ಮಂಗಳೂರಿನಲ್ಲಿ ಎಳನೀರು ತೀವ್ರ ಕೊರತೆ: ಸಿಗುತ್ತಿಲ್ಲ ಬೊಂಡ !

KannadaprabhaNewsNetwork |  
Published : Apr 20, 2026, 02:45 AM IST
ಮಂಗಳೂರು: ಎಳನೀರು ಮಾರಾಟ | Kannada Prabha

ಸಾರಾಂಶ

ಬೇಸಗೆಯ ಸುಡು ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ನಡುವೆ ಬಿಸಿಲ ತಾಪವನ್ನು ತಣಿಸಲು ತಮ್ಮಿಷ್ಟದ ಎಳನೀರು ಕುಡಿಯೋಣ ಎಂದರೆ ಮಂಗಳೂರಿನಲ್ಲಿ ಎಳನೀರಿನ ತೀವ್ರ ಕೊರತೆ ಎದುರಾಗಿದ್ದು, ಎಳನೀರು ಮಾರಾಟಗಾರರಿಗೆ ಬೇಡಿಕೆಯಷ್ಟು ಎಳನೀರು ಪೊರೈಕೆ ಆಗುತ್ತಿಲ್ಲ.

ದಯಾನಂದ ಕಲ್ನಾರ್

ಕನ್ನಡಪ್ರಭ ವಾರ್ತೆ ಮಂಗಳೂರು

ಈ ಬಾರಿ ಬೇಸಗೆಯ ಸುಡು ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ನಡುವೆ ಬಿಸಿಲ ತಾಪವನ್ನು ತಣಿಸಲು ತಮ್ಮಿಷ್ಟದ ಎಳನೀರು ಕುಡಿಯೋಣ ಎಂದರೆ ಮಂಗಳೂರಿನಲ್ಲಿ ಎಳನೀರಿನ ತೀವ್ರ ಕೊರತೆ ಎದುರಾಗಿದ್ದು, ಎಳನೀರು ಮಾರಾಟಗಾರರಿಗೆ ಬೇಡಿಕೆಯಷ್ಟು ಎಳನೀರು ಪೊರೈಕೆ ಆಗುತ್ತಿಲ್ಲ.

ಬೇಸಿಗೆಯಲ್ಲಿ ತಂಪು ಪಾನಿಯಾಗಳಿಗೆ ವಿಪರೀತ ಬೇಡಿಕೆ ಇರುವುದು ಸಹಜ. ಕಬ್ಬಿನ ಜ್ಯೂಸ್, ಹಣ್ಣು-ಹಂಪಲು ಜ್ಯೂಸ್ ಜೊತೆಗೆ ಎಳನೀರಿಗೂ ಹೆಚ್ಚಿನ ಬೇಡಿಕೆ ಇರುತ್ತದೆ. ಪರಿಣಾಮ ಎಳನೀರು ಮಾರಾಟ ಮಾಡುವವರ ಸಂಖ್ಯೆ ಬೇಸಿಗೆಯಲ್ಲಿ ಹೆಚ್ಚಿರುತ್ತದೆ.

ಎಳನೀರು ತೀವ್ರ ಕೊರತೆ: ಸದ್ಯದ ಪರಿಸ್ಥಿತಿಯಲ್ಲಿ ಮಂಗಳೂರಿನಲ್ಲಿ ಎಳನೀರು ಕೊರತೆ ಎಷ್ಟು ಕಾಡಿದೆ ಎಂದರೆ ಈ ಬಗ್ಗೆ ಗ್ರಾಹಕರು ಮಾತ್ರವಲ್ಲ ಎಳನೀರು ವ್ಯಾಪಾರಸ್ಥರು ಹೌಹಾರಿದ್ದಾರೆ. ಎಳನೀರು ಬೇಡಿಕೆಯಷ್ಟು ಪೊರೈಕೆ ಆಗುತ್ತಿಲ್ಲ. ಪೊರೈಕೆ ಆದ ಎಳನೀರನ್ನಷ್ಟೇ ಮಾರಾಟಗಾರರು ಮಾರಾಟ ಮಾಡುತ್ತಿದ್ದಾರೆ.

ಈ ಭಾಗಕ್ಕೆ ತಮಿಳುನಾಡು, ಹಾಸನ, ಕೆ.ಆರ್.ಪೇಟೆ, ಮೈಸೂರು, ಮಡಿಕೇರಿ ಮತ್ತಿತರ ಕಡೆಗಳಿಂದ ಎಳನೀರು ಪೊರೈಕೆ ಆಗುತ್ತದೆ. ತಮಿಳುನಾಡಿನಿಂದ ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಪೊರೈಕೆ ಆಗುತ್ತದೆ. ಆದರೆ ಈ ಬಾರಿ ಬೇಡಿಕೆಯಷ್ಟು ಎಳನೀರು ಪೊರೈಕೆ ಆಗುತ್ತಿಲ್ಲ. ಹಾಗಾಗಿ ಊರಿನ ಎಳನೀರನ್ನು ನೆಚ್ಚಿಕೊಳ್ಳಬೇಕಾಗಿದೆ, ಅದು ಕೂಡ ಕೊರತೆಯಾಗಿದೆ ಎನ್ನಲಾಗಿದೆ. ಕೆಲವುಕಡೆಗಳಲ್ಲಿ ದಿನಕ್ಕೆ 500 ಬೊಂಡಕ್ಕೂ ಅಧಿಕ ಬೇಡಿಕೆ ಇದ್ದರೂ ಅಷ್ಟು ಎಳನೀರು ಪೊರೈಕೆ ಆಗುತ್ತಿಲ್ಲ. ಊರಿನ ಬೊಂಡಗಳು ಮಾರುಕಟ್ಟೆಗೆ ಬಂದರೂ ಅದು ಸ್ಥಳೀಯ ಹಂತದಲ್ಲೇ ಮಾರಾಟ ಆಗುತ್ತಿದೆ. ಜಿಲ್ಲೆಯಲ್ಲಿ ವಿವಿಧ ರೋಗ ಬಾಧೆಯಿಂದ, ಮಂಗಗಳ ಕಾಟದಿಂದ ಫಸಲು ಕೈಗೆ ಸಿಗದೇ ತೆಂಗಿನ ಮರ ಇದ್ದರೂ ಬೆಳೆಗಾರರಿಗೆ ಫಸಲು ಕೈಗೆ ಸಿಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಊರಿನ ಎಳನೀರು ಕೂಡ ಬೇಡಿಕೆಯಷ್ಟು ಲಭ್ಯವಾಗುತ್ತಿಲ್ಲ.

ತಮಿಳುನಾಡಿನಿಂದ ಎಳನೀರು ಪೊರೈಕೆ ಆದಲ್ಲಿ ಈ ಭಾಗದಲ್ಲಿ ಎಳನೀರು ಕೊರತೆ ಆಗುತ್ತಿರಲಿಲ್ಲ. ಆದರೆ ತಮಿಳುನಾಡಿನ ಎಳನೀರು ದೆಹಲಿ ಹಾಗೂ ಉತ್ತರ ಭಾರತದ ಭಾಗಕ್ಕೆ ಪೊರೈಕೆ ಆಗುತ್ತಿರುವುದೇ ಇಲ್ಲಿ ಕೊರತೆಯಾಗಲು ಕಾರಣ ಎನ್ನುತ್ತಾರೆ ಎಳನೀರು ವ್ಯಾಪಾರಸ್ಥರು. ಬೇಡಿಕೆಯಷ್ಟು ಎಳನೀರು ಪೊರೈಕೆ ಇಲ್ಲದೇ, ಎಳನೀರು ಮಾರಾಟಗಾರರು ಸಂಜೆಯ ಮೊದಲೇ ಮನೆಗೆ ತೆರಳುವಂತಾಗಿದೆ.

ದರವೂ ಹೆಚ್ಚಳ: ಕಳೆದ ಬೇಸಿಗೆಯಲ್ಲಿ ಒಂದು ಎಳನೀರಿನ ದರ 50-55 ರು. ಆಸುಪಾಸಿನಲ್ಲಿದ್ದರೆ, ಈ ಬಾರಿ ಈಗಲೇ ಹಸಿರು ಎಳನೀರು 60 ರು. ಆಸುಪಾಸಿನಲ್ಲಿದೆ, ಗೆಂದಾಳಿ 70 ರುಪಾಯಿಗೆ ಮಾರಾಟವಾಗುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ಹಸಿರು ಎಳನೀರೇ 70 ರು. ಗೆ ಏರಿಕೆಯಾಗಬಹುದು ಎಂದು ವ್ಯಾಪಾರಸ್ಥರು ಹೇಳುತ್ತಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬೇಡಿಕೆಯಷ್ಟು ಎಳನೀರು ಸಿಗುತ್ತಿಲ್ಲ. 500 ಎಳನೀರು ಪೊರೈಕೆ ಆದರೂ ಸಂಜೆಯ ವೇಳೆಗೆ ಅದು ಖಾಲಿಯಾಗುತ್ತದೆ. ಈಗಾಗಲೇ ಬೇಡಿಕೆ ಹೆಚ್ಚಿರುವುದರಿಂದ ದರ ಹೆಚ್ಚಳಗೊಂಡಿದ್ದು, ಮುಂದಿನ ದಿನಗಳಲ್ಲಿ ದರ ಇನ್ನೂ ಹೆಚ್ಚಳವಾಗಬಹುದು.

- ಮಾರುತಿ, ಎಳನೀರು ವ್ಯಾಪಾರಸ್ಥರು, ಪದವಿನಂಗಡಿ, ಮಂಗಳೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಸಮಾಜ ಕಟ್ಟುವ ಜವಾಬ್ದಾರಿ ಮಹಿಳೆಯರ ಮೇಲಿದೆ
ಲೀಷಟ್ ಸ್ಥಲಗಳು ವಚನಕಾರರ ಅನುಭಾವದ ಸಾರ