ಕೆಸರುಮಯ ಕಲ್ಲಡ್ಕದಲ್ಲಿ ಸುಗಮ ಸಂಚಾರಕ್ಕೆ ತಾತ್ಕಾಲಿಕ ಪರಿಹಾರ ಕೈಗೊಳ್ಳಿ: ಡಿಸಿ ಸೂಚನೆ

KannadaprabhaNewsNetwork | Published : Jun 13, 2024 12:50 AM

ಸಾರಾಂಶ

ವಿವಿಧೆಡೆಗಳಲ್ಲಿ ಹೆದ್ದಾರಿ ದಾಟುವುದಕ್ಕೆ ರ‍್ಯಾಂಪ್ ಮಾದರಿ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದೇವೆ, ತಹಸೀಲ್ದಾರ್‌ ಅವರು ಈ ಕುರಿತು ನಿಗಾ ವಹಿಸುತ್ತಾರೆ , ಮೂರ್ನಾಲ್ಕು ದಿನಗಳಲ್ಲಿ ಮತ್ತೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಡಿಸಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಕಲ್ಲಡ್ಕ ಹೆದ್ದಾರಿ ಅವ್ಯವಸ್ಥೆಯ ಕುರಿತು ವಾರದೊಳಗೆ ಕ್ರಮ ಕೈಗೊಳ್ಳುವುದಾಗಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡುರಾವ್‌ ಹೇಳಿಕೆ ನೀಡಿದ್ದ ಬೆನ್ನಲ್ಲೇ, ದ.ಕ. ಜಿಲ್ಲಾಧಿಕಾರಿ ಮುಲ್ಲೈಮುಗಿಲನ್‌ ಅವರು ಬುಧವಾರ ಕಲ್ಲಡ್ಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಿ.ಸಿ. ರೋಡು- ಅಡ್ಡಹೊಳೆ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ಜನತೆಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಬಿ.ಸಿ. ರೋಡಿನ ಸರ್ಕಲ್‌ನಿಂದ ಕಲ್ಲಡ್ಕವರೆಗಿನ ಕಾಮಗಾರಿಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕಲ್ಲಡ್ಕದಲ್ಲಿ ಮಳೆಯಿಂದ ಸರ್ವೀಸ್ ರಸ್ತೆ ಸಂಪೂರ್ಣ ಕೆಸರುಮಯಗೊಂಡು ಸಂಚಾರಕ್ಕೆ ತೊಡಕಾಗುತ್ತಿರುವ ಬಗ್ಗೆ ಅಂಗಡಿ ಮಾಲಕರು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿಯವರ ಗಮನಸೆಳೆದರು. ಬಂಟ್ವಾಳ ತಹಸೀಲ್ದಾರ್ ಅರ್ಚನಾ ಡಿ. ಭಟ್ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ವೇಳೆ ಸುಮಾರು ಅರ್ಧ ತಾಸು ಕಲ್ಲಡ್ಕದಲ್ಲೇ ಕಳೆದ ಜಿಲ್ಲಾಧಿಕಾರಿಯವರು ಹೆದ್ದಾರಿಯನ್ನು ಪರಿಶೀಲಿಸಿ ಜನತೆಗೆ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸಲು ಎನ್‌ಎಚ್‌ಎಐ ಹಾಗೂ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಸೋಮವಾರ ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕಲ್ಲಡ್ಕ ಹೆದ್ದಾರಿ ಅವ್ಯವಸ್ಥೆಯ ಕುರಿತು ಪ್ರಸ್ತಾಪಗೊಂಡಿದ್ದು, ಹೀಗಾಗಿ ಶೀಘ್ರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಸೂಚಿಸಿದ್ದಾರೆ. ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಸೂಕ್ತ ಚರಂಡಿ ವ್ಯವಸ್ಥೆ ಮಾಡಬೇಕು. ಕಲ್ಲಡ್ಕದಲ್ಲಿ ಅಗತ್ಯವಿರುವ ಕಡೆ ಪಾದಚಾರಿಗಳಿಗೆ ಹೆದ್ದಾರಿ ಕ್ರಾಸ್ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಜತೆಗೆ ವಾಹನಗಳ ಸುಗಮ ಸಂಚಾರಕ್ಕೆ ಜಲ್ಲಿ ಹುಡಿ ಹಾಕುವಂತೆ ಕೆಎನ್‌ಆರ್ ಗುತ್ತಿಗೆ ಸಂಸ್ಥೆಯ ಎಜಿಎಂ ರೋಹಿತ್ ರೆಡ್ಡಿಗೆ ‌ ಜಿಲ್ಲಾಧಿಕಾರಿ ಸೂಚಿಸಿದರು.

ಈ ವೇಳೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಬಂಟ್ವಾಳ ಸಂಚಾರ ಠಾಣಾ ಪಿಎಸ್‌ಐ ಸುತೇಶ್ ಕೆ.ಪಿ., ಕಂದಾಯ ನಿರೀಕ್ಷಕರಾದ ಜನಾರ್ದನ ಜೆ., ವಿಜಯ ಆರ್., ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚನೆ : ಡಿಸಿ

ಈ ವೇಳೆ ಕನ್ನಡಪ್ರಭದ ಜೊತೆ ಮಾತನಾಡಿದ ಜಿಲ್ಲಾಧಿಕಾರಿಯವರು, ಮಳೆಗಾಲಕ್ಕೆ ಮುನ್ನ ಮಾರ್ಚ್ ತಿಂಗಳಲ್ಲೇ ಪರಿಶೀಲನೆ ನಡೆಸಿ ಹೆದ್ದಾರಿ ಕಾಮಗಾರಿ ನಿರ್ವಹಿಸುವವರಿಗೆ ಸಮಸ್ಯೆ ಸೃಷ್ಟಿಸದಂತೆ ಸೂಚನೆ ನೀಡಲಾಗಿದೆ. ಚರಂಡಿ ಕಾಮಗಾರಿ ನಡೆದು ಡಾಮಾರು ಹಾಕಿರುವಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಮಧ್ಯ ಭಾಗದಲ್ಲಿ ಕಾಮಗಾರಿ ಬಾಕಿ ಇದ್ದು, ಈ ಪ್ರದೇಶದಲ್ಲಿ ಸಮಸ್ಯೆ ಉಂಟಾಗಿದೆ. ಪ್ರಸ್ತುತ ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಎಚ್ಚರಿಕೆ ನೀಡಲಾಗಿದೆ. ವಿವಿಧೆಡೆಗಳಲ್ಲಿ ಹೆದ್ದಾರಿ ದಾಟುವುದಕ್ಕೆ ರ‍್ಯಾಂಪ್ ಮಾದರಿ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದೇವೆ, ತಹಸೀಲ್ದಾರ್‌ ಅವರು ಈ ಕುರಿತು ನಿಗಾ ವಹಿಸುತ್ತಾರೆ , ಮೂರ್ನಾಲ್ಕು ದಿನಗಳಲ್ಲಿ ಮತ್ತೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಡಿಸಿ ತಿಳಿಸಿದರು.ದ್ವಿಚಕ್ರ ವಾಹನದಲ್ಲಿ ಕೂತು ಪರಿಶೀಲಿಸಿದ ಡಿಸಿ...

ಕಲ್ಲಡ್ಕ ಕೆಳಗಿನ ಪೇಟೆಯಿಂದ ಮೇಲಿನ ಪೇಟೆಗೆ ಕಾಲ್ನಡಿಗೆಯಲ್ಲಿ ಸಂಚರಿಸಲು ಹೆದ್ದಾರಿ ಕೆಸರುಮಯವಾಗಿದ್ದರಿಂದ ಜಿಲ್ಲಾಧಿಕಾರಿಯವರು ಆರ್‌.ಐ. ಜನಾರ್ದನ್‌ ಅವರ ಜೊತೆ ದ್ವಿಚಕ್ರವಾಹನದಲ್ಲಿ ಸಂಚರಿಸಿ ಅಚ್ಚರಿಮೂಡಿಸಿದರು. ಮೇಲಿನ ಪೇಟೆವರೆಗೆ ತೆರಳಿ ಅಲ್ಲಿ ರಸ್ತೆ ಅವ್ಯವಸ್ಥೆಯನ್ನು ಪರಿಶೀಲಿಸಿ. ನಾಗರಿಕರ ದೂರು ಆಲಿಸಿದರು. ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆ ಸವಾರ ಸಹಿತ ಡಿಸಿಯವರೂ ಕೂಡ ಹೆಲ್ಮೆಟ್‌ ಧರಿಸದೇ ಇರುವುದು ಇದೀಗ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

Share this article