ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ದೀಪೋತ್ಸವದ ಅಂಗವಾಗಿ ಶ್ರೀರಂಗನಾಥಸ್ವಾಮಿ ದೇವಾಲಯ ಸೇರಿದಂತೆ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ದೇಗುಲದ ಮುಂಭಾಗದಿಂದ ಬಾತುಕೋಳಿ ವೃತ್ತದವರೆಗೆ ಸುಮಾರು 300 ಮೀಟರ್ ದೂರದವರೆಗೆ ಲಕ್ಷಾಂತರ ಮಣ್ಣಿನ ದೀಪಗಳನ್ನು ಹೊತ್ತಿಸಿ ಭಕ್ತಿ ಭಾವ ಮೆರೆದರು. ಇದರಿಂದ ದೇವಾಲಯದ ಅಂಗಳ ಬೆಳಕಿನೊಂದಿಗೆ ಕಂಗೊಳಿಸುತ್ತಿತ್ತು.
ರಸ್ತೆ ಎರಡು ಬದಿಗಳಲ್ಲಿ ಬಿದಿರಿನ ದಬ್ಬಗೆಳ ಪಟ್ಟಿ ಮೇಲೆ ಸಗಣಿ ಇಟ್ಟು ಮಣ್ಣಿನ ದೀಪಗಳನ್ನು ಜೋಡಿಸಿ ಅವುಗಳಿಗೆ ಎಣ್ಣೆ ಬತ್ತಿಗಳನ್ನು ಹಾಕಿ ಬೀಪಗಳನ್ನು ಹೊತ್ತಿಸುತ್ತಿದ್ದ ದೃಶ್ಯ ಕಣ್ಮನ ಸೆಳೆಯಿತು. ಪಟ್ಟಣದ ಕೋಟೆ ಬಾಗಿಲಿಗೆ ಸಂಕ್ರಾಂತಿ ಹಬ್ಬದ ಲಕ್ಷ ದೀಪೋತ್ಸವದ ಕಮಾನು ಹಾಕಲಾಗಿತ್ತು.ಬಸ್ ನಿಲ್ದಾಣ, ಪೇಟೆ ಬೀದಿಗಳನ್ನು ಸೇರಿದಂತೆ, ಪುರಸಭ ವೃತ್ತ, ಅಂಬೇಡ್ಕರ್ ವೃತ್ತ, ಬಾತು ಕೋಳಿ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳನ್ನು ವಿದ್ಯುತ್ ದೀಪ ಹಾಗೂ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಭಕ್ತರು, ದಾನಿಗಳು ನೆರವಿನಿಂದ ಲಕ್ಷ ದೀಪೋತ್ಸವ ಸಮಿತಿ ಕಾರ್ಯಕರ್ತರು ಎಣ್ಣೆ, ದೀಪಗಳನ್ನು ಸಂಗ್ರಹಿಸಿತ್ತು.
ದೇವಾಲಯದಲ್ಲಿ ವರ್ಷಕ್ಕೊಮ್ಮೆ ತೆಗೆಯುವ ಸ್ವರ್ಗದ ಬಾಗಿಲನ್ನು ತೆಗೆದು ಭಕ್ತರಿಗೆ ಒಳ ಪ್ರವೇಶಿಸಲು ಅವಕಾಶ ಮಾಡಲಾಗಿತ್ತು. ಇದಕ್ಕಾಗಿ ಸಹಸ್ರಾರು ಭಕ್ತರು ಸಾಲುಗಟ್ಟಿ ಸ್ವರ್ಗದ ಬಾಗಿಲನ್ನು ಪ್ರವೇಶಿಸಲು ದೇವಾಲಯದ ಒಳಗೆ ನಿಂತಿದ್ದ ದೃಶ್ಯ ಕಂಡು ಬಂತು.