ಸಾರ್ವಜನಿಕ ಗಣೇಶೋತ್ಸವಕ್ಕೆ ಬೆಸ್ಕಾಂ ಮಾರ್ಗಸೂಚಿ ಬಿಡುಗಡೆ : ತಾತ್ಕಾಲಿಕ ವಿದ್ಯುತ್ ಸಂಪರ್ಕ

KannadaprabhaNewsNetwork |  
Published : Sep 05, 2024, 02:25 AM ISTUpdated : Sep 05, 2024, 07:17 AM IST
ಬೆಸ್ಕಾಂ | Kannada Prabha

ಸಾರಾಂಶ

ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ಬೆಸ್ಕಾಂ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಲು ಉಪ ವಿಭಾಗೀಯ ಅಧಿಕಾರಿಗಳಿಗೆ ಸೂಚಿಸಿದೆ.

 ಬೆಂಗಳೂರು :  ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಣೆಗಾಗಿ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆಯಲು ಆಯಾ ಉಪ ವಿಭಾಗೀಯ ಅಧಿಕಾರಿಗಳಿಂದಲೇ ಅನುಮತಿ ಪಡೆಯಬೇಕು ಎಂಬುದು ಸೇರಿದಂತೆ ಸಾರ್ವಜನಿಕ ಗಣೇಶೋತ್ಸವ ಆಚರಣೆ ಬಗ್ಗೆ ಬೆಸ್ಕಾಂ ಮಾರ್ಗಸೂಚಿ ಪ್ರಕಟಿಸಿದೆ.

ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ವಿಳಂಬ ಮಾಡದೆ ನಿಯಮಾವಳಿಗಳ ಪ್ರಕಾರ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಂತೆ ಉಪವಿಭಾಗೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಹಬ್ಬದ ಸಂಭ್ರಮದ ಜತೆಗೆ ಸುರಕ್ಷತೆ ಬಗ್ಗೆಯೂ ಸಾವರ್ಜನಿಕರು ಕಾಳಜಿ ವಹಿಸಬೇಕು. ಗಣೇಶೋತ್ಸವಕ್ಕೆ ಬೆಳಕಿನ ವ್ಯವಸ್ಥೆ, ದೀಪಾಲಂಕಾರಕ್ಕೆ ಬೆಸ್ಕಾಂ ವತಿಯಿಂದ ಸಹಕಾರ ನೀಡಲಾಗುವುದು. ಆದರೆ ಸಾರ್ವಜನಿಕ ಗಣೇಶೋತ್ಸವದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ವೇಳೆ ಕೈಗೊಳ್ಳ ಬೇಕಾದ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಮನವಿ ಮಾಡಿದೆ.

ಸಂಪರ್ಕ ಪಡೆಯುವುದು ಹೇಗೆ?

ತಾತ್ಕಲಿಕ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವಾಗ ಸಂಬಂಧಪಟ್ಟ (ಬಿಬಿಎಂಪಿ/ಬಿಡಿಎ/ಗ್ರಾಮ ಪಂಚಾಯಿತಿ/ಆರಕ್ಷಕ ಠಾಣೆ) ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಪಡೆದ ಬಳಿಕ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಥವಾ ಸಹಾಯಕ ಎಂಜಿನಿಯರ್‌ಗಳು ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲು ನಿರ್ಮಾಣ ಮಾಡಿರುವ ಪೆಂಡಾಲ್ ಅಥವಾ ಸಮಾರಂಭ ಸ್ಥಳದ ಸುರಕ್ಷತೆಯನ್ನು ಖಾತರಿ ಪಡಿಸಬೇಕು. ವೈರಿಂಗ್ ಸುರಕ್ಷತೆ, ಎಂ.ಸಿ.ಬಿ ಮತ್ತು ಇಐಎ ಅಳವಡಿಕೆಯ ಬಗ್ಗೆ ನೋಂದಾಯಿತ ವಿದ್ಯುತ್ ಗುತ್ತಿಗೆದಾರರಿಂದ ವೈರಿಂಗ್ ಪೂರ್ಣಗೊಂಡಿರುವ ವರದಿಯನ್ನು ಪಡೆದು ಸ್ಥಳ ಪರಿಶೀಲಿಸಿದ ನಂತರ ಸಂಪರ್ಕ ಕಲ್ಪಿಸಲಾಗುವುದು. ತಾತ್ಕಾಲಿಕ ವಿದ್ಯುತ್ ಸಂಪರ್ಕದ ನಿರೀಕ್ಷಿತ ಸಮಯ ಮುಗಿದ ಬಳಿಕ ಅಂತಿಮ ರೀಡಿಂಗ್ ನಮೂದಿಸಿ ಮಾಪಕ ವಾಪಸ್ ನೀಡಬೇಕು ಎಂದು ತಿಳಿಸಿದೆ.ಸುರಕ್ಷತಾ ಸಲಹೆಗಳು

-ತೋರಣ, ಪೆಂಡಾಲ್‌, ಸೀರಿಯಲ್ ಲೈಟ್‌ ಹಾಕುವ ಮುನ್ನ ವಿದ್ಯುತ್ ತಂತಿಗಳ ಬಗ್ಗೆ ಗಮನವಹಿಸಬೇಕು.

-ಸೀರಿಯಲ್ ಲೈಟ್ ತಂತಿಗಳು ಸಮರ್ಪಕವಾಗಿ ಇನ್ಸುಲೇಟ್ ಆಗಿವೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಬೇಕು.

-ಸೀರಿಯಲ್‌ ಲೈಟ್‌, ದೀಪಗಳನ್ನು ಹಾಕುವಾಗ ವಿದ್ಯುತ್‌ ಕಂಬದಿಂದ ನೇರವಾಗಿ ಸಂಪರ್ಕ ಪಡೆಯಬಾರದು.

-ವಿದ್ಯುತ್ ತಂತಿ, ವಿದ್ಯುತ್ ಕಂಬ ಅಥವಾ ಪರಿವರ್ತಕ ಕೇಂದ್ರಗಳಿಗೆ ಚಪ್ಪರ, ಶಾಮಿಯಾನಗಳನ್ನು ಕಟ್ಟಬಾರದು.

-ಮೆರವಣಿಗೆ ವೇಳೆ ರಸ್ತೆ ಬದಿಯ ವಿದ್ಯುತ್ ಮಾರ್ಗದ ಬಗ್ಗೆ ಎಚ್ಚರ ವಹಿಸಬೇಕು. ವಿದ್ಯುತ್‌ ತಂತಿ ಮೇಲಕ್ಕೆ ಎತ್ತುವ ಪ್ರಯತ್ನಿಸಬಾರದು.

-ಮೆರವಣಿಗೆ ಮಾರ್ಗವನ್ನು ಮುಂಚಿತವಾಗಿ ಉಪವಿಭಾಗೀಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ನೆರವು ಪಡೆಯಬೇಕು.

-ತುಂಡಾದ ವೈರ್‌, ವಿದ್ಯುತ್‌ ಕಿಡಿ ಗಮನಕ್ಕೆ ಬಂದರೆ, ಕೂಡಲೇ 1912 ಸಹಾಯವಾಣಿಗೆ ಕರೆ ಮಾಡಿ.

-ವಿದ್ಯುತ್ ಪರಿಕರಗಳು ಇರುವ ಸ್ಥಳಗಳಲ್ಲಿ ‘ಡೇಂಜರ್ ಜೋನ್’ ಎಂದು ಸೂಚನಾ ಫಲಕ ಅಳವಡಿಸಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ