ಕನ್ನಡಪ್ರಭ ವಾರ್ತೆ ಹಾಸನ
ಈ ಬಾರಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಭೂತಪೂರ್ವ ಫಲಿತಾಂಶಕ್ಕೆ ಶಿಕ್ಷಣ ಇಲಾಖೆ ವತಿಯಿಂದ ದಶ ಸೂತ್ರಗಳನ್ನು ಅಳವಡಿಸಲಾಗಿದ್ದು, ಶಿಕ್ಷಕರು ಸಹಕರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಕೆ. ಪಾಂಡು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಎಲ್ಲಾ ಶಾಲೆಗಳಲ್ಲೂ ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜು ಗೊಳಿಸಲಾಗುತ್ತಿದ್ದು, ಈ ಬಾರಿಯ ಫಲಿತಾಂಶದಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮ ವಹಿಸಲಾಗುತ್ತಿದೆ. ಪರೀಕ್ಷೆ ಸಮೀಪ ಇರುವ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆಸಿ ತಮ್ಮ ಜವಾಬ್ದಾರಿಗಳ ಬಗ್ಗೆ ಮಾಹಿತಿಯನ್ನು ಈಗಾಗಲೇ ನೀಡಲಾಗಿದೆ. ಈ ಬಾರಿ ಹಾಸನ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ೪೯೮ ಶಾಲೆಗಳು ಒಳಪಡಲಿದ್ದು, ಮೂರು ಹೊಸ ಪರೀಕ್ಷಾ ಕೇಂದ್ರಗಳು ಸೇರಿ ಒಟ್ಟು ೭೩ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ಸಿದ್ಧತೆ ನಡೆದಿದೆ. ೧೦,೧೮೦ ಗಂಡು ಹಾಗೂ ೧೦,೨೬ ಹೆಣ್ಣು ಮಕ್ಕಳು ಸೇರಿ ೨೦, ೪೪೦ ಮಕ್ಕಳು ಈ ಬಾರಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಉತ್ತಮ ಫಲಿತಾಂಶಕ್ಕೆ ದಶ ಸೂತ್ರಗಳು ಎಂದರೇ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಮಾಹಿತಿ ಕ್ರೋಢೀಕರಿಸುವುದು, ಪ್ರತಿ ಶಾಲೆಯಿಂದ ಶಿಕ್ಷಕರು ಮಕ್ಕಳ ಕಡತದೊಂದಿಗೆ ಅವರವರ ಮನೆಗೆ ಭೇಟಿ ನೀಡಬೇಕು ಎಂದರು.
ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಮನೆ ಮನೆಗೆ ಭೇಟಿ ನೀಡಿ ಪೋಷಕರು ಹಾಗೂ ಮಗುವಿನೊಂದಿಗೆ ಸಂವಾದಿಸಬೇಕು. ಟ್ಯೂಷನ್ ಕಲ್ಪನೆ ಇದೆಯೇ,ಮನೆಯಲ್ಲಿಯೇ ಶಿಕ್ಷಕರು ಬೋಧಿಸುವ ಕ್ರಮವಹಿಸಬೇಕು ಎಂದು ಹೇಳಿದರು. ಮಕ್ಕಳೇ ಆಯಾ ಅಧ್ಯಾಯಕ್ಕೆ ಅನುಗುಣವಾಗಿ ಪ್ರಶ್ನೆಗಳನ್ನು ತಯಾರಿಸುವುದು, ಮಕ್ಕಳೇ ತಯಾರಿಸಿರುವ ಪ್ರಶ್ನೆಗಳಿಗೆ ಮಕ್ಕಳೇ ಪುಸ್ತಕವನ್ನು ನೋಡಿ ಉತ್ತರ ಬರೆಯುವಿಕೆ, ಮಕ್ಕಳು ಬರೆದಿರುವ ಉತ್ತರವನ್ನು ಶಿಕ್ಷಕರು ಪರಿಶೀಲಿಸಿ ಅಂಕ ನೀಡುವುದು ಮತ್ತು ಕೀ ಆನ್ಸರ್ ಬಳಸುವುದು, ೬೨೫ಕ್ಕೆ ೬೨೫ ಅಂಕ ತೆಗೆಯುವ ಮಕ್ಕಳಿಗೆ ವಿಶೇಷ ಬೋಧನೆ ಕೊಡಲಾಗುವುದು. ಶೇಕಡ ನೂರಕ್ಕೆ ನೂರು ಅಂಕ ತೆಗೆಯುವ ಮಕ್ಕಳ ಉತ್ತರ ಪತ್ರಿಕೆಗಳನ್ನು ಪ್ರೊಜೆಕ್ಟರ್ ಮೂಲಕ ತೋರಿಸಿ ಹಿಂದುಳಿದ ಮಕ್ಕಳ ಕಲಿಕೆಯ ಮಟ್ಟ ಹೆಚ್ಚಿಸುವುದು ಹಾಗೂ ಮಕ್ಕಳಿಗೆ ಅಂತಿಮವಾಗಿ, ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಉತ್ತರವನ್ನು ಬರೆಯುವ ರೀತಿ ತಿಳಿಸಬೇಕು ಇವೆ ಹತ್ತು ಸೂತ್ರಗಳೆಂದರು.ನಮ್ಮ ಈ ಗುರಿಗೆ ಎಲ್ಲಾ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಕರಿಸಿ, ಎಸ್.ಎಸ್.ಎಲ್.ಸಿ ಯ ಫಲಿತಾಂಶದಲ್ಲಿ ಹಾಸನ ಜಿಲ್ಲೆಯನ್ನು ಈ ಬಾರಿ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಕೈ ಜೋಡಿಸುವಂತೆ ಮನವಿ ಮಾಡಿದರು.