ಕನ್ನಡಪ್ರಭ ವಾರ್ತೆ ನಾಪೋಕ್ಲು
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸಂಪಾಜೆ ವತಿಯಿಂದ ಇತ್ತೀಚೆಗೆ ಇಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಬೇಸಿಗೆ ಶಿಬಿರ, ಗೀತ ಗಾಯನ, ಮಕ್ಕಳ ಮೇಳಗಳಲ್ಲಿ ಎಲ್ಲರ ಸಲಹೆ ಸಹಕಾರ ಬೇಕು. ವಿದ್ಯಾರ್ಥಿನಿಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು. ಇದು ಒಂದು ಸ್ವಯಂಸೇವಾ ಸಂಸ್ಥೆ ಎಂಬುದು ಎಲ್ಲರ ಚಿತ್ತದಲ್ಲಿದ್ದು ಅರ್ಪಣಾ ಭಾವದಿಂದ ಕಾರ್ಯಪ್ರವೃತ್ತರಾಗಬೇಕು ಎಂದರು.ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲರಾದ ಕೆ.ಡಿ. ನೀತಾ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತಿಗೆ ಹೆಸರಾದ ಸಂಸ್ಥೆಯಾಗಿದೆ ಎಂದರು.
ಜಿಲ್ಲಾ ಸಂಘಟಕಿ ದಮಯಂತಿ ಯು.ಸಿ. ಅವರು ರಾಜ್ಯ ಸಂಸ್ಥೆಯವರು ಪ್ರಕಟಿಸುತ್ತಿರುವ ವಾರ್ಷಿಕ ಕಾರ್ಯಕ್ರಮದ ಕೈಪಿಡಿ ಪುಸ್ತಕವನ್ನು ಬಿಡುಗಡೆ ಮಾಡಿದರು. ತರಬೇತಿ ಹೊಂದಿದ ಶಿಕ್ಷಕರು ಸಭೆ ಮತ್ತು ಸಮಾರಂಭಗಳಿಗೆ ಬರುವಾಗ ಯಾವುದೇ ಮುಜುಗರ ಪಟ್ಟುಕೊಳ್ಳದೆ ಸಮವಸ್ತ್ರವನ್ನು ಧರಿಸಿಕೊಂಡು ಬರಬೇಕು. ಅದಕ್ಕೆ ವಿಶೇಷವಾದ ಗೌರವವಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ ವರದಿ ವಾಚಿಸಿದರು. ಸಹ ಕಾರ್ಯದರ್ಶಿ ಲಲಿತ ವಾರ್ಷಿಕ ಆಯವ್ಯಯ ಮಂಡನೆ ಮಾಡಿದರು. ಸ್ಕೌಟ್ ಮಾಸ್ಟರ್ ಶ್ಯಾಮಿಲಿ ಅಂದಾಜು ಆಯವ್ಯಯ ಮಂಡಿಸಿದರು. ಸ್ಕೌಟ್ ಮಾಸ್ಟರ್ ಅನುಷಾ ವಾರ್ಷಿಕ ಕಾರ್ಯಕ್ರಮಗಳ ಪಟ್ಟಿಯನ್ನು ಓದಿದರು. ಸಭೆಯಲ್ಲಿ ಜಿಲ್ಲಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಎಂ ವಸಂತಿ ಹಾಗೂ ವಿವಿಧ ಶಾಲೆಗಳ 35 ಮಂದಿ ಶಿಕ್ಷಕರು ಪಾಲ್ಗೊಂಡಿದ್ದರು. ಸ್ಕೌಟ್ ಮಾಸ್ಟರ್ ಸುಮಿತ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.