸರ್ಕಾರದ ಸೂಚನೆಯಂತೆ ಎಲ್ಲ ಪಟಾಕಿ ಮಾರಾಟ ಪರವಾನಗಿ ಹೊಂದಿದವರು ಮಾರಾಟ ಸ್ಥಳವನ್ನು ಪರಿಶೀಲಿಸಬೇಕು ಎಂದು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಗೋದಾಮುಗಳು ಮತ್ತು ಮಳಿಗೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಅತ್ತಿಬೆಲೆ ಪಟಾಕಿ ದುರಂತದ ಬಳಿಕ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸರ್ಕಾರ ಸಭೆ ನಡೆಸಿ ಸೂಚನೆ ನೀಡಿದ್ದು, ಅಕ್ರಮವಾಗಿ ಪಟಾಕಿ ಮಾರಾಟ ಮಾಡಿದರೆ ಪರವಾನಗಿ ರದ್ದುಗೊಳಿಸುವ ಕಟ್ಟಪ್ಪಣೆಯನ್ನು ಮಾಲೀಕರಿಗೆ ನೀಡಿದ ತಹಸೀಲ್ದಾರ್ ಅವರು ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶವಿದೆ ಎಂದು ತಿಳಿಸಿದರು. ಪಟಾಕಿ ಸಿಡಿಸುವಾಗ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲೂಕಿನೆಲ್ಲೆಡೆ ತಪಾಸಣೆ ನಡೆಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋದಾಮುಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು. ದೀಪಾವಳಿ ಸಂದರ್ಭ ಪ್ರತಿ ಬಾರಿ ಅನೇಕರು ಕಣ್ಣು ಕಳೆದುಕೊಳ್ಳುವುದು, ಸುಟ್ಟ ಗಾಯಗಳಾಗುವುದು, ಸಾಯುವಂತಹ ಪ್ರಸಂಗಗಳನ್ನು ಕಾಣುತ್ತಿದ್ದೇವೆ. ಹೀಗಾಗಿ ಸರ್ಕಾರದ ಎಲ್ಲ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ. ಷರತ್ತು, ನಿಬಂಧನೆಗಳಿಗೆ ತಕ್ಕಂತೆ ನಡೆದುಕೊಂಡಿದ್ದರೆ ಮಾತ್ರ ಪರವಾನಗಿ ನವೀಕರಿಸಬಹುದು. ಇಲ್ಲದಿದ್ದರೆ ನಿರಾಕರಿಸಲಾಗುವುದು ಎಂದು ಹೇಳಿದರು. ಪಿಎಸ್‌ಐ ಈರಪ್ಪ ರಿತ್ತಿ, ಅಗ್ನಿಶಾಮಕ ಇಲಾಖೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಸೇರಿ ಅನೇಕರು ಈ ವೇಳೆ ಉಪಸ್ಥಿತರಿದ್ದರು.