ವಾಯವ್ಯ ಸಾರಿಗೆಗೆ 300 ಬಸ್‌ ಖರೀದಿಗೆ ಟೆಂಡರ್‌

KannadaprabhaNewsNetwork |  
Published : Nov 08, 2025, 02:15 AM IST
ಮದಮದಮ | Kannada Prabha

ಸಾರಾಂಶ

300 ಬಸ್‌ ಟೆಂಡರ್‌ ಕರೆದಿರುವ ಪೈಕಿ ಈ​ಗಾ​ಗ​ಲೇ 150 ಬಸ್‌ಗೆ ಅನುಮೋದನೆ ನೀ​ಡಿದ್ದು, ಚಳಿಗಾಲದ ಅಧಿವೇಶನ ಬ​ಳಿಕ ಸಂಸ್ಥೆಗೆ ಮತ್ತಷ್ಟು ಬಸ್‌ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ಹುಬ್ಬಳ್ಳಿ:

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 700 ಬಸ್‌ ಖರೀದಿಗೆ ಅವಕಾಶ ನೀಡಿದ್ದು, ಮೊದಲ ಹಂತದಲ್ಲಿ 300 ಬಸ್‌ ಖ​ರೀ​ದಿಗೆ ಟೆಂಡರ್‌ ಕ​ರೆ​ಯ​ಲಾ​ಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ನಗರದ ಗೋಕುಲ ಬಸ್‌ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ಧಾರವಾಡ ನಗರ ಬಸ್‌ ನಿಲ್ದಾಣ, ಗೋಕುಲ ರಸ್ತೆ ನವೀಕೃತ ಬಸ್‌ ನಿಲ್ದಾಣಗಳ ಉದ್ಘಾಟನೆ ಹಾಗೂ ಅಪಘಾತ, ಅಪರಾಧ ರಹಿತ ಸೇವೆ ಸಲ್ಲಿಸಿ ಚಾಲನಾ ಸಿಬ್ಬಂದಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

300 ಬಸ್‌ ಟೆಂಡರ್‌ ಕರೆದಿರುವ ಪೈಕಿ ಈ​ಗಾ​ಗ​ಲೇ 150 ಬಸ್‌ಗೆ ಅನುಮೋದನೆ ನೀ​ಡಿದ್ದು, ಚಳಿಗಾಲದ ಅಧಿವೇಶನ ಬ​ಳಿಕ ಸಂಸ್ಥೆಗೆ ಮತ್ತಷ್ಟು ಬಸ್‌ ನೀಡಲಾಗುವುದು ಎಂದು ಭರವಸೆ ನೀಡಿದರು.

ಬಸ್‌ ನಿಲ್ದಾಣಗಳಲ್ಲಿ ಮೂತ್ರಾಲಯ, ಶೌಚಾಲಯಗಳ ಅವ್ಯವಸ್ಥೆ ಮತ್ತು ಅನಗತ್ಯವಾಗಿ ಜನರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರು ಬರುತ್ತಿವೆ. ಇನ್ಮುಂದೆ ಬಂದರೆ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಬಹಳಷ್ಟುನಿಲ್ದಾಣಗಳಲ್ಲಿ ಶೌಚಾಲಯ ದುರವಸ್ಥೆಗಳ ಕುರಿತು ಮೊದಲಿನಿಂದಲೂ ದೂರುಗಳಿವೆ. ಕೋಟ್ಯಂತರ ಹಣ ಖರ್ಚು ಮಾಡಿ ನಿಲ್ದಾಣ ನವೀಕರಣ, ಹೊಸ ಕಟ್ಟಡ ನಿರ್ಮಿಸಲಾಗುತ್ತದೆ. ಆದರೆ, ನಂತರದಲ್ಲಿ ಅವುಗಳ ನಿರ್ವಹಣೆ, ಕ್ಲಿನಿಂಗ್‌ ಸರಿಯಾಗಿ ಆಗುತ್ತಿಲ್ಲ. ಇದರ ಬಗ್ಗೆ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ನಿಲ್ದಾಣಗಳಿಗೆ ಮೇಲಿಂದ ಮೇಲೆ ಭೇಟಿ ನೀಡಿ ಗಮನಹರಿಸಬೇಕೆಂದು ಸಲಹೆ ನೀಡಿದರು. ನಿಲ್ದಾಣಗಳ ಬಳಿಕ ಆಟೋ ನಿಲ್ದಾಣಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.ಉಸ್ತುವಾರಿ ಸಚಿವ ಸಂತೋಷ ಲಾಡ್‌ ಮಾ​ತ​ನಾಡಿ, ಸಾ​ರಿಗೆ ಸಂಸ್ಥೆಯ ನಾಲ್ಕು ವಿ​ಭಾ​ಗ​ಗ​ಳಲ್ಲಿ ನಿತ್ಯ 1.50 ಕೋಟಿ ಜನರು ಪ್ರಯಾಣಿಸುತ್ತಿದ್ದು, ಮೂರು ವರ್ಷಗಳಲ್ಲಿ 150 ಕೋಟಿ ಜನ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುವುದು ದಾಖಲೆಯಾಗಿದೆ. ಶಕ್ತಿ ಯೋಜನೆಯಿಂದ ಬೆಂಗಳೂರಲ್ಲಿ ಶೇ. 23ರಷ್ಟು, ಗ್ರಾಮೀಣದಲ್ಲಿ ಶೇ. 21ರಷ್ಟುಮಹಿಳೆಯರ ಉದ್ಯೋಗ ಪ್ರಮಾಣ ಹೆಚ್ಚಳವಾಗಿದೆ. ಇಡೀ ದೇಶದಲ್ಲಿ ಕರ್ನಾಟಕದ ಸಾರಿಗೆ ವ್ಯವಸ್ಥೆ ನಂಬರ್‌ ಒನ್‌ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 12 ಕೋಟಿ ಜನಸಂಖ್ಯೆ ಇದ್ದು, ಬಸ್‌ಗಳ ಸಂಖ್ಯೆ ಅತಿ ಕಡಿಮೆ ಇವೆ ಎಂದರು.

ರಾ​ಜ್ಯದ ಸಾರಿಗೆ ಸಂಸ್ಥೆಗೆ ಈವರೆಗೆ ದೊರೆತ 670 ಪ್ರಶಸ್ತಿಗಳಲ್ಲಿ 400 ಪ್ರಶಸ್ತಿಗಳು ರಾಮಲಿಂಗಾರೆಡ್ಡಿ ಅವರ ಅಧಿಕಾರ ಅವಧಿಯಲ್ಲಿ ಬಂದಿವೆ ಎನ್ನುವುದು ಹೆಗ್ಗಳಿಕೆ. ಇಡೀ ದೇಶದಲ್ಲೇ ಕರ್ನಾಟಕವು ಜಿಎಸ್‌ಟಿ, ಎ​ಫ್‌​ಡಿಐ, ತಲಾದಾಯ, ಜಿಡಿಪಿಗಳಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.ಬಾಕಿ ಹಣ ಬಿಡುಗಡೆಗೆ ಮನವಿ:ವಾಕರಸಾ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಮಾತನಾಡಿ, ಸಂಸ್ಥೆಯು ನೋ ಲಾಸ್‌ ನೋ ಪ್ರಾಫಿಟ್‌ನಲ್ಲಿ ಸೇವೆ ನೀಡುತ್ತಿದ್ದು, ಸಂಸ್ಥೆಗೆ ಇನ್ನಷ್ಟು ಬಸ್‌ಗಳನ್ನು ಒದಗಿಸಬೇಕು. ವಿವಿಧ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಲು ಶಕ್ತಿ ಯೋಜನೆಯ ಬಾಕಿ ಹಣ 930 ಕೋಟಿ ರೂ. ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಶಾ​ಸ​ಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸಂಸ್ಥೆಯಲ್ಲಿ ಬಸ್‌ಗಳ ಕೊರತೆ ನೀಗಿಸಬೇಕು. ನಿಲ್ದಾಣಗಳ ನಿರ್ವಹಣೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದರು.ವಿಧಾನ ಪರಿಷತ್‌ ಸ​ರ​ಕಾರಿ ಮುಖ್ಯ ಸ​ಚೇ​ತಕ ಸಲೀಂ ಅಹ್ಮ​ದ್‌, ​ಹೆಸ್ಕಾಂ ಅ​ಧ್ಯಕ್ಷ ಸೈಯದ್‌ ಅಜ್ಜಂಪೀರ ಖಾದ್ರಿ, ಎಂಎಲ್‌ಸಿಗಳಾದ ಪ್ರದೀಪ ಶೆಟ್ಟರ, ಎಫ್‌.ಎಚ್‌. ಜಕ್ಕಪ್ಪನವರ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿ​ಲ್ಲಾ​ಧ್ಯಕ್ಷ ಎಸ್‌.ಆ​ರ್‌. ಪಾಟೀಲ, ಮೇ​ಯರ್‌ ಜ್ಯೋತಿ ಪಾ​ಟೀಲ, ಸಂಸ್ಥೆ ಉಪಾಧ್ಯಕ್ಷ ಸು​ನೀಲ ಹ​ಣ​ಮ​ನ್ನ​ವರ, ಜಿಪಂ ಸಿ​ಇಒ ಭುವನೇಶ ಪಾಟೀಲ, ಪೊ​ಲೀಸ್‌ ಕ​ಮಿ​ಷ​ನರ್‌ ಎ​ನ್‌. ​ಶ​ಶಿ​ಕು​ಮಾರ, ಬಿ​ಆ​ರ್‌​ಟಿ​ಎಸ್‌ ಎಂಡಿ ಸಾ​ವಿತ್ರಿ ಕಡಿ, ವಾಯವ್ಯ ಸಾರಿಗೆ ಸಂಸ್ಥೆ ವ್ಯ​ವ​ಸ್ಥಾ​ಪಕ ನಿ​ರ್ದೇ​ಶಕಿ ಪ್ರಿ​ಯಾಂಗಾ ಎಂ., ಇಲಾಖಾ ಮುಖ್ಯಸ್ಥ ವಿವೇಕಾನಂದ ವಿಶ್ವಜ್ಞ ಇ​ತ​ರರು ಇ​ದ್ದರು.ಬೆಳ್ಳಿ ಪದಕ ವಿತರಣೆ...

5 ವರ್ಷ ನಿರಂತರ ಅಪಘಾತ ರಹಿತ ಸೇವೆ ಸಲ್ಲಿಸಿದ 161 ಚಾಲಕರಿಗೆ ಬೆಳ್ಳಿ ಪದಕ ವಿತರಿಸಿ ಸನ್ಮಾನಿಸಲಾಯಿತು. ಮೃತ ಸಂಸ್ಥೆಯ ನೌಕರರ ಅಲವಂಬಿತರಿಗೆ ವಿಮೆ ಯೋಜನೆಯಡಿ ₹ 1 ಕೋಟಿ ಪರಿಹಾರ ಚೆಕ್‌ ವಿತರಿಸಲಾಯಿತು. ಗ್ರುಪ್‌ ಟರ್ಮ್‌ ಲೈಫ್‌ ಇನ್ಸೂರೆನ್ಸ್‌ ಯೋಜನೆಯಡಿ ಸಹಜ ನಿಧನ ಹೊಂದಿದ ನೌಕರರ ಕುಟುಂಬದ ಅವಲಂಬಿತರಿಗೆ ₹ 6 ಲಕ್ಷ ಪರಿಹಾರ ಚೆಕ್‌ ನೀಡಲಾಯಿತು.

PREV

Recommended Stories

83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!