ಬಂಜಾರ ಜನಾಂಗದ ಆಚಾರ, ವಿಚಾರ ಯುವ ಜನಾಂಗಕ್ಕೆ ತಿಳಿಸಿ

KannadaprabhaNewsNetwork | Published : Nov 19, 2024 12:49 AM

ಸಾರಾಂಶ

ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಿಂತಕ ಬೋಜರಾಜ್.ಎಸ್ ಅಭಿಪ್ರಾಯ

ಕನ್ನಡಪ್ರಭ ವಾರ್ತೆ ಶಿಕಾರಿಪುರ

ವೇಷಭೂಷಣ ಹಾಗೂ ವಿಶಿಷ್ಟ ಭಾಷೆ ಸಂಸ್ಕೃತಿಯಿಂದ ಗುರುತಿಸಿಕೊಂಡಿರುವ ಬಂಜಾರ ಜನಾಂಗ ತಮ್ಮ ಸಂಪ್ರದಾಯ ಹಾಗೂ ಆಚಾರ-ವಿಚಾರಗಳನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಿಕೊಡುವ ಮೂಲಕ ಮುಂದಿನ ಪೀಳಿಗೆಗೆ ಅದನ್ನು ವರ್ಗಾಯಿಸುವ ಕೆಲಸ ಮಾಡಬೇಕಾಗಿದೆ ಎಂದು ಬಂಜಾರ ಸಾಂಸ್ಕೃತಿಕ ಚಿಂತಕ ಬೋಜರಾಜ್.ಎಸ್ ಅಭಿಪ್ರಾಯಪಟ್ಟರು.

ಪಟ್ಟಣದ ಬಂಜಾರ ಭವನದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು, ಶ್ರೀ ಲಕ್ಕೀಶ ಬಂಜಾರ ನೌಕರರ ಕ್ಷೇಮಾಭಿವೃದ್ಧಿ ಸಂಘ, ಶಿಕಾರಿಪುರ ತಾಲೂಕು ಬಂಜಾರ ಸೇವಾ ಸಂಘದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಂಜಾರ ಜನಪದ ಹಾಡು ಹಾಗೂ ಕುಣಿತಗಳಲ್ಲಿ ಸಂಸ್ಕೃತಿಯ ಮಹತ್ವ ತಿಳಿಯಬಹುದಾಗಿದೆ. ಹೆಣ್ಣು ಮಕ್ಕಳಿಗೆ ಅಪಾರ ಗೌರವ ನೀಡಿ ಲಕ್ಷ್ಮಿ ಸ್ವರೂಪದಲ್ಲಿ ಕಾಣುವ ಏಕೈಕ ಸಂಸ್ಕೃತಿ ಬಂಜಾರ ಸಂಸ್ಕೃತಿ. ಏಕರೂಪದ ಆಚರಣೆಗಳು ಭಾಷೆ ಸಂಪ್ರದಾಯ ಬಂಜಾರ ಸಮುದಾಯದ ಅಸ್ಮಿತೆಯಾಗಿದೆ ಎಂದು ತಿಳಿಸಿದರು.

‘ಜಾಗತಿಕ ಸವಾಲುಗಳು ಹಾಗೂ ಬಂಜಾರ ಯುವಜನತೆ’ ವಿಚಾರ ಗೋಷ್ಠಿಯಲ್ಲಿ ಸ್ಪರ್ಧಾ ಕರ್ನಾಟಕ ಅಕಾಡೆಮಿ ಶಿವಮೊಗ್ಗದ ಅಧ್ಯಕ್ಷ ನಂಜಾನಾಯ್ಕ ಮಾತನಾಡಿ, ಸಾಧನೆಗೆ ಬಡತನ ಅಡ್ಡಿಯಾಗಲಾರದು ಅದು ನಮಗೆ ಸಾಧಿಸುವ ಛಲವನ್ನು ನೀಡುತ್ತದೆ ಹಾಗಾಗಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬಂಜಾರ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಬೇಕು ಐಎಎಸ್, ಐಪಿಎಸ್, ಕೆಎಎಸ್ ನಂತಹ ಪರೀಕ್ಷೆಗಳಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮರಿಯಮ್ಮ ಮಹಾಮಠ ಸಾಲೂರ್ ಗುರುಗಳಾದ ಶ್ರೀ ಸೈನಾ ಭಗತ್ ಮಹಾರಾಜರು ಆಶೀರ್ವಚನ ನೀಡಿದರು. ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಡಾ.ಓಂಕಾರ ನಾಯಕ್ ಅವರು ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಡಾ.ವಸಂತ ನಾಯಕ್ ಹಾಗೂ ಡಾ.ಪ್ರಕಾಶ್ ನಾಯಕ್ ಸಂವಾದ ನಡೆಸಿ ಕೊಟ್ಟರು. ಲಕ್ಕೀಶ ಬಂಜಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ ನಾಯಕ್, ತಾಲೂಕು ಬಂಜಾರ ಸೇವಾ ಸಂಘದ ಅಧ್ಯಕ್ಷ ಕುಮಾರನಾಯ್ಕ, ಸಹಾಯಕ ಪ್ರಾಧ್ಯಾಪಕ ಕುಮಾರ್ ನಾಯಕ್, ಪ್ರಾಚಾರ್ಯ ಹೋಬಾನಾಯ್ಕ, ನಾಗ ನಾಯ್ಕ್, ಸಾಧನ ಶಂಕರ್ ಅಕಾಡೆಮಿಯ ಅಧ್ಯಕ್ಷರಾದ ಶಂಕರ್ ನಾಯ್ಕ ಇತರರು ಉಪಸ್ಥಿತರಿದ್ದರು.

Share this article