ಪರೀಕ್ಷಾ ಅಕ್ರಮ: ಗುದದ್ವಾರದಲ್ಲಿಯೂ ಬ್ಲೂಟೂತ್‌!

KannadaprabhaNewsNetwork | Published : Oct 31, 2023 1:16 AM

ಸಾರಾಂಶ

ಮೆಟಲ್‌ ಡಿಟೆಕ್ಟರ್‌ಗೂ ಗೊತ್ತಾಗಬಾರದೆಂದು ಗುಪ್ತಾಂಗದಲ್ಲಿ ಬ್ಲೂಟೂತ್‌ ಡಿವೈಸ್‌!!ಯಾದಗಿರಿಯಲ್ಲಿ ಕೆಇಎ ಪರೀಕ್ಷಾ ಅಕ್ರಮ : ಬಂಧಿತ ಅಭ್ಯರ್ಥಿಗಳ ಕರಾಮತ್ತು!

ಕನ್ನಡಪ್ರಭ ವಾರ್ತೆ ಯಾದಗಿರಿಪರೀಕ್ಷಾ ವೇಳೆ ಪೊಲೀಸರು ತಪಾಸಣೆ ನಡೆಸಿದರೆ, ಮೆಟಲ್‌ ಡಿಟೆಕ್ಟರ್‌ಗೂ ಬ್ಲೂಟೂತ್‌ ಪತ್ತೆಯಾಗಬಾರದು ಎಂಬ ಕಾರಣಕ್ಕಾಗಿ ಆರೋಪಿ ಅಭ್ಯರ್ಥಿಗಳ ಪೈಕಿ ಕೆಲವರು ಗುದದ್ವಾರದ ಬಳಿಯೂ ಬ್ಲೂಟೂತ್‌ ಡಿವೈಸ್‌ ಇಟ್ಟುಕೊಂಡಿದ್ದರು ಅನ್ನೋ ಅಂಶ ತನಿಖೆಯ ವೇಳೆ ಖಾಕಿಪಡೆಯನ್ನು ಬೆಚ್ಚಿಬೀಳಿಸಿದೆ.

"ಕನ್ನಡಪ್ರಭ "ಕ್ಕೆ ಬಲ್ಲ ಪೊಲೀಸ್‌ ಮೂಲಗಳ ಪ್ರಕಾರ, ಬ್ಲೂಟೂತ್ ಅಕ್ರಮ ಗೊತ್ತಾಗಬಾರದೆಂದು ಕೆಲವರು ಕಾಲರ್‌, ಬನಿಯನ್‌ಗಳಲ್ಲಿ ಇಟ್ಟುಕೊಂಡಿದ್ದರೆ, ಇನ್ನೂ ಕೆಲವರು ಅಂಡರ್‌ವೇರ್‌ ಹಾಗೂ ಗುದದ್ವಾರದ ಬಳಿ ಅಡಗಿಸಿಟ್ಟುಕೊಂಡಿದ್ದರು ಅನ್ನೋ ಆಘಾತಕಾರಿ ಅಂಶ ತನಿಖೆ ವೇಳೆ ಪೊಲೀಸರಿಗೆ ಪತ್ತೆಯಾಗಿದೆ.

ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿಯಿರುವ ಎಫ್‌.ಡಿ.ಎ./ಎಸ್‌.ಡಿ.ಎ. ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ಅ.28 ಹಾಗೂ ಅ.29 ರಂದು ಎರಡು ದಿನಗಳ ಕಾಲ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಮೊದಲ ದಿನವಾದ ಶನಿವಾರ ಬೆಳಗ್ಗೆಯ ಪತ್ರಿಕೆಯಲ್ಲಿ ಬ್ಲೂಟೂತ್‌ ಅಕ್ರಮ ಬೆಳಕಿಗೆ ಬಂದಿತ್ತು.

ಯಾರಿಗೂ ಕಾಣದಂತೆ, ಕಿವಿಯಲ್ಲಿ ಅತ್ಯಂತ ಸೂಕ್ಷ್ಮವಾದ ಸ್ಪೀಕರ್‌ ಅಳವಡಿಸಿಕೊಂಡು, ಬ್ಲೂಟೂತ್‌ ಮೂಲಕ ಉತ್ತರ ಪಡೆಯುತ್ತಿದ್ದ ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳ ಮೂಲದ 9 ಅಭ್ಯರ್ಥಿಗಳನ್ನು ಪೊಲೀಸರು ಬಂಧಿಸಿದ್ದರು.

ಈ ವೇಳೆ, ಒಬ್ಬೊಬ್ಬರಿಂದ ಮಾಹಿತಿ ಪಡೆದಾಗ, ಅವರು ಅಡಗಿಸಿಟ್ಟುಕೊಂಡಿದ್ದ ಪರಿ ಅಚ್ಚರಿ ಮೂಡಿಸಿದೆ. ದೇಹದ ಯಾವುದೇ ಭಾಗದಲ್ಲಿದ್ದರೂ ಮೆಟಲ್‌ ಡಿಟೆಕ್ಟರ್‌ನಲ್ಲಿ ತಿಳಿಯುತ್ತದೆ. ಅಭ್ಯರ್ಥಿಗಳಿಗೆ ಇದರ ತಾಂತ್ರಿಕತೆ ಪೂರ್ಣ ಉಪಯೋಗ ಗೊತ್ತಿರಲಿಲ್ಲ. ಆದರೆ, ಮೊದಲ ದಿನದ ಬೆಳಗ್ಗೆಯ ಪತ್ರಿಕೆಯ ವೇಳೆ ಪರೀಕ್ಷಾ ಕೇಂದ್ರಗಳಲ್ಲಿ ಮೆಟಲ್‌ ಡಿಟೆಕ್ಟರ್‌ ತಪಾಸಣೆ ನಡೆದೇ ಇರಲಿಲ್ಲ. ಇದು ಅನುಕೂಲ ಮಾಡಿತ್ತು ಎನ್ನಲಾಗಿದೆ.

ನೌಕ್ರಿ ಗೌಡ "ನ ಹತ್ರ ಕೆಲಸಾ ಗ್ಯಾರಂಟಿ!: ಎಫ್‌ಡಿಎ ಪರೀಕ್ಷೆ ಪಾಸಾಗಬೇಕೆಂದು ವಿಜಯಪುರದ ಕೋಚಿಂಗ್‌ ಸೆಂಟರ್‌ವೊಂದರಲ್ಲಿ ತರಬೇತಿ ಪಡೆದು, ನಾಲ್ಕು ಬಾರಿ ಪರೀಕ್ಷೆ ಬರೆದರೂ ಪಾಸಾಗದ ಅಭ್ಯರ್ಥಿಯೊಬ್ಬ ಬೇಸರಗೊಂಡು, ಕೊನೆಗೆ ಅಫಜಲ್ಪೂರದ "ನೌಕ್ರಿ ಗೌಡ " (ಪಿಎಸೈ ಅಕ್ರಮ ಪ್ರಮುಖ ಆರೋಪಿ ಆರ್‌. ಡಿ. ಪಾಟೀಲ್‌ನ ಅಡ್ಡ ಹೆಸರು)ನ ಹತ್ತಿರ ಹೋದರೆ ನೌಕರಿ ಗ್ಯಾರಂಟಿ ಎಂದು, ಜಮೀನು ಮಾರಿ ಬಂದ ಹಣದಲ್ಲಿ 8 ಲಕ್ಷ ರು.ಗಳ ಹಣದ ವ್ಯವಹಾರ ಮುಗಿಸಿ, ಮುಂಗಡ ಹಣ ನೀಡಿ ಪರೀಕ್ಷೆಗೆ ಬ್ಲೂಟೂತ್‌ ಅಕ್ರಮದ ಸಹಾಯ ಪಡೆದಿದ್ದ ಎನ್ನಲಾಗಿದೆ.

ಶನಿವಾರ ಯಾದಗಿರಿಯಲ್ಲಿ ಬಂಧಿತ 9 ಜನರ ಪೈಕಿ, ಅಭ್ಯರ್ಥಿಯೊಬ್ಬ ಇಂತಹ ಅಕ್ರಮ ನಡೆಸಿದ್ದನೆಂದು ಪೊಲೀಸರ ತನಿಖೆಯ ವೇಳೆ ಗೊತ್ತಾಗಿದೆ ಎಂದು ತಿಳಿದುಬಂದಿದೆ. 4 ಬಾರಿ ಪರೀಕ್ಷೆ ಬರೆದಿದ್ದರೂ ಆಯ್ಕೆಯಾಗದ ಕಾರಣ ಬೇಸರಗೊಂಡಿದ್ದ ಈತ, ಹಣಕಾಸಿನ ಸಂಕಷ್ಟ ಎದುರಾಗಿದ್ದಾಗ, ಜಮೀನು ಮಾರಿ ಬಂದ ಹಣದಲ್ಲಿ ಹಣ ನೀಡಿರುವುದಾಗಿ ತನಿಖೆಯಲ್ಲಿ ತಿಳಿಸಿದ್ದಾನೆ ಎಂದು ಹೇಳಲಾಗುತ್ತಿದೆ.ದ್ರಾಕ್ಷಿ ಹಣ್ಣಿನ ಬುಟ್ಟಿಯಲ್ಲಿ ಡೀಲ್‌ ದುಡ್ಡು!: ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್‌ ಅಕ್ರಮದ ಸುಮಾರು 3.5 ಲಕ್ಷ ರು.ಗಳ ದುಡ್ಡನ್ನು ಯಾರಿಗೂ ಗೊತ್ತಾಗದಂತೆ ದ್ರಾಕ್ಷಿ ಹಣ್ಣಿನ ಬುಟ್ಟಿಯಲ್ಲಿಟ್ಟು, ಆರೋಪಿ ಅಭ್ಯರ್ಥಿಯೊಬ್ಬ ಅಕ್ರಮ ರೂವಾರಿಯ ಕಲಬುರಗಿಯಲ್ಲಿನ ಮನೆಗೆ ತೆರಳಿ ಕೊಟ್ಟು ಬಂದಿದ್ದ ಎಂದು ಪೊಲೀಸರಿಗೆ ತನಿಖೆಯ ವೇಳೆ ತಿಳಿದುಬಂದಿದೆ. ಶನಿವಾರ ಯಾದಗಿರಿಯಲ್ಲಿ ಪೊಲೀಸರು ಬಂಧಿಸಿದ 9 ಜನರ ಆರೋಪಿಗಳ ಪೈಕಿ, ಒಬ್ಬಾತ ಈ ರೀತಿಯಾಗಿ ಲಕ್ಷಾಂತರ ರು. ಹಣ ನೀಡಿ, ಬ್ಲೂಟೂತ್‌ ಉಪಕರಣ ಪಡೆದಿದ್ದ ಅನ್ನೋದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಖಾಕಿಪಡೆ ಮೂಲಗಳು ತಿಳಿಸಿವೆ.

Share this article