ಕಾರವಾರ: ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಪ್ರತಿ ಮನೆಗಳಲ್ಲಿ ಪೋಷಕರು ಮತ್ತು ಎಲ್ಲ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ತಿಳಿಸುವ ಮೂಲಕ ಅವರಿಗೆ ಸ್ವಾತಂತ್ರ್ಯದ ಪ್ರಾಮುಖ್ಯ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು.
ಜಿಲ್ಲೆಯಾದ್ಯಂತ ಎಲ್ಲ ತಾಲೂಕುಗಳಲ್ಲಿ ಹರ್ ಘರ್ ತಿರಂಗ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ರಂಗೋಲಿ ಬಿಡಿಸುವ ಕಾರ್ಯಕ್ರಮ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಾಕ್ ಥಾನ್ ಕಾರ್ಯಕ್ರಮ ನಡೆಯುತ್ತಿದೆ. ಆ. 15ರಂದು ನಡೆಯುವ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಬಾರಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಯನ್ನು ಜಿಲ್ಲಾಡಳಿತದ ವತಿಯಿಂದ ಅಭಿನಂದಿಸಲಾಗುವುದು ಎಂದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ನಗರಸಭೆ ಆಯುಕ್ತ ಜಗದೀಶ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ವಾಕ್‌ಥಾನ್‌ನಲ್ಲಿ ಭಾಗವಹಿಸಿದ್ದರು.ಕಾರವಾರ ಬೈಸಿಕಲ್ ಕ್ಲಬ್ ಮತ್ತು ವಿವಿಧ ಶಾಲಾ ಕಾಲೇಜುಗಳು 300ಕ್ಕೂ ಅಧಿಕ ಮಂದಿ ವಾಕ್‌ಥಾನ್‌ನಲ್ಲಿ ಭಾಗವಹಿಸಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ರಾಷ್ಟ್ರಧ್ವಜ ಹಿಡಿದು, ಘೋಷವಾಕ್ಯಗಳನ್ನು ಕೂಗುತ್ತಾ ಸಾಗಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ನಡೆದ ವಾಕ್‌ಥಾನ್ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ರವೀಂದ್ರನಾಥ್ ಠಾಗೂರ್ ಬೀಚ್‌ನಲ್ಲಿ ಮುಕ್ತಾಯಗೊಂಡಿತು. ವಾಕ್‌ಥಾನ್‌ನ ಆರಂಭದಿಂದ ಮುಕ್ತಾಯದ ವರೆಗೂ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದು ವಿಶೇಷವಾಗಿತ್ತು. ರಂಗೋಲಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಕರ್ಷಕ ರಂಗೋಲಿಗಳನ್ನು ಬಿಡಿಸಲಾಗಿತ್ತು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಾರವಾರ ಬೈಸಿಕಲ್ ಕ್ಲಬ್ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.