- ಕಾಂಗ್ರೆಸ್ ಹೈಕಮಾಂಡ್ ಖಡಾಖಂಡಿತವಾಗಿ ಒಂದು ಮಾತು ಹೇಳಲಿ: ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಹೇಳಿಕೆ - - -
ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸುತ್ತೀರೋ, ಡಿ.ಕೆ.ಶಿವಕುಮಾರ ಅವರನ್ನು ಮುಖ್ಯಮಂತ್ರಿ ಮಾಡುತ್ತೀರೋ ಎಂಬುದನ್ನು ಹೈಕಮಾಂಡ್ ಖಡಾಖಂಡಿತವಾಗಿ ಒಂದುಮಾತು ಹೇಳಿಬಿಡಲಿ ಎಂದು ಡಿಕೆಶಿ ಆಪ್ತ, ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ. ಶಿವಗಂಗಾ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಆದರೂ, ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ಏನು ನಡೆಯುತ್ತಿದೆಯೋ ಆ ವಿಚಾರದಲ್ಲಿ ಹೈಕಮಾಂಡ್ ಮಧ್ಯ ಪ್ರವೇಶಿಸಬೇಕು. ಪದೇಪದೇ ಮಾಧ್ಯಮಗಳು ನಮ್ಮನ್ನು ಪ್ರಶ್ನಿಸಿದಾಗ ಉತ್ತರ ಕೊಡದೇ ಇರುವುದಕ್ಕೂ ಆಗುವುದಿಲ್ಲ. ಹೈಕಮಾಂಡ್ ಮಧ್ಯ ಪ್ರವೇಶಿಸಿ, ಈ ವಿಚಾರವನ್ನು ಬಗೆಹರಿಸುವಂತೆ ಮನವಿ ಮಾಡಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದರು.ಐದು ವರ್ಷವೂ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸುತ್ತಾರಾ, ಮುಂದಿನ ಅವಧಿಗೂ 5 ವರ್ಷಕ್ಕೂ ಸೇರಿಸಿ ಮುಂದುವರಿಸುತ್ತಾರಾ? ಡಿ.ಕೆ.ಶಿವಕುಮಾರ ಅವರನ್ನು ಮುಖ್ಯಮಂತ್ರಿ ಮಾಡಿದರೂ ಸ್ವಾಗತಿಸುತ್ತೇವೆ, ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಮುಖ್ಯಮಂತ್ರಿ ಮಾಡಿದರೂ ಸ್ವಾಗತಿಸುತ್ತೇವೆ. ಆದರೆ, ಮುಖ್ಯಮಂತ್ರಿ ವಿಚಾರ ಹೈಕಮಾಂಡ್ ಮಾತ್ರವೇ ಸ್ಪಷ್ಟಪಡಿಸಬೇಕು. ನಾವೇನನ್ನೂ ಮಾಡುವುದಕ್ಕೆ ಆಗುವುದಿಲ್ಲ ಎಂದರು.
ಹೈಕಮಾಂಡ್ ಸೂಚಿಸಿದ ಮಾರ್ಗದಲ್ಲಿ ಹೋಗಬಹುದೇ ಹೊರತು ಬೇರೆ ಏನನ್ನೂ ಮಾಡಲಾಗುವುದಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ ಸಮರ್ಥ ನಾಯಕರು ಹೌದೋ, ಅಲ್ಲವೋ ಎಂಬುದು ತಮಗೆಲ್ಲಾ ಗೊತ್ತಿದೆ. ವಿಧಾನಸಭೆ ಚುನಾವಣೆ ಪೂರ್ವದಲ್ಲೇ 136 ಸ್ಥಾನ ಗೆಲ್ಲುತ್ತೇವೆ ಎಂದಿದ್ದರು. ಅದರಂತೆಯೇ ಆಯಿತಲ್ಲವೇ? ಕೆಲಸ ಮಾಡಿದ್ದರೂ, ಕೂಲಿ ಕೇಳಿದ್ದೀರಿ. ನಮ್ಮ ಪಾತ್ರ ಮುಗಿಯಿತು. ಡಿಕೆಶಿಯವರ ಹಣೆ ಬರಹದಲ್ಲಿ ಏನು ಬರೆದಿದೆಯೋ ದೇವರಿಗೆ ಗೊತ್ತು. ಆ ಸಂದರ್ಭ ಬರಲಿ ಅಂತಾ ಕಾಯುತ್ತಿದ್ದೇವೆ ಎಂದರು.ಬೀದಿಲಿ ಹೋಗುವ ದಾಸಯ್ಯ ಬೇಕಾದರೂ ಮುಖ್ಯಮಂತ್ರಿ ಆಗಲೆಂಬ ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹಮ್ಮದ್ ಹೇಳಿಕೆಗೆ ಪ್ರತಿಯಾಗಿ ಮಾತನಾಡಿದ ಶಿವಗಂಗಾ, ಮುಖ್ಯಮಂತ್ರಿ ಹುದ್ದೆಯು ಪವಿತ್ರ ಹುದ್ದೆಯಾಗಿದೆ. ಅಂತಹ ಹುದ್ದೆಗಳಿಗೆ ಹಾಗೆಲ್ಲಾ ಮಾತನಾಡಬಾರದು. ಪಕ್ಷದ ಯಾವುದೇ ವ್ಯಕ್ತಿಗೆ ಸಿಎಂ ಸ್ಥಾನ ನೀಡಿದರೂ ಸ್ವಾಗತಿಸುತ್ತೇವೆ ಎಂದು ಟಾಂಗ್ ನೀಡಿದರು.
- - -(ಬಾಕ್ಸ್)* ಗ್ರಾಪಂ ಅಧ್ಯಕ್ಷ ಕುರ್ಚಿಯನ್ನೇ ಬಿಡಲ್ಲ, ಸಿಎಂ ವಿಚಾರದಲ್ಲಿ ಹಾಗಲ್ಲ ದಾವಣಗೆರೆ: ಮನುಷ್ಯನ ಸಹನೆಗೆ, ಎಲ್ಲದಕ್ಕೂ ಒಂದು ಲಿಮಿಟ್ ಅನ್ನೋದು ಇರುತ್ತದೆ. ಆ ಲಿಮಿಟ್ ಮೀರಿದಾಗ ಸಹನೆಯ ಕಟ್ಟೆಯೊಡೆಯುವ ಸಂದರ್ಭ ಬಂದೇ ಬರುತ್ತದೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ, ಡಿ.ಕೆ.ಶಿವಕುಮಾರ ಆಪ್ತ ಬಳಗದ ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ, ತಾಳ್ಮೆ ಯಾವುದೂ ಶಾಶ್ವತವಲ್ಲ ಎಂದು ಡಿ.ಕೆ.ಸುರೇಶ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಮಾಧ್ಯಮದವರು ಯಾವುದ್ಯಾವುದಕ್ಕೋ ಕಲ್ಪನೆ ಮಾಡಿಕೊಳ್ಳಬೇಡಿ ಅಂತಲೂ ಸುರೇಶ ಹೇಳಿದ್ದಾರೆ. ಡಿ.ಕೆ.ಸುರೇಶ ಏನು ಹೇಳಿದ್ದಾರೋ ಅದಷ್ಟೂ ಸತ್ಯವಾಗಿದೆ ಎಂದರು.ಗ್ರಾಪಂ ಅಧ್ಯಕ್ಷ ಸ್ಥಾನ ಕೊಡಿಸುವ ವಿಚಾರಕ್ಕೆ ನಾವು ನಮ್ಮ ಕ್ಷೇತ್ರದಲ್ಲಿ ಏನೆಲ್ಲಾ ಆಗುತ್ತದೆ ನೋಡಿದ್ದೀವಿ. ಗ್ರಾಪಂ ಅಧ್ಯಕ್ಷ ಸಹ ಅಧಿಕಾರಕ್ಕಾಗಿ ಮಾತು ಕೇಳುವುದಿಲ್ಲವೆಂದು ಡಿ.ಕೆ.ಸುರೇಶ ಹೇಳಿದ್ದಾರೆ. ಅಧಿಕಾರ ಹಂಚಿಕೆ ಮಾತುಕತೆ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಕುರ್ಚಿ ಬಿಟ್ಟುಕೊಡುವುದು ಅಷ್ಟೊಂದು ಸುಲಭವೂ ಅಲ್ಲ ಎಂಬುದನ್ನು ಡಿ.ಕೆ.ಸುರೇಶಣ್ಣ ಹೇಳಿದ್ದಾರೆ ಎಂದು ಶಿವಗಂಗಾ ತಿಳಿಸಿದರು.
ಮುಖ್ಯಮಂತ್ರಿ ಕುರ್ಚಿ ವಿಚಾರದಲ್ಲಿ ಹಾಗೆ ಎನಿಸುವುದಿಲ್ಲ. ಹಾಗೇನಾದರೂ ಮಾತುಕತೆ ನಡೆದಿದ್ದರೆ, ಎರಡೂ ವರ್ಷಕ್ಕೆ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುತ್ತಿದ್ದರು. ಕೆಲ ಸಂದರ್ಭದಲ್ಲಿ ತಾಳಿದವನು ಬಾಳಿಯಾನು ಎಂಬ ಮಾತಿನಂತೆ ಇರಬೇಕಾಗುತ್ತದೆ. ಈ ಹಿಂದೆಯೂ ತಾಳ್ಮೆಯಿಂದ ಇದ್ದೆವು, ಈಗಲೂ ತಾಳ್ಮೆಯಿಂದಲೇ ಇದ್ದೇವೆ, ಮುಂದೆಯೂ ಇರುತ್ತೇವೆ. ನಾವೂ ಸಹ ನಮ್ಮ ಡಿ.ಕೆ.ಶಿವಕುಮಾರ ಸಾಹೇಬರ ತತ್ವವನ್ನೇ ಪಾಲಿಸುತ್ತಿದ್ದೇವೆ ಎಂದು ಬಸವರಾಜ ಶಿವಗಂಗಾ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.- - -
-21ಕೆಡಿವಿಜಿ1, 2.ಜೆಪಿಜಿ:ಬಸವರಾಜ ವಿ. ಶಿವಗಂಗಾ.