ಕನ್ನಡಪ್ರಭ ವಾರ್ತೆ ಮಡಿಕೇರಿ ಕೃಷಿಕರನ್ನು ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳ ನಡುವೆ ಅಕಾಲಿಕ ಮಳೆ ಕೃಷಿಕರನ್ನು ತಲ್ಲಣಗೊಳಿಸಿದೆ. ಮಾತ್ರವಲ್ಲದೆ ಮುಂದಿನ ಜೀವನ ನಿರ್ವಹಣೆ ಹೇಗೆ ಎಂಬ ಪ್ರಶ್ನೆಯನ್ನು ಕೂಡ ಹುಟ್ಟು ಹಾಕಿದೆ. ಆದ್ದರಿಂದ ಸರ್ಕಾರ ಕೂಡಲೇ ಬೆಳೆಗಾರರ ನೆರವಿಗೆ ಸ್ಪಂದಿಸುವಂತೆ ಹಕ್ಕೊತ್ತಾಯ ಕೇಳಿಬಂದಿದೆ.
ಸಂವಾದದಲ್ಲಿ ಮಾತನಾಡಿದ ಬೆಳೆಗಾರ ಟಿ.ಕೆ ಸಾಯಿಕುಮಾರ್, ಈಗಾಗಲೇ ಕೃಷಿಯ ಬೆಲೆಯ ಏರಿಳಿತ, ಸಾಲದ ಹೊರೆ, ಕಾರ್ಮಿಕರ ಕೊರತೆ, ಕಾಡಾನೆ ಸೇರಿದಂತೆ ವನ್ಯ ಪ್ರಾಣಿಗಳ ಹಾವಳಿಯಿಂದ ಕಂಗೆಟ್ಟಿದ್ದಾರೆ. ಅದರ ಜೊತೆಗೆ ನಮ್ಮ ಅನುಭವದಲ್ಲೇ ಇಲ್ಲದ ಜನವರಿ ತಿಂಗಳ ಅಕಾಲಿಕ ಮಳೆಯಿಂದ ಕಾಫಿ ಹಣ್ಣಾಗಿ ಗಿಡದಲ್ಲಿ ಇರುವಂತೆ ಕಾಫಿ ಹೂವನ್ನು ನೋಡುತ್ತಿದ್ದೇವೆ ಎಂದು ಹೇಳಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆಗಾರರ ನೆರವಿಗೆ ಕೂಡಲೇ ಬರಬೇಕಿದೆ. ದೊಡ್ಡ ಉದ್ಯಮಿಗಳಿಗೆ ಸಾಲ ಮನ್ನಾ ಮಾಡುವ ಯಾವುದೇ ಉದ್ಯಮ ಹೂಡಿಕೆಗೆ ಕೋಟಿ ಲೆಕ್ಕದಲ್ಲಿ ಸಾಲ ನೀಡುವುದು ಮಾತ್ರವಲ್ಲದೆ ಎಲ್ಲ ರೀತಿಯ ಮೂಲ ಸೌಕರ್ಯವನ್ನು ಕಲ್ಪಿಸುತ್ತಿರುವ ಸರ್ಕಾರಿ ವ್ಯವಸ್ಥೆ ರೈತರನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ ಕಾಫಿ ಫಸಲಿಗೆ ಅತ್ಯುತ್ತಮ ಬೆಲೆ ಬಂದಿದ್ದರೂ ಕೂಡ ಶೇ.40ರಷ್ಟು ನಷ್ಟ ಸಂಭವಿಸಿದ ಹಿನ್ನೆಲೆಯಲ್ಲಿ ಸಾಲದ ಬಡ್ಡಿ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.ನಾಕೂರು ಶಿರಂಗಾಲದ ಸಮಗ್ರ ಕೃಷಿಕ ಪಿ.ಎಂ. ಬಿಜು ಮಾತನಾಡಿ ಅರಣ್ಯ ಇಲಾಖೆಯವರು ಕಾಫಿ ತೋಟಗಳಲ್ಲಿ ಮರ ಕಪಾತು ಮಾಡುವುದನ್ನು ನಿಷೇಧಿಸುತ್ತಾ ಮೊಕ್ಕದ್ದಮೆ ದಾಖಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ರೋಬೆಸ್ಟಾ ಕಾಫಿ ಬೆಳೆಗೆ ನೆರಳನ್ನು ತೆಗೆಯುವ ಅಗತ್ಯತೆ ಇದ್ದು, ನೆರಳಿದ್ದಲ್ಲಿ ಇಳುವರಿ ಕಡಿಮೆಯಾಗುವ ಹಿನ್ನೆಲೆ ಮರ ಕಪಾತು ಮಾಡುವ ಅನಿವಾರ್ಯತೆ ಇದೆ ಎಂದರು.
ಸುಂಟಿಕೊಪ್ಪ ಹೋಬಳಿಯ ಭತ್ತ ಕೃಷಿಕ ಪಟ್ಟೆಮನೆ ಉದಯ ಕುಮಾರ್ ಮಾತನಾಡಿ, ತಾನು ಮೂರು ತಳಿಯ ಭತ್ತ ಬೆಳೆಯುತ್ತಿದ್ದು, ಕಾಡು ಹಂದಿ, ಮುಳ್ಳು ಹಂದಿ ಮತ್ತು ನವಿಲುಗಳ ಕಾಟದದಿಂದಾಗಿ ಕೈಗೆ ಬಂದ ಫಸಲು ಮನೆಗೆ ಬರುತ್ತಿಲ್ಲ. ಜೊತೆಗೆ ಸುಂಟಿಕೊಪ್ಪ ನಗರ ವ್ಯಾಪ್ತಿಯ ಕೊಳಚೆ ನೀರು ಗದ್ದೆಗಳಿಗೆ ಬರುತ್ತಿದ್ದು, ಅಸಹ್ಯಕರ ವಾಸನೆಯ ಹಿನ್ನೆಲೆಯಲ್ಲಿ ಭತ್ತ ಬೆಳೆಯಬೇಕೆಂದು ಅಸಮಾಧಾನ ವ್ಯಕ್ತಪಡಿಸಿದರು.
ಭತ್ತ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಕ್ವಿಂಟಾಲ್ ಗೆ ರು.4 ಸಾವಿರ ನಿಗದಿಗೊಳಿಸಿದಲ್ಲಿ ಭತ್ತದ ಕೃಷಿಯತ್ತ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್, ಉಪಾಧ್ಯಕ್ಷ ಬಿ.ಸಿ. ದಿನೇಶ್, ಖಜಾಂಚಿ ವಿ.ಸಿ. ನವೀನ್, ನಿರ್ದೇಶಕರಾದ ಶಿವಣ್ಣ, ಗುಡ್ಡೆಮನೆ ವಿಶುಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಬೆಳೆಗಾರ ಪಿ.ಎಂ. ಬಿಜು ಮಾತನಾಡಿ, ವನ್ಯ ಜೀವಿಗಳಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಬಂದೂಕು ಪರವಾನಗಿ ಹೊಂದಲು ಅರ್ಜಿ ಸಲ್ಲಿಸಿದರೆ ಪೊಲೀಸ್ ವತಿಯಿಂದ ನಿರಾಪೇಕ್ಷಣಾ ಪತ್ರ ಸಿಗುತ್ತಿಲ್ಲ. ನಾನಾ ರೀತಿಯ ದಾಖಲೆಗಳನ್ನು ಕೇಳುತ್ತಾ ಸತಾಯಿಸುತ್ತಿದ್ದಾರೆ. ಇನ್ನಾದರೂ ಬೆಳೆಗಾರರಿಗೆ ಆತ್ಮರಕ್ಷಣೆಗಾಗಿ ಕೋವಿ ಹೊಂದಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.ವನ್ಯ ಪ್ರಾಣಿಗಳು ತಿಂದು ಉಳಿಸಿದ್ದು ನಮಗೆ!