ಎಳವೆಯಲ್ಲೇ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಸ್ಫೂರ್ತಿಯಾಗಿರಿಸಿಕೊಂಡು ತಾನು ಕೂಡ ಅವರಂತೆಯೇ ಕ್ರಿಕೆಟಿಗನಾಗಬೇಕೆಂದು ಆಸೆ ಪಟ್ಟಿದ್ದ ಉಪ್ಪಿನಂಗಡಿಯ ಕನಸು ಕಂಗಳ ಹುಡುಗನ ಅವಿರತ ಶ್ರಮಕ್ಕೆ ಈಗ ಫಲ ಸಿಕ್ಕಿದ್ದು, ಇಲ್ಲಿನ ಲಕ್ಷ್ಮೀ ನಗರದ ನಿವಾಸಿ ಎಸ್. ತೇಜಸ್ವಿ ಸೂರ್ಯಂಬೈಲ್ ದೆಹಲಿಯ ರಣಜಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಉಪ್ಪಿನಂಗಡಿ: ಎಳವೆಯಲ್ಲೇ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಸ್ಫೂರ್ತಿಯಾಗಿರಿಸಿಕೊಂಡು ತಾನು ಕೂಡ ಅವರಂತೆಯೇ ಕ್ರಿಕೆಟಿಗನಾಗಬೇಕೆಂದು ಆಸೆ ಪಟ್ಟಿದ್ದ ಉಪ್ಪಿನಂಗಡಿಯ ಕನಸು ಕಂಗಳ ಹುಡುಗನ ಅವಿರತ ಶ್ರಮಕ್ಕೆ ಈಗ ಫಲ ಸಿಕ್ಕಿದ್ದು, ಇಲ್ಲಿನ ಲಕ್ಷ್ಮೀ ನಗರದ ನಿವಾಸಿ ಎಸ್. ತೇಜಸ್ವಿ ಸೂರ್ಯಂಬೈಲ್ ದೆಹಲಿಯ ರಣಜಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಪ್ರತಿಷ್ಠಿತ ಸೂರ್ಯಂಬೈಲ್ ಮನೆತನದ ಶಿವ ಭಟ್ ಮತ್ತು ಲತಾ ಶಿವ ಭಟ್ ದಂಪತಿಯ ಪುತ್ರ ಹಾಗೂ ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ದಿ. ಡಾ. ಗೋವಿಂದ ಭಟ್ ಸೂರಿಕುಮೇರು ಅವರ ಮೊಮ್ಮಗನಾಗಿರುವ ಎಸ್. ತೇಜಸ್ವಿ ಅವರಿಗೆ ಬಾಲ್ಯದಲ್ಲೇ ಕ್ರಿಕೆಟ್‌ನ ಬಗ್ಗೆ ಆಸಕ್ತಿ ಹೊಂದಿದವರು. ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದರೂ ಕ್ರಿಕೆಟ್‌ನ ಧ್ರುವ ತಾರೆಯೆನಿಸಿಕೊಂಡ ಸಚಿನ್ ತೆಂಡುಲ್ಕರ್ ಅವರನ್ನು ಅತೀಯಾಗಿ ಮೆಚ್ಚಿಕೊಂಡು ತಾನು ಕೂಡ ಅವರಂತೆಯೇ ಭವಿಷ್ಯದಲ್ಲಿ ಕ್ರಿಕೆಟ್ ಆಟಗಾರನಾಗಬೇಕೆಂದು ಕನಸು ಕಂಡವರು. ಇವರ ಈ ಕನಸಿಗೆ ತಂದೆ, ತಾಯಿ, ಅಜ್ಜ ಹಾಗೂ ಇವರ ಕುಟುಂಬಸ್ಥರು ಪ್ರೋತ್ಸಾಹ ನೀಡಿದರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಮಾಣಿಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿದ ಇವರು ಬಳಿಕ ಪಿಯುಸಿ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಮುಗಿಸಿದರು. ಶಿಕ್ಷಣದೊಂದಿಗೆ ಪುತ್ತೂರಿನ ಸುಧಾನ ಶಾಲೆಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ತರಬೇತಿಗೂ ಸೇರಿಕೊಂಡು ತನ್ನೊಳಗೆ ಹುದುಗಿದ್ದ ಕ್ರೀಡೆಯನ್ನು ಅನಾವರಣಗೊಳಿಸಿದರು. ಇವರೊಬ್ಬ ಅಲ್‌ರೌಂಡರ್ ಕ್ರೀಡಾಪಟುವಾಗಿದ್ದು, ಅದರಲ್ಲೂ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ. ೧೯ರ ಹರೆಯದ ಇವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಎರಡನೇ ವರ್ಷದ ಪದವಿ ವ್ಯಾಸಂಗದಲ್ಲಿ ತೊಡಗಿದ್ದಾರೆ. ಈ ನಡುವೆ ಅವರು ದೆಹಲಿಯ ರಣಜಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೇ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇವರ ಈ ಸಾಧನೆ ಗ್ರಾಮೀಣ ಪ್ರದೇಶವಾದ ಉಪ್ಪಿನಂಗಡಿಯ ಹಿರಿಮೆಗೊಂದು ಗರಿಯಾಗಿದ್ದು, ಇವರು ಕ್ರಿಕೆಟ್ ಲೋಕದಲ್ಲಿ ಇವರು ಇನ್ನಷ್ಟು ಪ್ರಜ್ವಲಿಸಲಿ ಎಂಬುದೇ ಉಪ್ಪಿನಂಗಡಿ ಗ್ರಾಮಸ್ಥರ ಆಶಯ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.