ಬ್ಯಾಡಗಿ: ದೇವಸ್ಥಾನಗಳು ಕೇವಲ ವಿಗ್ರಹಗಳನ್ನು ಪೂಜಿಸುವ ಸ್ಥಳಗಳಲ್ಲ, ಅವು ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಬಿಂಬಿಸುವ ನೆಮ್ಮದಿ ಕೇಂದ್ರಗಳಾಗಿವೆ. ಇಂದಿನ ಧಾವಂತದ ಜೀವನದಲ್ಲಿ ಮಾನಸಿಕ ಶಾಂತಿ ಮತ್ತು ನೆಮ್ಮದಿಗಾಗಿ ಜನರು ದೇವಾಲಯಗಳ ಮೊರೆ ಹೋಗುತ್ತಾರೆ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಬ್ಯಾಡಗಿ ವಿಧಾನಸಭಾ ಕ್ಷೇತ್ರಾದ್ಯಂತ ಈ ವರೆಗೆ ₹8 ಕೋಟಿ ವೆಚ್ಚಗಳಲ್ಲಿ ಸುಮಾರು ಹತ್ತಕ್ಕು ಹೆಚ್ಚು ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತರುವ ಮೂಲಕ ಸಮುದಾಯ ಭವನ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ರಾಣಿಬೆನ್ನೂರಿನ ಶನೇಶ್ವರಮಠದ ಶಿವಯೋಗಿ ಶಿವಾಚಾರ್ಯರು ಶ್ರೀಗಳು ಮಾತನಾಡಿ, ದೇವಾಲಯದ ಆವರಣದಲ್ಲಿರುವ ಶಾಂತಿಯುತ ವಾತಾವರಣ, ಘಂಟೆಯ ನಾದ, ಮಂತ್ರ ಘೋಷಗಳು ಮತ್ತು ದೀಪಾಲಂಕಾರಗಳು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ನೆಮ್ಮದಿಯನ್ನು ನೀಡುತ್ತವೆ. ಧಾರ್ಮಿಕ ಆಚರಣೆಗಳು ಮನುಷ್ಯನಿಗೆ ಶಿಸ್ತು ಮತ್ತು ಧರ್ಮದ ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ನೀಡುತ್ತವೆ ಎಂದರು.ಪ್ರಸಕ್ತ ದಿನಗಳಲ್ಲಿ ಜೀವನದ ಜಂಜಾಟಗಳಿಂದ ದೂರವಾಗಿ, ಮನಸ್ಸಿಗೆ ನೆಮ್ಮದಿ ಮತ್ತು ಜ್ಞಾನವನ್ನು ಪಡೆಯಲು ದೇವಸ್ಥಾನಗಳಿಗೆ ಭೇಟಿ ನೀಡುವುದು ಅತ್ಯಗತ್ಯವಾಗಿದೆ. ದೇಹವೆಂಬ ದೇವಾಲಯಕ್ಕೆ ಜ್ಞಾನದ ಕಳಸದ ಮೂಲಕ ಧರ್ಮನೀತಿಗಳನ್ನು ಪಾಲಿಸಿದಾಗ ಸಾಮಾಜಿಕ ಶಾಂತಿ, ನೆಮ್ಮದಿಗಳು ಎಲ್ಲೆಡೆ ನೆಲೆಸಲು ಸಾಧ್ಯವಾಗಲಿದೆ ಎಂದರು.