ಉಗ್ರರ ದಾಳಿಯ ಅಣಕು ಪ್ರದರ್ಶನ

KannadaprabhaNewsNetwork | Published : May 18, 2025 1:19 AM
Follow Us

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮಟ್ಟಿ ಆಲಮಟ್ಟಿಯ ಜಲಾಶಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಭಯೋತ್ಪಾದಕರು ದಾಳಿ ನಡೆಸಿದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು, ವಿಜಯಪುರ, ಬಾಗಲಕೋಟೆ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಅಣಕು ಪ್ರದರ್ಶನ ನಡೆಸಲಾಯಿತು. ಎರಡು ಜಿಲ್ಲೆಗಳ ಪೊಲೀಸರು, ಅಗ್ನಿಶಾಮಕ ಸೇರಿದಂತೆ ನಾನಾ ಇಲಾಖೆಗಳು ಸೇರಿ ಅಣಕು ಕಾರ್ಯಾಚರಣೆ ನಡೆಸಿದರು. ಶನಿವಾರ ಬೆಳಿಗ್ಗೆಯಿಂದಲೇ ಎರಡು ಜಿಲ್ಲೆಯ ಎಸ್ಪಿಗಳು ಖುದ್ದಾಗಿ ಮಾರ್ಗದರ್ಶನ ನೀಡಿ ಅಣಕು ಪ್ರದರ್ಶನಕ್ಕೆ ಸಿಬ್ಬಂದಿ ಸಜ್ಜುಗೊಳಿಸಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಆಲಮಟ್ಟಿಯ ಜಲಾಶಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಭಯೋತ್ಪಾದಕರು ದಾಳಿ ನಡೆಸಿದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು, ವಿಜಯಪುರ, ಬಾಗಲಕೋಟೆ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಅಣಕು ಪ್ರದರ್ಶನ ನಡೆಸಲಾಯಿತು. ಎರಡು ಜಿಲ್ಲೆಗಳ ಪೊಲೀಸರು, ಅಗ್ನಿಶಾಮಕ ಸೇರಿದಂತೆ ನಾನಾ ಇಲಾಖೆಗಳು ಸೇರಿ ಅಣಕು ಕಾರ್ಯಾಚರಣೆ ನಡೆಸಿದರು. ಶನಿವಾರ ಬೆಳಿಗ್ಗೆಯಿಂದಲೇ ಎರಡು ಜಿಲ್ಲೆಯ ಎಸ್ಪಿಗಳು ಖುದ್ದಾಗಿ ಮಾರ್ಗದರ್ಶನ ನೀಡಿ ಅಣಕು ಪ್ರದರ್ಶನಕ್ಕೆ ಸಿಬ್ಬಂದಿ ಸಜ್ಜುಗೊಳಿಸಿದರು.

ಆಲಮಟ್ಟಿಯ ಪೆಟ್ರೋಲ್ ಪಂಪ್ ಬಳಿಯ ಚೆಕ್ ಪೋಸ್ಟ್, ಡ್ಯಾಂ ಗೇಟ್, ರಾಕ್ ಗಾರ್ಡನ್, ಮುಖ್ಯ ಅಭಿಯಂತರರ ಕಚೇರಿ ಸೇರಿದಂತೆ ನಾನಾ ಕಡೆ ಉಗ್ರರು ದಾಳಿ ನಡೆಸಿದರು. ಆಗ ಪೊಲೀಸರು ಪ್ರತ್ಯುತ್ತರ ನೀಡಿದರು. ವೈದ್ಯಕೀಯ ಸಿಬ್ಬಂದಿಯಿರುವ ಅಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಆಗಮಿಸಿ ಗಾಯಾಳುಗಳ ತುರ್ತು ಚಿಕಿತ್ಸೆಗೆ ಕ್ರಮ ಕೈಗೊಂಡರು. ಉಗ್ರರು ದಾಳಿ ನಡೆಸಿದಾಗ ನಾನಾ ಕಡೆಯಿಂದ ಆಗಮಿಸಿದ ವಿಶೇಷ ಪೊಲೀಸ್ ಪಡೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಅಣಕು ಪ್ರದರ್ಶನ ನಡೆಯಿತು. ಬಾಂಬ್ ಸ್ಪೋಟಗೊಂಡಾಗ ಹೊತ್ತಿಕೊಂಡ ಬೆಂಕಿ ನಂದಿಸುವ ಪ್ರಕ್ರಿಯೆಯೂ ನಡೆಯಿತು. ಬಳಿಕ. ನೆಲಕ್ಕುರುಳಿದ ಗಾಯಾಳುಗಳಿಗೆ ತುರ್ತು ಚಿಕಿತ್ಸೆಯ ಅಂಬುಲೆನ್ಸ್‌ನಲ್ಲಿ ಕಳುಹಿಸುವ ಪ್ರದರ್ಶನವೂ ನಡೆಯಿತು.

ಅಣಕು ಪ್ರದರ್ಶನಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಜಿಲ್ಲಾಧಿಕಾರಿ ಟಿ.ಭೂಬಾಲನ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಅಣಕು ಪ್ರದರ್ಶನ ನಡೆಸಲಾಗಿದೆ. ನಾನಾ ಇಲಾಖೆಗಳ ಸಮನ್ವಯತೆಯಿಂದ ಈ ಪ್ರದರ್ಶನ ನಡೆಸಲಾಗಿದೆ ಎಂದರು.

ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಮಾತನಾಡಿ, ಅಣಕು ಕಾರ್ಯಾಚರಣೆಯಿಂದ ಪೊಲೀಸ್‌ರಲ್ಲಿಯೂ ಸಮನ್ವಯತೆ ಮೂಡುತ್ತದೆ, ಜತೆಗೆ ಆತ್ಮವಿಶ್ವಾಸವೂ ಸಾರ್ವಜನಿಕರಲ್ಲಿ ಹೆಚ್ಚಲಿದೆ ಎಂದು ಹೇಳಿದರು.ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ನಾನಾ ವಿಧಗಳಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಯಿದೆ. ಆ ಎಲ್ಲಾ ವಿಧಗಳಲ್ಲಿಯೂ ವಿವಿಧ ಇಲಾಖೆ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದನ್ನು ಯಶಸ್ವಿಯಾಗಿ ಅಣಕು ಪ್ರದರ್ಶನ ನಡೆಸಲಾಗಿದೆ. ಇದರಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಮತ್ತೆ ಅಣಕು ಪ್ರದರ್ಶನ ನಡೆಸಲಾಗುವುದು ಎಂದರು.ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಮಾತನಾಡಿ, ಮೇಲಿಂದ ಮೇಲೆ ಅಣಕು ಪ್ರದರ್ಶನ ನಡೆಸಿದರೆ ಪೊಲೀಸರು ಯಾವುದೇ ಹಂತದ ಪರಿಸ್ಥಿತಿಗೂ ಸನ್ನದ್ಧವಾಗಲು ಸಾಧ್ಯ ಎಂಬುದಾಗಿ ತಿಳಿಸಿದರು.

ಎಸ್.ವಿ.ಹಿರೇಗೌಡರ, ತಾರಾಸಿಂಗ್ ದೊಡಮನಿ, ಚಂದ್ರಕಾಂತ ದೊರೆ, ಪ್ರಸನ್ನ ದೇಸಾಯಿ, ಬಲ್ಲಪ್ಪ ನಂದಗಾವಿ ಸೇರಿ ಹಿರಿಯ ಅಧಿಕಾರಿಗಳು ಇದ್ದರು.