ಕನ್ನಡಪ್ರಭ ವಾರ್ತೆ ಕುದೂರು
ರಾಜಕಾರಣ ನಾನು ಆಯ್ಕೆ ಮಾಡಿಕೊಂಡ ಕ್ಷೇತ್ರವಲ್ಲ. ಆಕಸ್ಮಿಕವಾಗಿ ದೊರೆತ ಅವಕಾಶವಾದರೂ ಭಯದಿಂದಲೇ ಇದ್ದೆ. ಆದರೆ ಜನರ ನಡುವೆ ಬಂದಾಗ ಅವರು ತೋರಿಸುವ ಅಭಿಮಾನ, ಪ್ರೀತಿ ಇವುಗಳನ್ನು ಕಂಡಾಗ ನನ್ನ ವೈದ್ಯಕೀಯ ಸೇವೆ ಸಾರ್ಥಕ ಭಾವ ಮೂಡಿಸಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.ಕುದೂರು ಪಟ್ಟಣದ ಹುಳ್ಳೇನಹಳ್ಳಿ ಗ್ರಾಪಂ ಮಾಜಿ ಆಧ್ಯಕ್ಷ ಬಿ.ಜಿ.ರಾಮಯ್ಯರವರ ಮನೆಗೆ ಭೇಟಿ ಕೊಟ್ಟು ಮಾತನಾಡಿದ ಅವರು, ಇದೊಂದು ದೊಡ್ಡ ಕ್ಷೇತ್ರ. ನೀವೆಲ್ಲರೂ ಅಭ್ಯರ್ಥಿ ಎಂದು ಭಾವಿಸಿ ಮನೆಮನೆಗೆ ಹೋಗಿ ಮೋದಿಯವರ ಸಾಧನೆಗಳನ್ನು ಪ್ರಚುರಪಡಿಸಿ. ಯಾರನ್ನೂ ಕೆಣಕಿ ಜಗಳಕ್ಕೆ ಆಹ್ವಾನ ಮಾಡಬೇಡಿ. ಮೋದಿಯವರ ಕನಸುಗಳನ್ನು ಹೇಳಿ, ಯಾರಿಗೆ ಮತ ಹಾಕಬೇಕು? ದೇಶಕ್ಕೆ ಇಂದು ಮೋದಿಯವರ ಅವಶ್ಯಕತೆ ಎಷ್ಟಿದೆ? ಎಂಬುದನ್ನು ಮನಗಾಣಿಸುವ ಕೆಲಸ ಪ್ರತಿಯೊಬ್ಬ ಕಾರ್ಯಕರ್ತರದ್ದು ಆಗಿದೆ ಎಂದರು.
ಮೋದಿಯವರು ಭಾರತವನ್ನು ಮತ್ತೊಮ್ಮೆ ಆಳಲಿದ್ದಾರೆ. ಭಾರತ ವಿಶ್ವಗುರುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ವೈದ್ಯಕೀಯ ಸೇವೆ ಬಡವರಿಗೂ ಕೈಗೆ ಎಟುಕುವಂತಾಗಬೇಕು. ಬಡವ ಎಂಬ ಪದ ಈ ಭೂಮಿಯ ಮೇಲಿಂದ ಮರೆಯಾಗಬೇಕು. ಪ್ರತಿಯೊಬ್ಬರಿಗೂ ದುಡಿದು ತಿನ್ನಲು ಅವಕಾಶ ಕಲ್ಪಿಸಿಕೊಡಬೇಕು. ಆರೋಗ್ಯವಂತ ಸ್ವಾವಲಂಬಿ ಭಾರತ ಮರು ನಿರ್ಮಾಣವಾಗಬೇಕು ಎಂದು ಹೇಳಿದರು.ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಇದೊಂದು ಧರ್ಮಯುದ್ದವಾಗಿದೆ. ಈ ಬಾರಿಯ ಚುನಾವಣೆ ಸತ್ಯದ ಒರೆಗಲ್ಲಿಗೆ ಹಚ್ಚುವಂತೆ ಮಾಡುತ್ತದೆ. ಯಾರು ಬಂದರೂ ನಮ್ಮನ್ನು ಎದುರಿಸಲಾಗದು ಎಂಬ ಎದುರಾಳಿಗಳಿಗೆ ಡಾ.ಮಂಜುನಾಥ್ ರವರ ಉಮೇದುವಾರಿಕೆ ಆಂತರಿಕವಾಗಿ ನಡುಕ ಹುಟ್ಟಿಸಿದೆ. ಸಮೀಕ್ಷೆಗಳು ಕೂಡಾ ಡಾಕ್ಟರ್ ಪರವಾಗಿಯೇ ಇದೆ ಎಂದರು.
ಹಿರಿಯ ಮುಖಂಡ ಬಿ.ಜಿ.ರಾಮಯ್ಯ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ಒಂದಾಗಿರುವುದು ಶುಭ ಸೂಚನೆಯಾಗಿದೆ. ಒಟ್ಟಾಗಿ ಕೆಲಸ ಮಾಡಿ ದೇಶದ ಐಕ್ಯತೆಗೆ ದುಡಿಯುವ ಮೋದಿಯವರ ಕೈ ಬಲಪಡಿಸಬೇಕಾಗಿದೆ. ಡಾ.ಮಂಜುನಾಥ್ ರವರು ಗೆದ್ದು ಕೇಂದ್ರದ ಆರೋಗ್ಯ ಮಂತ್ರಿಗಳಾಗುತ್ತಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರೇ ಹೇಳಿದ್ದಾರೆ ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ಬಿಜೆಪಿ ಮುಖಂಡ ಪ್ರಸಾದ್ ಗೌಡ , ರಂಗೇಗೌಡ, ಹೊನ್ನರಾಜು, ರಮೇಶ್, ಯುವ ಮುಖಂಡ ಮಂಜುನಾಥ್, ಗಂಗಯ್ಯ, ಸದಸ್ಯೆ ಲತಾ, ರಾಧಿಕಾ, ಡಾ.ಅನುಸೂಯ, ಸುಮನ್, ಗೌರವ್, ಧನ್ಯತಾ ಹಾಜರಿದ್ದರು.