ಸೋಮವಾರ ಖಾಸಗಿ ಫೈನಾನ್ಸ್‌ನವರು ನ್ಯಾಯಾಲಯದ ಆದೇಶ ಪ್ರತಿ ಜತೆ ಪೊಲೀಸರನ್ನು ಕರೆದುಕೊಂಡು ಬಂದು ಬಾಡಿಗೆ ಇದ್ದ ಲೀಲಾ ಪಾಚಂಗಿ ಕುಟುಂಬದವರನ್ನು ಹೊರಹಾಕಿ ಮನೆಯನ್ನು ಜಪ್ತಿ ಮಾಡಿದ್ದಾರೆ.
ನರಗುಂದ: ಇಲ್ಲಿನ ಮನೆ ಮಾಲೀಕರೊಬ್ಬರು ಖಾಸಗಿ ಫೈನಾನ್ಸ್‌ನಲ್ಲಿ ಪಡೆದ ಸಾಲವನ್ನು ಮರಳಿ ಪಾವತಿಸದ್ದಕ್ಕೆ ಬಾಡಿಗೆದಾರರನ್ನು ಹೊರಹಾಕಿ ಮನೆಯನ್ನು ಜಪ್ತಿ ಮಾಡಿದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಲೋದಿ ಗಲ್ಲಿ ನಿವಾಸಿ ಮಾಲತಿ ಭೀಮನಗೌಡ ಪಾಟೀಲ ಎಂಬವರು 2021ರಲ್ಲಿ ತಮ್ಮ ಮನೆ ಮೇಲೆ ಖಾಸಗಿ ಫೈನಾನ್ಸ್‌ನಲ್ಲಿ ₹6 ಲಕ್ಷ ಸಾಲ ಮಾಡಿದ್ದರು. ಅಲ್ಲದೇ ಮನೆಯನ್ನು ಲೀಲಾ ಪಾಚಂಗಿ ಎಂಬವರಿಗೆ ₹2.35 ಲಕ್ಷಕ್ಕೆ ಲೀಸ್ ಆಧಾರದಡಿ ಬಾಡಿಗೆ ನೀಡಿದ್ದರು. ಆದರೆ ಮನೆ ಮಾಲೀಕರು ಸಮಯಕ್ಕೆ ಸರಿಯಾಗಿ ಸಾಲದ ಕಂತು ತುಂಬಿರಲಿಲ್ಲ. ಹೀಗಾಗಿ ಖಾಸಗಿ ಫೈನಾನ್ಸ್‌ನವರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯ ಮನೆ ಸೀಜ್ ಮಾಡಲು ಆದೇಶ ನೀಡಿದೆ.
ಸೋಮವಾರ ಖಾಸಗಿ ಫೈನಾನ್ಸ್‌ನವರು ನ್ಯಾಯಾಲಯದ ಆದೇಶ ಪ್ರತಿ ಜತೆ ಪೊಲೀಸರನ್ನು ಕರೆದುಕೊಂಡು ಬಂದು ಬಾಡಿಗೆ ಇದ್ದ ಲೀಲಾ ಪಾಚಂಗಿ ಕುಟುಂಬದವರನ್ನು ಹೊರಹಾಕಿ ಮನೆಯನ್ನು ಜಪ್ತಿ ಮಾಡಿದ್ದಾರೆ.
ಬಾಡಿಗೆದಾರರ ಅಳಲು: ಹಲವು ವರ್ಷಗಳಿಂದ ನಾವು ಈ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ನಮಗೆ ಮನೆ ಮಾಲೀಕರು ಲೀಸ್ ಮೇಲೆ ಈ ಮನೆಯಲ್ಲಿ ವಾಸ ಮಾಡಲು ಬಾಂಡ್ ಮೇಲೆ ಒಪ್ಪಿಗೆ ಪತ್ರ ಬರೆದು ಕೊಟ್ಟಿದ್ದಾರೆ. ಆದರೆ ಮನೆ ಮೇಲೆ ಮಾಲೀಕರು ಸಾಲ ಪಡೆದಿದ್ದು, ನಮಗೆ ಗೊತ್ತಿಲ್ಲ. ನಮ್ಮನ್ನು ಖಾಸಗಿ ಫೈನಾನ್ಸ್‌ನವರು ಏಕಾಏಕಿ ಹೊರಹಾಕಿದ್ದು ನೋವು ತಂದಿದೆ ಎಂದು ಬಾಡಿಗೆದಾರರಾದ ಲೀಲಾ ಪಾಚಂಗಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ವಚನಗಳಲ್ಲಿದೆ ಬದುಕು ಬದಲಾಯಿಸುವ ಶಕ್ತಿ: ಕೆ.ಟಿ. ಪಾಟೀಲ
ನರಗುಂದ: ಬಸವಾದಿ ಶಿವಶರಣರ ವಚನಗಳಿಗೆ ಬದುಕನ್ನು ಬದಲಾಯಿಸುವ ಶಕ್ತಿ ಇದೆ. ಅವು ಮಾನವನ ಜೀವನದ ದಾರಿದೀಪವಾಗಿವೆ. ತಂತ್ರಜ್ಞಾನದ ಭರಾಟೆಯಲ್ಲಿ ಬದಲಾಗುತ್ತಿರುವ ಮನುಷ್ಯರ ಜೀವನಶೈಲಿಗೆ ಶಿವಶರಣರ ವಚನಗಳು ಸ್ಫೂರ್ತಿದಾಯಕವಾಗಿವೆ ಎಂದು ಶಿಕ್ಷಣ ಇಲಾಖೆಯ ಪ್ರಥಮದರ್ಜೆ ಸಹಾಯಕ ಕೆ.ಟಿ. ಪಾಟೀಲ ತಿಳಿಸಿದರು.ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 383ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಠ- ಮಾನ್ಯಗಳ ಆಧ್ಯಾತ್ಮಿಕ ಪರಂಪರೆಯಿಂದ ಸುಸಂಸ್ಕೃತ ಮತ್ತು ಸಾತ್ವಿಕ ಜೀವನವನ್ನು ಕಟ್ಟಿಕೊಳ್ಳಬಹುದು. ನಾವು ಆಧ್ಯಾತ್ಮಿಕ ಕೇಂದ್ರಗಳಿಂದ ದೂರ ಸರಿದು ಮೊಬೈಲ್ ಗೇಮ್ ಹಾಗೂ ಇನ್ನಿತರ ಮನುಷ್ಯನಿಗೆ ಮಾರಕವಾದಂತಹ ತಂತ್ರಜ್ಞಾನಗಳ ಅತಿಯಾದ ಬಳಕೆಯ ಕಡೆಗೆ ಮುಖ ಮಾಡುತ್ತಿದ್ದೇವೆ. ಇದು ಹೀಗೆಯೆ ಮುಂದುವರಿದರೆ ನಮ್ಮ ಪರಂಪರೆ ಇತಿಹಾಸ ವಿನಾಶದಂಚಿಗೆ ಸಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಾನಪದ ಚಿಂತಕ ಪ್ರೊ. ಆರ್.ಬಿ. ಚಿನಿವಾಲರ ಮಾತನಾಡಿ, ಮಕ್ಕಳನ್ನು ಅತಿ ಬುದ್ಧಿವಂತರನ್ನಾಗಿಸುವ ಭರದಲ್ಲಿ ಅವರ ಭವಿಷ್ಯದ ಅವನತಿಗೆ ನಾವೇ ಕಾರಣರಾಗುತ್ತಿದ್ದೇವೆ. ಹೀಗಾಗಿ ಪಾಲಕರು ತಮ್ಮ ಮಕ್ಕಳ ಮುಂದೆ ಟಿವಿ, ಮೊಬೈಲ್ ಮತ್ತು ದುಶ್ಚಟಗಳಿಂದ ದೂರವಿರಬೇಕು. ಜತೆಗೆ ಅವರ ಚಲನವಲನಗಳ ಬಗೆಗೆ ಲಕ್ಷ್ಯವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಿವಯ್ಯನವರು ಹಿರೇಮಠ, ಶಿಕ್ಷಕರಾದ ಶಿವಾನಂದ ಮಲ್ಲಾಪೂರ, ಶಂಕರಗೌಡ ಅಸೂಟಿ, ಪ್ರಭಾಕರ ಮಂಟೂರ, ಮಹಾಂತೇಶ ಹಿರೇಮಠ ಸೇರಿದಂತೆ ಮುಂತಾದವರು ಇದ್ದರು. ಶರಣಬಸವೇಶ್ವರ ಭಜನಾ ಮಂಡಳಿಯವರಿಂದ ವಚನ ಸಂಗೀತ ನೆರವೇರಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.