ಮಳೆರಾಯನ ಕೃಪೆ ರೈತರಲ್ಲಿ ಕೂರಿಗೆ ಪೂಜೆ ಸಂಭ್ರಮ

KannadaprabhaNewsNetwork | Published : May 27, 2024 1:06 AM
Follow Us

ಸಾರಾಂಶ

ಕೋಟೆಕಲ್ ಗ್ರಾಮದ ಅಮರೇಶ್ವರ ಮಠದ ಆವರಣದಲ್ಲಿ ರೈತರು ಕೂರಿಗೆ ಪೂಜೆ ನೆರವೇರಿಸಿ ಬಿತ್ತನೆಗೆ ಸಿದ್ಧಗೊಂಡರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಮುಂಗಾರು ಆರಂಭದ ನಂತರ ರೈತರು ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಾರೆ. ಬಿತ್ತನೆ ಕಾರ್ಯಕ್ರಮದ ಮೊದಲು ರೈತ ಕೂರಿಗೆ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಸಮೀಪದ ಕೋಟೆಕಲ್ ಗ್ರಾಮದ ಅಮರೇಶ್ವರ ಮಠದ ಆವರಣದಲ್ಲಿ ರೈತರು ಕೂರಿಗೆ ಪೂಜೆ ನೆರವೇರಿಸಿ ಬಿತ್ತನೆಗೆ ಸಿದ್ಧಗೊಂಡರು.

ಪ್ರತಿಯೊಬ್ಬ ರೈತರು ಮುಂಗಾರು ಆರಂಭವಾದರೆ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಬಿತ್ತನೆ ಮಾಡಿದರೆ ಬೆಳೆ ಹುಲುಸಾಗಿ ಬೆಳೆಯುತ್ತದೆ, ಭೂತಾಯಿ ಕೈ ಬಿಡುವುದಿಲ್ಲ ಎನ್ನುವ ಬಲವಾದ ನಂಬಿಕೆ ರೈತರಲ್ಲಿದೆ. ಆ ಕಾರಣದಿಂದ ರೈತರು ಬಿತ್ತನೆ ಮುನ್ನ ಕೂರಿಗೆ ಪೂಜೆ ನೆರವೇರಿಸುವ ಸಂಪ್ರದಾಯವನ್ನು ತಲೆತಲಾಂತರದಿಂದ ನಡೆಸಿಕೊಂಡು ಬಂದಿದ್ದಾರೆ.

ಕೂರಿಗೆ ಪೂಜೆ ಮಾಡದೇ ರೈತರು ಬಿತ್ತನೆ ಕಾರ್ಯ ಮಾಡುವುದಿಲ್ಲ. ಕೂರಿಗೆಯನ್ನು ಮನೆಯ ಮುಂದೆ ಇಟ್ಟು ಅದಕ್ಕೆ ಸುಣ್ಣ ಬಣ್ಣ ಹಚ್ಚಿ, ಹೊಸ ಸೀರೆ ಉಡಿಸಿ, ಆಭರಣ ತೊಡಿಸಿ ಕುಂಕುಮ, ಆರಿಶಿಣ ಹಚ್ಚಿ ಪೂಜಿಸುತ್ತಾರೆ. ಮನೆಯಲ್ಲಿ ಮಾಡಿದ ಸಿಹಿ ನೈವೇದ್ಯ ಅರ್ಪಿಸುತ್ತಾರೆ. ಐದು ಮಂದಿ ಮುತ್ತೈದೆಯರಿಗೆ ಉಡಿ ತುಂಬುತ್ತಾರೆ. ನಂತರ ಎಲ್ಲರೂ ಸೇರಿ ಪ್ರಸಾದ ಸೇವಿಸುತ್ತಾರೆ. ಬಳಿಕ ಕೂರಿಗೆಯನ್ನು ಊರಿನ ಮುಖ್ಯ ರಸ್ತೆಯ ಮೂಲಕ ತಮ್ಮ ತಮ್ಮ ಹೊಲ, ಗದ್ದೆಗಳಿಗೆ ತೆಗೆದುಕೊಂಡು ಹೋಗುವುದು ಸಂಪ್ರದಾಯ.

ಈ ಸಂದರ್ಭದಲ್ಲಿ ಕಲ್ಲಪ್ಪ ಶಿರೂರ, ನಿಂಗಪ್ಪ ಅಬಕಾರಿ, ದಂಡಪ್ಪ ಅಬಕಾರಿ ಪೂಜಾ ಕಾರ್ಯ ನೆರವೇರಿಸಿದರು. ಶಂಕ್ರಪ್ಪ ಕೋಟಿ, ನೀಲಪ್ಪ ಅಬಕಾರಿ, ಗುಂಡಪ್ಪ ಕೋಟಿ, ಶೇಖಪ್ಪ ಅಬಕಾರಿ, ಮಲ್ಲಪ್ಪ ತೊಗಲಂಗಿ, ಅಂಬರೀಶ ಅಮರಣ್ಣವರ, ಫಕೀರಪ್ಪ ಶಿರೂರ, ಪರಸಪ್ಪ ಭೂಸರಾತ, ಉಮೇಶ ಕೊಲ್ಕಾರ ಸೇರಿದಂತೆ ಇತರರು ಇದ್ದರು. ನಮ್ಮ ಹಿರಿಯರ ಕಾಲದಿಂದಲೂ ಪ್ರತಿ ವರ್ಷ ಬಿತ್ತನೆಗೂ ಮುನ್ನ ಕೂರಿಗೆ ಪೂಜೆ ಮಾಡುವ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದೇವೆ. ಮುಂಗಾರು ಆರಂಭವಾಗುವ ಮುನ್ನ ಕೂರಿಗೆ ಪೂಜೆ ಮಾಡಿ ನಂತರ ನಾವು ಬಿತ್ತನೆಗೆ ಅಣಿಯಾಗುತ್ತೇವೆ. ಕೂರಿಗೆ ಪೂಜೆ ನಂತರ ಬಿತ್ತನೆ ಮಾಡಿದರೆ ಬೆಳೆ ಹುಲುಸಾಗಿ ಬೆಳೆಯುತ್ತದೆ ಎನ್ನುವ ನಂಬಿಕೆ ಮೊದಲಿನಿಂದಲೂ ಇದೆ. ಅದನ್ನು ನಾವೂ ಪಾಲಿಸಿಕೊಂಡು ಬಂದಿದ್ದೇವೆ.

-ಗುಂಡಪ್ಪ ಕಟಿ , ರೈತ, ಕೋಟೆಕಲ್