ಬಸವರಾಜ ಮಠದ
ಕನ್ನಡಪ್ರಭ ವಾರ್ತೆ ಇಳಕಲ್ಲದೇಶದ ಪ್ರತಿಯೊಂದು ಕುಟುಂಬಕ್ಕೂ ಸೂರು ಕಲ್ಪಿಸಬೇಕೆಂಬ ಉದ್ದೇಶದಿಂದ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇವೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದ ಕಾರಣದಿಂದ 7 ದಶಕಗಳು ಸಮೀಪಿಸಿದರೂ ಅನೇಕ ಬಡವರು ಇನ್ನೂ ಗುಡಿಸಲು, ತಗಡಿನ ಶೆಡ್‌ನಲ್ಲಿಯೇ ವಾಸ ಮಾಡಬೇಕಾದ ಸ್ಥಿತಿ ಇದೆ.
ಹೌದು. ಇಳಕಲ್ಲ ನಗರದ ವಿಜಯ ಮಹಾಂತೇಶ್ವರ ಕರ್ತೃ ಗದ್ದುಗೆಯ ಹಿಂದಿರುವ ಸರ್ಕಾರ ಜಾಗದಲ್ಲಿ ನೇಕಾರರಿಗೆ ಮಂಜೂರಾಗಿರುವ ಮನೆಗಳು. ಅರ್ಧ ಗೋಡೆಗಳು ನಿರ್ಮಾಣವಾಗಿ 10 ವರ್ಷಗಳೇ ಕಳೆದಿವೆ. ಕೆಲ ಅಡಚಣೆ ಕಾರಣದಿಂದ ಅರ್ಧಕ್ಕೆ ನಿಂತ ಕೆಲಸ ಆರಂಭವಾಗಲೇ ಇಲ್ಲ. ದಶಕಗಳಿಂದ ಅದೇ ಸ್ಥಿತಿಯಲ್ಲಿವೆ. ಈಗ ಈ ಜಾಗ ಪಾಳು ಬಿದ್ದು ವಿಜಯಪುರದ ಬಾರಾಕಮಾನ್‌ನಂತೆ ಗೋಚರಿಸುತ್ತಿವೆ.ಶಾಸಕ ಕಾಶಪ್ಪನವರ ಕನಸಿನ ಯೋಜನೆ:ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಕ್ಷೇತ್ರದ ಶಾಸಕರಾಗಿದ್ದ ವಿಜಯಾನಂದ ಕಾಶಪ್ಪನವರ ಹಳ್ಳದ ನೀರಿನಿಂದ ತೊಂದರೆ ಅನುಭವಿಸುತ್ತಿರುವ ನೇಕಾರರಿಗೆ ೨೦೦ ಮನೆ ಮಂಜೂರು ಮಾಡಿಸಿ ಪ್ರತಿ ಮನೆಗೆ ₹೩.೫೦ ಲಕ್ಷ ವೆಚ್ಚ ನಿಗದಿಪಡಿಸಿ ಮನೆಗಳ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ಆದೇಶ ನೀಡಿದ್ದರು. ಮನೆ ಪೂರ್ಣಗೊಂಡ ಬಳಿಕ ಪಡೆಯಬೇಕಿದ್ದ 30 ಸಾವಿರ ವಂತಿಗೆ ಹಣವನ್ನು ನೇಕಾರರಿಂದ ಮೊದಲೇ ಕಟ್ಟಿಸಿಕೊಂಡು ಮನೆ ನಿರ್ಮಾಣ ಕೆಲಸ ಆರಂಭಿಸಲಾಯಿತು. ಆದರೆ, ಮನೆಗಳ ಕಾಮಗಾರಿ ಕಳಪೆಯಾಗಿದೆ ಎಂದು ಕೆಲ ನೇಕಾರರು ತಕರಾರು ತೆಗೆದಿದ್ದರಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಯಿತು.ನಂತರ ಬಿಜೆಪಿ ಸರ್ಕಾರ ಬಂದು ಶಾಸಕರಾದ ದೊಡ್ಡನಗೌಡ ಪಾಟೀಲರು ಈ ಮನೆಗಳಿಗೆ ಮರುಜೀವ ನೀಡಿ ಈಗಿನ ಕಟ್ಟಡದಲ್ಲಿ ನೇಕಾರರಿಗೆ ನೇಯ್ಗೆ ಮಾಡಲು ಸ್ಥಳಾವಕಾಶ ಆಗಲ್ಲ. ಕಾರಣ ಹೊಸ ನಕ್ಷೆ ತಯಾರಿಸಿ ನೇಯ್ಗೆ ಮನೆ ಬರುವಂತೆ ಮನೆ ಕಟ್ಟಲು ಪ್ಲಾನ್ ಮಾಡಿಸಿ ಮನೆ ಕಟ್ಟಲು ಆದೇಶ ಮಾಡಿಸಿದ್ದರು. ಅಷ್ಟರಲ್ಲಿಯೇ ಚುನಾವಣೆ ಬಂದು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬಂದು ವಿಜಯಾನಂದ ಕಾಶಪ್ಪನವರ ಶಾಸಕರಾದರು. ಯೋಜನೆ ಆರಂಭಿಸಿದ್ದ ಶಾಸಕ ಕಾಶಪ್ಪನವರ ಹಾಗೂ ಕಾಂಗ್ರೆಸ್ ಸರ್ಕಾರ ಮರಳಿ ಬಂದಿದ್ದರಿಂದ ಫಲಾನುಭವಿಗಳು ಹರ್ಷಗೊಂಡಿದ್ದರು. ಶಾಸಕರು ತಾವೇ ಆರಂಭಿಸಿದ ಯೋಜನೆಗೆ ಮುಕ್ತಿ ನೀಡಿ ಶೀಘ್ರ ಮನೆಗಳನ್ನು ಹಸ್ತಾಂತರವಾಗಲಿವೆ. ಹೊಸ ಮನೆಯಲ್ಲಿ ಸುಂದರ ಜೀವನ ಕಟ್ಟಿಕೊಳ್ಳಬಹುದು ಎಂದು ಕನಸು ಕಂಡಿದ್ದಾರೆ. ಆದರೆ ಶಾಸಕರಿಗೆ ಇರುವಷ್ಟು ಆಸ್ಥೆ, ಆಸಕ್ತಿ ಮತ್ತು ಯೋಜನೆ ಕುರಿತಾದ ಕಾಳಜಿ, ಪುರಸಭೆ ಅಧಿಕಾರಿಗಳಿಗೆ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಶಾಸಕರ ಕನಸಿನ ಯೋಜನೆ ಅಲ್ಲಿಗೆ ನಿಂತಿದೆ.ಬಾರಾಕಮಾನ್‌ನಂತೆ ಗೋಚರಿಸುತ್ತಿವೆ ಮನೆಗಳು:
ಮನೆಗಳನ್ನು ಸಿಮೆಂಟ್ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಲಿಂಟಲ್ ವರೆಗೆ ಗೋಡೆಗಳು ನಿರ್ಮಾಣವಾಗಿದ್ದು, ಸುತ್ತಮುತ್ತಲೂ ಕಸ, ಗಿಡಗಂಟೆ ಬೆಳೆದು ಪಾಳುಬಿದ್ದಿವೆ. ಯಾವಾಗ ಮನೆಗಳು ಪೂರ್ಣಗೊಳ್ಳುತ್ತವೆ. ಹೊಸ ಮನೆಯಲ್ಲಿ ಹೊಸ ಬೆಳಕು ಮೂಡುತ್ತದೆ ಎಂದು 10 ವರ್ಷಗಳಿಂದ ಬಡನೇಕಾರರು ಚಾತಕ ಪಕ್ಷಿಗಳಂತೆ ತಗಡಿನ ಶೆಡ್ ಮನೆಯಲ್ಲಿಯೇ ಕಾಲ ದೂಡುತ್ತಿದ್ದಾರೆ. 10 ವರ್ಷದಿಂದ ನಾವು ಈ ತಗಡಿನ ಮನೆಯಲ್ಲಿಯೇ ಇದ್ದೇವೆ. ಹೊಸ ಮನೆ ಕನಸು ನನಸಾಗುತ್ತದೆ ಎಂದು 10 ವರ್ಷಗಳಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದೇವೆ. ಶಾಸಕರೇ ನಮಗೆ ದಾರಿ ತೋರಬೇಕಿದೆ.- ಶಿವಪ್ಪ ನೇಕಾರ,
ಫಲಾನುಭವಿವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆಯ ಹಿಂದಿರುವ ನೇಕಾರ ಮನೆಗಳ ಕೆಸಲ ಕೆಲವು ಅಡಚಣೆಗಳಿಂದ ಬಂದ್ ಆಗಿತ್ತು. ಈಗ ಗುತ್ತಿಗೆದಾರನನ್ನು ಕರೆದು ತಾಕೀತು ಮಾಡಿದ್ದು, ಆದಷ್ಟು ಶೀಘ್ರ ಆ ಮನೆ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು.- ಶ್ರೀನಿವಾಸ ಜಾಧವ
ಪೌರಾಯುಕ್ತರು ಇಳಕಲ್ಲ ನಗರಸಭೆ.