ಶಿವಮೊಗ್ಗ: ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಗಣಪತಿ ಮತ್ತು ವಾಸುಕಿ ದೇವರ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು, ಕೂಡಲಿ ಕ್ಷೇತ್ರದ ಶ್ರೀಗಳು ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಷ್ಟ್ರಭಕ್ತ ಬಳಗದ ಪ್ರಮುಖ ಕೆ.ಈ.ಕಾಂತೇಶ್ ಮಾತನಾಡಿ, ಈ ದೇವಾಲಯ ನಮಗೆಲ್ಲರಿಗೂ ಶಕ್ತಿಕೇಂದ್ರವಾಗಿದೆ. ಜೂನ್ 5 ರಂದು ಇಡೀ ದೇಶವೇ ಶಿವಮೊಗ್ಗದಲ್ಲಿ ನಡೆದ ಈ ದುರ್ಘಟನೆಯ ಬಗ್ಗೆ ಗಮನಹರಿಸಿತ್ತು. ಅನ್ಯಮತೀಯನೊಬ್ಬ ನಿರ್ಮಾಣ ಹಂತದಲ್ಲಿರುವ ಮನೆಯ ಮುಂಭಾಗದಲ್ಲಿದ್ದ ಗಣೇಶ ಮತ್ತು ನಾಗನ ಪ್ರತಿಮೆಗೆ ಭಂಗ ಉಂಟು ಮಾಡಿದ್ದ. ಆ ಸಂದರ್ಭದಲ್ಲಿ ಸ್ಥಳೀಯರು ಸೇರಿದಂತೆ ಇಡೀ ಹಿಂದೂ ಸಮಾಜ ಒಗ್ಗಟ್ಟಿನಿಂದ ಈ ಘಟನೆಯನ್ನು ಖಂಡಿಸಿತ್ತು. ಆರೋಪಿಯನ್ನು ಬಂಧಿಸಬೇಕೆಂದು ರಾಷ್ಟ್ರಭಕ್ತರ ಬಳಗ ಆಗ್ರಹಿಸಿತ್ತು. ಜಿಲ್ಲಾಡಳಿತ ಅದಕ್ಕೆ ಸ್ಪಂದಿಸಿ, ಆರೋಪಿ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು. ಈ ಸಂದರ್ಭದಲ್ಲಿ ಎಲ್ಲಾ ಕಾರ್ಯಕರ್ತರು ಮತ್ತು ಸ್ಥಳೀಯ ಹಿಂದೂ ಸಂಘಟನೆಗಳ ಪ್ರಮುಖರು ಒಟ್ಟಾಗಿ ಈ ದೇವಾಲಯದ ಪುನರ್ ನಿರ್ಮಾಣಕ್ಕೆ ಮತ್ತು ಶಾಶ್ವತ ಕಟ್ಟಡಕ್ಕೆ ಮುಂದಾಗಿ ಕೇವಲ 5 ತಿಂಗಳೊಳಗೆ ಪೂರ್ಣಗೊಳಿಸಿದೆ ಎಂದು ತಿಳಿಸಿದರು.
ಹಿಂದೂ ಸಮಾಜದ ಅಸ್ತಿತ್ವ ಉಳಿವಿಗೆ
ನಡೆದ ಹೋರಾಟದ ಸಂಕೇತ: ಶಾಸಕ
ಶಿವಮೊಗ್ಗ: ಕಳೆದ ಜೂನ್ 5 ರಂದು ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಡೆದ ಮತಾಂಧರ ಹೇಡಿ ಕೃತ್ಯದಿಂದಾಗಿ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ತೀವ್ರ ಧಕ್ಕೆಯುಂಟು ಮಾಡಿತ್ತು. ಹಿಂದೂ ಸಮಾಜದ ಮೇಲೆ ನೂರಾರು ವರ್ಷಗಳಿಂದ ನಿರಂತರ ಆಕ್ರಮಣಗಳು ನಡೆಯುತ್ತಾ ಬಂದಿದ್ದರೂ, ಈ ಆಕ್ರಮಣಗಳನ್ನು ಎದುರಿಸಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದೇವೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.ಸೋಮವಾರ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ವಿಜಯ ಗಣಪತಿ ಮತ್ತು ವಾಸುಕಿ ದೇವಸ್ಥಾನದ ಉದ್ಘಾಟನೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ಘಟನೆಯು ಮತ್ತೊಮ್ಮೆ ಅಖಂಡ ಭಾರತದ ಸಂಸ್ಕೃತಿ, ಪರಂಪರೆ ಮತ್ತು ಹಿಂದುತ್ವದ ಮೌಲ್ಯಗಳನ್ನು ಕಾಪಾಡಿಕೊಂಡು, ಧರ್ಮ ರಕ್ಷಣೆಗಾಗಿ ಹೋರಾಡುವ ನಮ್ಮ ಬದ್ಧತೆಯನ್ನು ಬಲಪಡಿಸಿದೆ ಎಂದರು.
ಪ್ರತಿ ಆಕ್ರಮಣಕ್ಕೂ ನಮ್ಮ ಧರ್ಮ ಮತ್ತು ಸಂಸ್ಕೃತಿಯ ಪುನರುತ್ಥಾನವೇ ಸೂಕ್ತ ಉತ್ತರ. ಈ ನಿಟ್ಟಿನಲ್ಲಿ ಹಿಂದು ಸಂಘಟನೆಗಳು ಹಾಗೂ ಭಕ್ತರು ನಿರಂತರ ಹೋರಾಟ ನಡೆಸಿದ ಪರಿಣಾಮ ಇದರ ಜೊತೆಯಲ್ಲಿ ಸಾಮೂಹಿಕ ಪ್ರಯತ್ನ, ಸಾರ್ವಜನಿಕ ಏಕತೆಯ ಬಲ ಹಾಗೂ ಚುನಾಯಿತ ಪ್ರತಿನಿಧಿಗಳ ಬದ್ಧತೆಯ ಫಲವಾಗಿ ರಾಗಿ ಗುಡ್ಡದ ದೇವಸ್ಥಾನವು ತನ್ನ ಮೂಲ ಪಾವಿತ್ರ್ಯತೆ ಮತ್ತು ವೈಭವವನ್ನು ಪುನಃ ಪಡೆದುಕೊಂಡಿದೆ ಎಂದರು. ಸೋಮವಾರ ದೇವಸ್ಥಾನದ ಆವರಣದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಸಕಲ ವಿಧಾನಗಳೊಂದಿಗೆ ಶ್ರೀ ವಿಘ್ನೇಶ್ವರನ ಪ್ರತಿಷ್ಠಾಪನ ಮಹೋತ್ಸವವು ಅದ್ಧೂರಿಯಾಗಿ ನೆರವೇರಿದೆ. ಈ ವಿಜಯವು ಕೇವಲ ಒಂದು ದೇವಸ್ಥಾನದ ಪುನರ್‌ನಿರ್ಮಾಣವಲ್ಲ, ಇದು ಧರ್ಮದ ರಕ್ಷಣೆಗೆ, ನಂಬಿಕೆಯ ಗೌರವಕ್ಕೆ ಮತ್ತು ಹಿಂದೂ ಸಮಾಜದ ಅಸ್ತಿತ್ವದ ಉಳಿವಿಗೆ ನಡೆದ ಹೋರಾಟದ ಸಂಕೇತವಾಗಿದೆ. ಹಿಂದು ಧರ್ಮದ ಗೌರವ ಉಳಿಸುವುದು ನಮ್ಮ ಕರ್ತವ್ಯ, ಅದಕ್ಕಾಗಿ ಹೋರಾಡುವುದು ನಮ್ಮ ಧರ್ಮ ಎಂದರು.