- ಕೇದಾರ ಪೀಠದ ಜಗದ್ಗುರು ಡಾ.ಭೀಮಶಂಕರಲಿಂಗ ಶ್ರೀ ಆಶೀರ್ವಚನ- - - ಕನ್ನಡಪ್ರಭ ವಾರ್ತೆ ಹರಿಹರ
ನಗರದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿಯ ವತಿಯಿಂದ 64ನೇ ವರ್ಷದ ಗಣೇಶೋತ್ಸವ ಅಂಗವಾಗಿ ಆಕರ್ಷಕವಾಗಿ ನಿರ್ಮಿಸಲಾಗಿರುವ ಕೇದಾರನಾಥ ದೇವಾಲಯದ ಭವ್ಯ ಪ್ರತಿಕೃತಿ (ಮಹಾಮಂಟಪ) ವೀಕ್ಷಣೆ ಮಾಡಿ ನಂತರ ಭಕ್ತರಿಗೆ ಅವರು ಆಶೀರ್ವಚನ ನೀಡಿದರು.
ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಎಲ್ಲರನ್ನೂ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಲೋಕಮಾನ್ಯ ಬಾಲಗಂಗಾಧರ ತಿಲಕ ಅವರು ಮನೆಗಳಿಗೆ ಸೀಮಿತವಾಗಿದ್ದ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆಗೆ ಮಾಡುವಂತೆ ಪ್ರೇರೇಪಿಸಿದ್ದು ಇತಿಹಾಸ ಸೃಷ್ಠಿಗೆ ಕಾರಣವಾಗಿದೆ. ಸಾರ್ವಜನಿಕ ಗಣೇಶೋತ್ಸವಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿ ಹೊಂದಿವೆ. ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಭಕ್ತಿಭಾವ ಹೆಚ್ಚಿಸುತ್ತವೆ. ಹಿಮಾಲಯದ ಕೇದಾರನಾಥ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗದ ಅದೆಷ್ಟೋ ಭಕ್ತರಿಗೆ ಹರಿಹರ ನಗರದಲ್ಲೇ ಕೇದಾರನಾಥನ ಭವ್ಯ ದರ್ಶನ ಕಲ್ಪಿಸಿರುವುದು ಶ್ಲಾಘನೀಯ. ಗಣೇಶ ಹಾಗೂ ಈಶ್ವರನ ಕೃಪೆ ಸಮಾಜದ ಎಲ್ಲ ಜನರ ಮೇಲಿರಲಿ ಎಂದು ಆಶೀರ್ವದಿಸಿದರು.ಸಾರ್ವಜನಿಕ ವಿನಾಯಕ ಸಂಘದ ಗೌರವಾಧ್ಯಕ್ಷ ನಂದಿಗಾವಿ ಶ್ರೀನಿವಾಸ್, 64ನೇ ವರ್ಷದ ಗಣೇಶೋತ್ಸವಕ್ಕೆ ಸಾರ್ವಜನಿಕರ ಸಹಕಾರ ಅದ್ಭುತವಾಗಿದೆ. ಕೇದಾರ ಪೀಠದ ಜಗದ್ಗುರು ಪಾದಸ್ಪರ್ಶದ ಪರಿಣಾಮ ನಮ್ಮ ಮಂಟಪ ಮತ್ತಷ್ಟು ಪಾವನವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
- - -
ಹರಿಹರ ನಗರದ ಗಾಂಧಿ ಮೈದಾನದಲ್ಲಿ ಗಣೇಶೋತ್ಸವ ಅಂಗವಾಗಿ ನಿರ್ಮಿಸಿದ ಕೇದಾರನಾಥ ಮಾದರಿ ಮಹಾಮಂಟಪವನ್ನು ಕೇದಾರ ಪೀಠದ ಡಾ.ಭೀಮಶಂಕರಲಿಂಗ ಶ್ರೀ ಹಾಗೂ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶ್ರೀ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.