ಕನ್ನಡಪ್ರಭ ವಾರ್ತೆ ಮೈಸೂರು
ನಿವೇದಿತಾನಗರದಲ್ಲಿ ಮಂಗಳವಾರ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಸಭೆಯಲ್ಲಿ ಪಾಲ್ಗೊಂಡು ಎನ್.ಡಿ.ಎ ಅಭ್ಯರ್ಥಿ ಕೆ. ವಿವೇಕಾನಂದ ಪರ ಮತಯಾಚಿಸಿ ಮಾತನಾಡಿದ ಅವರು, ನಾನು ಯಡಿಯೂರಪ್ಪ ಸೇರಿ ಸರ್ಕಾರ ಮಾಡಿದಾಗ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದೇವೆ. ಎಚ್.ಡಿ. ದೇವೇಗೌಡರು ಈ ರಾಜ್ಯದಲ್ಲಿ ಒಂದು ಲಕ್ಷ ಶಿಕ್ಷಕರನ್ನು ನೇಮಿಸಿದ್ದರು. 50 ಸಾವಿರ ಮಹಿಳೆಯರು, 50 ಸಾವಿರ ಪುರುಷ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಹೇಳಿದರು.
ಅದಾದ ಬಳಿಕ ನಾವು ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯ ಕೊಟ್ಟು ಕೆಲಸ ಮಾಡಿದೆವು. 56 ಸಾವಿರ ಶಿಕ್ಷಕರನ್ನ ನೇಮಕ ಮಾಡಿದೆವು. ಈಗಿರುವ ಸರ್ಕಾರ ಎಷ್ಟು ಶಿಕ್ಷಕರನ್ನು ನೇಮಕ ಮಾಡಿದೆ ನೀವೇ ಹೇಳಿ. ಬಿಜೆಪಿ- ಜೆಡಿಎಸ್ ಜೊತೆಗೂಡಿ ಚುನಾವಣೆ ಎದುರಿಸುತ್ತಿದ್ದೇವೆ. ನಾಲ್ಕು ಜಿಲ್ಲೆಯಲ್ಲಿಯೂ ಅತಿ ಹೆಚ್ಚಿನ ಮತ ಪಡೆದು ದಾಖಲೆ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲ್ಲಲಿ ಎಂದು ಅವರು ಆಶಿಸಿದರು.ಶಿಕ್ಷಕರ ಪರವಾಗಿ ನಮ್ಮ ಅಭ್ಯರ್ಥಿ ಕೆಲಸ ಮಾಡುತ್ತಾರೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ಅವರು ಭರವಸೆ ನೀಡಿದರು.
ಶಾಸಕ ಹಾಗೂ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ನಮ್ಮ ಒಗ್ಗಟ್ಟು ಗೊತ್ತಾಗುತ್ತದೆ. ನಾವೆಲ್ಲರೂ ಅಣ್ಣ ತಮ್ಮಂದಿರ ಹಾಗೆ ಕೆಲಸ ಮಾಡಿದ್ದೇವೆ. ಶಿಕ್ಷಣ ಸಚಿವರು ಡಿಡಿಪಿಐ, ಬಿಇಒ, ಬಿ.ಆರ್.ಸಿ ಗಳಿಗೆ ಸರ್ಕಾರ ಬೆದರಿಕೆ ಹಾಕುತ್ತಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ, ನಾನು ಸಚಿವನಾಗಿದ್ದಾಗ ಕೊಟ್ಟ ಶಾಲಾ ಕಾಲೇಜುಗಳು ಇಂದಿಗೂ ನಡೆಯುತ್ತಿವೆ ಎಂದರು.
ಸಂಸತ್ ಚುನಾವಣೆಯಲ್ಲಿ ನಾವು ಉಸಿರಾಡುತ್ತೇವೆ. ವಿಧಾನಸಭಾ ಚುನಾವಣೆಯಲ್ಲಿ ನಾವು ಯಾರೂ ಮಾತನಾಡಲಿಕ್ಕೆ ಆಗಲ್ಲ. ನಮ್ಮ ಅಭ್ಯರ್ಥಿಗೆ ದುಡ್ಡಿನ ಅವಶ್ಯಕತೆ ಇಲ್ಲ. ಶಿಕ್ಷಕರ ಸೇವೆ ಮಾಡುವ ಅಸೆ ಇದೆ ಅಷ್ಟೆ ಎಂದರು.
ನಾಮಪತ್ರ ಹಿಂತೆಗೆತ ಪೂರ್ಣಗೊಂಡು ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಅಖೈರುಗೊಳ್ಳಿತ್ತಿದ್ದಂತೆಯೇ ಭರ್ಜರಿ ಮತಯಾಚನೆಯಲ್ಲಿ ಉಭಯ ಪಕ್ಷಗಳ ನಾಯಕರು ತೊಡಗಿಸಿಕೊಂಡರು.
ಈ ಸಭೆಯಲ್ಲಿ ಶಿಕ್ಷಕರಲ್ಲದೆ, ಉಭಯ ಪಕ್ಷಗಳ ಕೆಲ ಪ್ರಮುಖರು ಮತ್ತು ಕಾರ್ಯಕರ್ತರೂ ಕೂಡ ಪಾಲ್ಗೊಂಡಿದ್ದರು.
---
ರೇವಣ್ಣ- ಎಚ್.ಡಿ.ಕೆ ಚರ್ಚೆ
ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸಾರ್ವಜನಿಕವಾಗಿ ಮೊದಲು ಕಾಣಿಸಿಕೊಂಡ ಎಚ್.ಡಿ. ರೇವಣ್ಣ ಅವರು, ವೇದಿಕೆ ಮೇಲೆ ಹಾಜರಿದ್ದು, ಕೆ. ವಿವೇಕಾನಂದ ಅವರ ಪರ ಮತಯಾಚಿಸಿದರು.ಎಚ್.ಡಿ. ಕುಮಾರಸ್ವಾಮಿ ಅವರ ಪಕ್ಕದಲ್ಲಿಯೇ ಕುಳಿತಿದ್ದ ರೇವಣ್ಣ ಅವರು ಕೆಲ ಕಾಲ ಚರ್ಚೆ ನಡೆಸಿದರು. ಆರಂಭದಲ್ಲಿ ಒಂದೇ ವೇದಿಕೆ ಹಂಚಿಕೊಂಡರೂ ಎಚ್.ಡಿ. ರೇವಣ್ಣ ಮತ್ತು ಕುಮಾರಸ್ವಾಮಿ ಅವರು ದೂರ ದೂರವೇ ಕುಳಿತಿದ್ದರು. ಇವರ ನಡುವೆ ಎಚ್.ಕೆ. ಕುಮಾರಸ್ವಾಮಿ, ಡಾ. ಅಶ್ವತ್ಥ್ ನಾರಾಯಣ್ ಕುಳಿತಿದ್ದರು.
ಕೆಲ ಸಮಯದ ಬಳಿಕ ದೂರ ಕುಳಿತಿದ್ದ ಅಣ್ಣನನ್ನ ಪಕ್ಕಕ್ಕೆ ಕರೆದ ಎಚ್.ಡಿ. ಕುಮಾರಸ್ವಾಮಿ ಅವರು ಕೆಲಕಾಲ ಸುಧೀರ್ಘ ಚರ್ಚೆಗೆ ಮುಂದಾದರು.