ನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಯ ಟೆಂಡರ್ ಪ್ರಕ್ರಿಯೆ ವಿಳಂಬದಿಂದ ಏಪ್ರಿಲ್ ಬಳಿಕ ಇಂದಿರಾ ಕ್ಯಾಂಟೀನ್‌ನಲ್ಲಿ ಮುದ್ದೆ - ಸಾರು ದೊರೆಯುವುದು ಸಾಧ್ಯತೆ ಇದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಯ ಟೆಂಡರ್ ಪ್ರಕ್ರಿಯೆ ವಿಳಂಬದಿಂದ ಏಪ್ರಿಲ್ ಬಳಿಕ ಇಂದಿರಾ ಕ್ಯಾಂಟೀನ್‌ನಲ್ಲಿ ಮುದ್ದೆ - ಸಾರು ದೊರೆಯುವುದು ಸಾಧ್ಯತೆ ಇದೆ.
ಕಳೆದ ಆಗಸ್ಟ್‌ನಲ್ಲಿಯೇ ನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡುವ ಗುತ್ತಿಗೆ ಅವಧಿ ಮುಕ್ತಾಯಗೊಂಡಿದೆ. ಹೊಸ ಟೆಂಡರ್ ಪ್ರಕ್ರಿಯೆ ನಡೆಯದ ಹಿನ್ನೆಲೆಯಲ್ಲಿ ಹಳೇ ಗುತ್ತಿಗೆದಾರರನ್ನು ಮುಂದುವರೆಸಲಾಗಿತ್ತು. ಕಳೆದ ಡಿಸೆಂಬರ್‌ನಲ್ಲಿಯೇ ಹೊಸದಾಗಿ ಟೆಂಡರ್ ಆಹ್ವಾನಿಸುವುದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಬಿಬಿಎಂಪಿಯೂ ಈ ಬಾರಿ ಕೇಂದ್ರೀಕೃತ ಟೆಂಡರ್ ಆಹ್ವಾನಿಸದೇ, ಎಂಟು ವಲಯಗಳಿಗೆ ಪ್ರತ್ಯೇಕ ಟೆಂಡರ್ ಆಹ್ವಾನಿಸುವುದಕ್ಕೆ ನಿರ್ಧರಿಸಿ ನಾಲ್ಕು ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿದೆ.
ಈವರೆಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇನ್ನೂ ಹಲವು ವಲಯದಲ್ಲಿ ಗುತ್ತಿಗೆದಾರರ ತಾಂತ್ರಿಕ ಅರ್ಹತೆ ಪರಿಶೀಲನೆ ಬಾಕಿ ಉಳಿದಿದೆ. ಅದಾದ ಬಳಿಕ ಆರ್ಥಿಕ ಅರ್ಹತೆ ಪರಿಶೀಲನೆ ಎಲ್-1 ಗುತ್ತಿಗೆದಾರರನ್ನು ಅಂತಿಮ ಪಡಿಸಬೇಕಿದೆ. ಈ ಕುರಿತು ಸರ್ಕಾರದಿಂದ ಅನುಮತಿ ಪಡೆದು ಕಾರ್ಯಾದೇಶ ನೀಡಬೇಕಿದೆ. ಈ ಪ್ರಕ್ರಿಯೆ ಕನಿಷ್ಠ ಒಂದು ತಿಂಗಳು ಬೇಕಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಪ್ರಿಲ್ ನಂತರ ಮುದ್ದೆ-ಸಾರು: ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಗುತ್ತಿಗೆದಾರರಿಗೆ ಈ ಬಾರಿ ಮುದ್ದೆ-ಸಾರು ನೀಡುವುದುಸ ಕಡ್ಡಾಯಗೊಳಿಸಲಾಗಿದೆ. ಏಪ್ರಿಲ್ ವೇಳೆಗೆ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಆ ಬಳಿಕ ಇಂದಿರಾ ಕ್ಯಾಂಟೀನ್ ನಲ್ಲಿ ಮುದ್ದೆ- ಸಾರು ಹಾಗೂ ಉಪಹಾರದಲ್ಲಿ ಎರಡು ಮಾದರಿಯ ಆಯ್ಕೆ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಸ ಕ್ಯಾಂಟೀನ್‌ಗೆ ಹಣ ಇಲ್ಲ: ಇನ್ನು ನಗರದಲ್ಲಿ ವಾರ್ಡ್ ಸಂಖ್ಯೆ 198ರಿಂದ 225ಕ್ಕೆ ಹೆಚ್ಚಳಗೊಂಡಿವೆ. ಇಂದಿರಾ ಕ್ಯಾಂಟೀನ್ ಇಲ್ಲದ ವಾರ್ಡ್‌ಗಳಲ್ಲಿ ಕ್ಯಾಂಟೀನ್ ಆರಂಭಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಆದರೆ, ಈ ಕುರಿತು ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ರಾಜ್ಯ ಸರ್ಕಾರ ಅನುಮೋದನೆ, ಹಣ ನೀಡಿಲ್ಲ. ಹೀಗಾಗಿ, ಹೊಸ ಕ್ಯಾಂಟೀನ್ ನಿರ್ಮಾಣ ಪ್ರಕ್ರಿಯೆ ಸ್ಥಗಿತಗೊಂಡಿದೆ.