ಶಾಲೆ ಶುರುಮುನ್ನವೇ ಪಠ್ಯಪುಸ್ತಕ ಪೂರೈಕೆ; ಶಿಕ್ಷಣ ಇಲಾಖೆಯ ಕ್ರಮಕ್ಕೆ ಮೆಚ್ಚುಗೆ

KannadaprabhaNewsNetwork |  
Published : May 24, 2026, 02:30 AM IST
ಪೂರಕ ಫೋಟೋ  | Kannada Prabha

ಸಾರಾಂಶ

ಜಿಲ್ಲೆಯ ಐದು ತಾಲೂಕುಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆ 229, ಹಿರಿಯ ಪ್ರಾಥಮಿಕ ಶಾಲೆ 366 ಹಾಗೂ ಪ್ರೌಢ ಶಾಲೆ 125 ಸೇರಿ ಒಟ್ಟು 720 ಶಾಲೆಗಳಿವೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1ರಿಂದ 10ನೇ ತರಗತಿಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಸಮಸ್ಯೆಯಿಂದ ಈ ಬಾರಿ ಕೊರುಗುವುದು ಬೇಕಿಲ್ಲ. ಜಿಲ್ಲೆಯ ಬೇಡಿಕೆಯಂತೆ ಈಗಾಗಲೇ ಭಾಗಶಃ ಪಠ್ಯಪುಸ್ತಕಗಳನ್ನು ಶಿಕ್ಷಣ ಇಲಾಖೆ ಪೂರೈಸಿದ್ದು, ಶಾಲೆ ಆರಂಭದ ದಿನವೇ ವಿದ್ಯಾರ್ಥಿಗಳ ಕೈಗೆ ಪುಸ್ತಕಗಳು ತಲುಪಲಿವೆ.

ಜಿಲ್ಲೆಯ ಐದು ತಾಲೂಕುಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆ 229, ಹಿರಿಯ ಪ್ರಾಥಮಿಕ ಶಾಲೆ 366 ಹಾಗೂ ಪ್ರೌಢ ಶಾಲೆ 125 ಸೇರಿ ಒಟ್ಟು 720 ಶಾಲೆಗಳಿವೆ. ಇದರ ಹೊರತಾಗಿ ಅನುದಾನಿತ 72, ಖಾಸಗಿ 439 ಸೇರಿ ಒಟ್ಟಾರೆಯಾಗಿ 1267 ಶಾಲೆಗಳಿವೆ. 2025-26ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ1-10ನೇ ತರಗತಿವರೆಗೆ ಒಟ್ಟು 1,27,429 ಮಕ್ಕಳು ದಾಖಲಾಗಿದ್ದು, 2026-27ನೇ ಸಾಲಿನ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ.

ಬೇಸಿಗೆ ರಜೆ ಪೂರ್ಣಗೊಳಿಸಿ ಶಾಲೆಗಳ ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಶಿಕ್ಷಣ ಇಲಾಖೆಯಿಂದ ಶಾಲಾ ಆರಂಭಕ್ಕೆ ಅಗತ್ಯವಾಗಿರುವ ಪಠ್ಯಪುಸ್ತಕ ಸಿದ್ಧತೆಗಳನ್ನು ಈಗಿನಿಂದಲೇ ಕೈಗೊಳ್ಳುವ ಮೂಲಕ ಶೈಕ್ಷಣಿಕ ವರ್ಷ ಆರಂಭಕ್ಕೆ ಇಲಾಖೆ ಅಗತ್ಯ ತಯಾರಿ ನಡೆಸಿದೆ. ಜಿಲ್ಲಾದ್ಯಂತ ಇರುವ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ

1-10ನೇ ತರಗತಿವರೆಗೆ 24,500ಮಕ್ಕಳು, ಅನುದಾನಿತ 2,500ಮಕ್ಕಳಿಗೆ ವಿಷಯವಾರು, ಮಾಧ್ಯಮವಾರು ಸೇರಿ ಒಟ್ಟು 17, 30, 287 ಪುಸ್ತಕಗಳ ಬೇಡಿಕೆಯ ಪೈಕಿ ಈಗಾಗಲೇ 15,55,505 ಪಠ್ಯಪುಸ್ತಕಗಳು ಪೂರೈಕೆಯಾಗಿವೆ. 10,03786 ಪುಸ್ತಕಗಳನ್ನು ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕಳಿಸಲಾಗಿದೆ. ಈವರೆಗೆ ಶೇ.74ರಷ್ಟು ಪುಸ್ತಕಗಳು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದು ಶಾಲೆಗಳಿಗೆ ಪೂರೈಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಡಿಡಿಪಿಐ ಬಿ.ಉಮಾದೇವಿ ಕನ್ನಡಪ್ರಭಕ್ಕೆ ತಿಳಿಸಿದರು.

ಪ್ರತಿವರ್ಷ ಪಠ್ಯ ಪುಸ್ತಕಗಳ ಕೊರತೆ ನೆಪವೊಡ್ಡಿ ತರಗತಿಗಳಿಂದ ಮಕ್ಕಳನ್ನು ವಂಚಿತರನ್ನಾಗಿಸುವುದನ್ನು ತಪ್ಪಿಸಲು ಈ ಬಾರಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಆರಂಭಕ್ಕೂ ಮುನ್ನ ಮಕ್ಕಳ ಕೈಗೆ ಪಠ್ಯಪುಸ್ತಕಗಳನ್ನು ಒದಗಿಸಲು ಇಲಾಖೆ ಕೈಗೊಡಿರುವ ಕ್ರಮ ಶಿಕ್ಷಣ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಬೇಕಾದ ಪಠ್ಯಪುಸ್ತಕಗಳನ್ನು ಇಲಾಖೆ ಈಗಾಗಲೇ ಪೂರೈಸುತ್ತಿದ್ದು, ಶೇ.74ರಷ್ಟು ಪುಸ್ತಕಗಳು ಬಂದಿವೆ. ಮೇ 29ರೊಳಗೆ ಎಲ್ಲ ಶಾಲೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಜೂನ್ 1ರಂದು ಪೋಷಕರ ಮಹಾಸಭೆ ಹಾಗೂ ಶಾಲಾ ಶುರು ದಿನದಂದು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನಿ ವಿತರಣೆ ಮಾಡಲಾಗುವುದು ಎನ್ನುತ್ತಾರೆ ಡಿಡಿಪಿಐ ಬಿ.ಉಮಾದೇವಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿವಿಯಲ್ಲಿ ಶರೀಫ ಶಿವಯೋಗಿ, ಗುರು ಗೋವಿಂದಭಟ್ಟರ ಅಧ್ಯಯನಪೀಠ ಭರವಸೆ
ಕಾರ್ಮಿಕರ ಹಕ್ಕು ಪಡೆಯಲು ಸಂಘಟನೆ ಅವಶ್ಯ: ಶಿವಲಿಂಗ ಟರ್ಕಿ