ಕನ್ನಡಪ್ರಭ ವಾರ್ತೆ ನಾಗಮಂಗಲ
ಹಳ್ಳಿಗಳಲ್ಲಿ ದೇವಸ್ಥಾನಗಳನ್ನು ಕಟ್ಟುವುದರಿಂದ ಯಾರಿಗೆ ಏನು ಲಾಭ ಎನ್ನುವುದಕ್ಕಿಂತ ಪ್ರತಿಯೊಬ್ಬರ ಮನಸ್ಸಿನಲ್ಲಿ ಎಲ್ಲೂ ಸಿಗಲಾರದ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ಜವರನಹಳ್ಳಿಯಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ಶ್ರೀಅರಸಮ್ಮದೇವಿ 24ನೇ ದಿನದ ನಿತ್ಯ ಪೂಜಾ ಮಹೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದ ಸಚಿವರು, ಗ್ರಾಮಸ್ಥರಲ್ಲಿ ಕೆಲ ಸಣ್ಣ ಪುಟ್ಟ ಭಿನ್ನಾಭಿಪ್ರಾಯ, ಅಸಮಾಧಾನ ಉಂಟಾದ ಸಮಯದಲ್ಲಿ ದೇವಸ್ಥಾನಕ್ಕೆ ಬಂದು ಕೆಲ ಸಮಯ ಕಳೆದರೆ ಎಲ್ಲವೂ ಸಮಾಧಾನವಾಗುತ್ತದೆ ಎಂದರು.
ಕಷ್ಟಪಟ್ಟು ನಿರ್ಮಿಸುವ ದೇವಸ್ಥಾನಗಳಲ್ಲಿ ನಿರಂತವಾಗಿ ಪೂಜೆಗಳು ನಡೆದರೆ ಮಾತ್ರ ಊರಿಗೆ ಹಾಗೂ ನಾಡಿಗೆ ಒಳ್ಳೆಯದಾಗುತ್ತದೆ. ಹಾಗಾಗಿ ದೇವಸ್ಥಾನವನ್ನು ಕಟ್ಟುವುದು ಎಷ್ಟು ಮುಖ್ಯವೋ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದೂ ಕೂಡ ಅಷ್ಟೇ ಮುಖ್ಯ ಎಂದರು.ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಕಳೆದುಕೊಂಡಿರುವುದು ದೇಶಕ್ಕೆ ಬಹುದೊಡ್ಡ ನಷ್ಟವಾಗಿದೆ. ಅಮೆರಿಕಾದಂತಹ ದೊಡ್ಡ ರಾಷ್ಟ್ರವನ್ನೇ ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ ಕೀರ್ತಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ ಎಂದರು.
ನಮ್ಮ ದೇಶದಲ್ಲಿಂದು ನಾವೆಲ್ಲರೂ ಸುಭದ್ರವಾಗಿದ್ದೇ ಎಂದರೆ ಉತ್ತಮ ಆರ್ಥಿಕ ಸ್ಥಿತಿ ತಂದು ಕೊಟ್ಟವರು ಮನಮೋಹನ್ ಸಿಂಗ್. ಅಂತಹ ಮತ್ತೊಬ್ಬ ಶ್ರೇಷ್ಠವ್ಯಕ್ತಿ ದೇಶದಲ್ಲಿ ಮತ್ತೆ ಹುಟ್ಟುತ್ತಾರೆಂಬುದು ಕನಸಿನ ಮಾತು ಎಂದರು.ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮನಮೋಹನ್‌ಸಿಂಗ್ ಅವರು ಅರ್ಥಶಾಸ್ತ್ರದಲ್ಲಿ ಪರಿಣಿತಿ ಪಡೆದು ಒಬ್ಬ ಧಕ್ಷ ಅಧಿಕಾರಿಯಾಗಿ, ಕಾರ್ಯದರ್ಶಿಯಾಗಿ ಆರ್‌ಬಿಐ ಗೌರ್‍ನರ್ ಆಗಿ ಸಚಿವರಾಗಿ ನಂತರ ಪ್ರಧಾನಿಯಾಗಿ ಪ್ರಪಂಚದ ಅತ್ಯಂತ ಶ್ರೇಷ್ಠ ಆರ್ಥಿಕ ಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವುದು ಇಡೀ ದೇಶ ಖುಷಿ ಪಡುವ ವಿಚಾರ ಎಂದು ಸಿಂಗ್ ಅವರನ್ನು ಬಣ್ಣಿಸಿದರು.
ಇದಕ್ಕೂ ಮುನ್ನ ಅರಸಮ್ಮದೇವಿಯ 24ನೇ ದಿನದ ನಿತ್ಯ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡ ಶ್ರೀಗಳು ಮತ್ತು ಗಣ್ಯರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ವೇದಿಕೆಗೆ ಆಗಮಿಸುತ್ತಿದ್ದಂತೆ ಭೈರವೈಕ್ಯ ಡಾ.ಬಾಲಗಂಗಾಧರಶ್ರೀಗಳ ಪುತ್ಥಳಿ, ಡಾ.ಮನಮೋಹನ್ ಸಿಂಗ್ ಮತ್ತು ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಗ್ರಾಮದ ನಿವೃತ್ತ ಬಿಇಒ ಜಗದೀಶ್ ಸೇರಿದಂತೆ ಕೆಲ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದ ಬಳಿಕ ಕಾಯಕಯೋಗಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಶ್ರೀಮಠದ ಸತ್ಕೀರ್ತಿನಾಥ ಸ್ವಾಮೀಜಿ, ಹೇಮಗಿರಿ ಮತ್ತು ಧಾರವಾಡ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಚಿತ್ರ ನಟರಾದ ಶ್ರೀನಾಥ್, ವಿನೋದ್ ರಾಜ್, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ದಿನೇಶ್ ಸೇರಿದಂತೆ ನೂರಾರು ಮಂದಿ ಭಕ್ತರು ಇದ್ದರು.