ಹಿರಿಯ ರಾಜಕೀಯ ಮುತ್ಸದ್ದಿ, ಹೋರಾಟಗಾರ ಕಾಮ್ರೇಡ್ ಡಿ.ಸಿ ಮಾಯಣ್ಣನವರ ಹೆಸರನ್ನು ನಗರದಲ್ಲಿನ ಯಾವುದಾದರೂ ಒಂದು ವೃತ್ತಕ್ಕೆ ಮುಂದಿನ ಒಂದು ತಿಂಗಳಲ್ಲಿ ನಗರಸಭೆ ವತಿಯಿಂದ ನಾಮಕರಣಗೊಳಿಸಲಾಗುವುದು ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
ಕನ್ನಡಪ್ರಭ ವಾರ್ತೆ ಭದ್ರಾವತಿ
ಹಿರಿಯ ರಾಜಕೀಯ ಮುತ್ಸದ್ದಿ, ಹೋರಾಟಗಾರ ಕಾಮ್ರೇಡ್ ಡಿ.ಸಿ ಮಾಯಣ್ಣನವರ ಹೆಸರನ್ನು ನಗರದಲ್ಲಿನ ಯಾವುದಾದರೂ ಒಂದು ವೃತ್ತಕ್ಕೆ ಮುಂದಿನ ಒಂದು ತಿಂಗಳಲ್ಲಿ ನಗರಸಭೆ ವತಿಯಿಂದ ನಾಮಕರಣಗೊಳಿಸಲಾಗುವುದು ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
ಅವರು ಮಂಗಳವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಇತ್ತೀಚೆಗೆ ನಿಧನರಾದ ಕಾಮ್ರೇಡ್ ಡಿ.ಸಿ ಮಾಯಣ್ಣರವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಗತಿಪರ ಒಕ್ಕೂಟದ ಬೇಡಿಕೆಯಂತೆ, ಕ್ಷೇತ್ರದ ಪ್ರತಿಯೊಬ್ಬರ ಆಶಯದಂತೆ ನಗರದ ಯಾವುದಾದರೂ ಒಂದು ರಸ್ತೆ ಅಥವಾ ವೃತ್ತಕ್ಕೆ ಡಿ.ಸಿ ಮಾಯಣ್ಣನವರ ಹೆಸರು ನಾಮಕರಣಗೊಳಿಸಲಾಗುವುದು. ಈ ಸಂಬಂಧ ಒಂದು ತಿಂಗಳಲ್ಲಿ ಆದೇಶ ಪ್ರತಿ ನೀಡಲಾಗುವುದು. ಈ ಸಂಬಂಧ ಕಾರ್ಯಕ್ರಮ ಆಯೋಜಿಸಿ ಪ್ರಾಮಾಣಿಕವಾಗಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕಾಗಿದೆ ಎಂದರು.
ನಗರದಲ್ಲಿ ಆಶ್ರಯ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳಿಗೆ ಇನ್ನೂ ಬಹುತೇಕ ಮಂದಿ ಅರ್ಜಿ ಹಾಕಿಲ್ಲ. ಮನೆ ಇಲ್ಲದವರು ತಕ್ಷಣ ಅರ್ಜಿ ಹಾಕುವ ಮೂಲಕ ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆಶ್ರಯ ಬಡಾವಣೆಗೆ ಡಿ.ಸಿ ಮಾಯಣ್ಣನವರ ಹೆಸರನ್ನು ನಾಮಕರಣಗೊಳಿಸುವ ವಿಚಾರವನ್ನು ಎಲ್ಲರೂ ಸೇರಿ ಮತ್ತೊಮ್ಮೆ ಚರ್ಚಿಸಿ ತೀರ್ಮಾನಿಸಿ. ಒಂದು ವೇಳೆ ಸಾಧ್ಯವಾದರೆ ಬಡಾವಣೆಗೂ ಅವರ ಹೆಸರನ್ನು ನಾಮಕರಣಗೊಳಿಸಲಾಗುವುದು ಎಂದರು.
ಇಂದಿನ ಯುವ ಪೀಳಿಗೆಗೆ ಡಿ.ಸಿ ಮಾಯಣ್ಣನವರ ಇತಿಹಾಸ ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ಡಿ.ಸಿ ಮಾಯಣ್ಣನವರ ಕುರಿತ ಇತಿಹಾಸ ತಿಳಿಸುವ ಮೂಲಕ ಅವರ ಆದರ್ಶತನ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದರು.
ಒಕ್ಕೂಟದ ಅಧ್ಯಕ್ಷ ಪ್ರೊ. ಎಂ. ಚಂದ್ರಶೇಖರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಸತ್ಯ ಭದ್ರಾವತಿ, ಕೆ.ಎಲ್ ಅಶೋಕ್, ಶಿವಬಸಪ್ಪ, ಬಿ.ಕೆ ಜಗನ್ನಾಥ್, ಬಸವರಾಜ ಬಿ. ಆನೇಕೊಪ್ಪ, ಸಾಗರ ಕಾರ್ವಾಕರ್ ರಾಘವೇಂದ್ರ, ಸುರೇಶ್, ಚಿನ್ನಯ್ಯ, ಜಿ. ರಾಜು, ಎಚ್. ರವಿಕುಮಾರ್, ವಿ. ವಿನೋದ್, ರಾಜೇಂದ್ರ, ದೊರೈ, ಯಲ್ಲೋಜಿರಾವ್, ಡಿ. ರಾಜು, ಹನುಮಕ್ಕ, ಎಸ್.ಕೆ ಸುಧೀಂದ್ರ, ಮೂರ್ತಿ, ಧರ್ಮರಾಜ್, ಕಾಣಿಕ್‌ರಾಜ್, ಸುಕನ್ಯ, ಉಮಾ, ತೀರ್ಥೇಶ್, ನಾರಾಯಣ, ಕುಮಾರಸ್ವಾಮಿ, ಐಸಾಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.