ಶ್ರದ್ಧಾಭಕ್ತಿಯಿಂದ ನಡೆದ ರಾಯರ ೪೩೦ನೇ ವರ್ಧಂತಿ ಉತ್ಸವ

KannadaprabhaNewsNetwork | Published : Mar 8, 2025 12:30 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಘವೇಂದ್ರ ಸ್ವಾಮಿಗಳವರ ೪೩೦ ನೇ ವರ್ಧಂತಿ ಉತ್ಸವವನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು. ಬೆಳಿಗ್ಗೆ ವೃಂದಾವನದ ನಿರ್ಮಾಲ್ಯ ವಿಸರ್ಜನ, ಬಳಿಕ ಪಂಚಾಮೃತ ಅಭಿಷೇಕ, ಭಕ್ತ ಮಂಡಳಿಯಿಂದ ಅಷ್ಟೋತ್ತರ ಪಾರಾಯಣ ನಡೆದವು. ಇದೇ ಸಂದರ್ಭದಲ್ಲಿ ವೃಂದಾವನಕ್ಕೆ ನೂತನ ವಸ್ತ್ರ ಸಮರ್ಪಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಘವೇಂದ್ರ ಸ್ವಾಮಿಗಳವರ ೪೩೦ ನೇ ವರ್ಧಂತಿ ಉತ್ಸವವನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು. ಬೆಳಿಗ್ಗೆ ವೃಂದಾವನದ ನಿರ್ಮಾಲ್ಯ ವಿಸರ್ಜನ, ಬಳಿಕ ಪಂಚಾಮೃತ ಅಭಿಷೇಕ, ಭಕ್ತ ಮಂಡಳಿಯಿಂದ ಅಷ್ಟೋತ್ತರ ಪಾರಾಯಣ ನಡೆದವು. ಇದೇ ಸಂದರ್ಭದಲ್ಲಿ ವೃಂದಾವನಕ್ಕೆ ನೂತನ ವಸ್ತ್ರ ಸಮರ್ಪಿಸಲಾಯಿತು. ನಂತರ ರಥೋತ್ಸವ ಬಳಿಕ ಕನಕಸೇವೆ ನಡೆದವು. ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿದ್ದ ಪ್ರಲ್ಹಾದರಾಜರ ಪ್ರತಿಮೆ ಕಂಗೊಳಿಸುತ್ತಿತ್ತು. ರಥೋತ್ಸವದ ಹಿನ್ನಲೆಯಲ್ಲಿ ಶ್ರೀಮಠವನ್ನು ತಳಿರು ತೋರಣ ಬಾಳೆ ದಿಂಡುಗಳಿಂದ ಅಲಂಕರಿಸಲಾಗಿತ್ತು.

ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರ ಆಜ್ಞಾನುಸಾರ ಶ್ರೀಮಠದಲ್ಲಿ ಏಳು ದಿನಗಳ ಕಾಲ ಹುಬ್ಬಳ್ಳಿಯ ಪ್ರವಚನ ಭಾರತಿ ಡಾ.ಕಂಠಪಲ್ಲಿ ಸಮೀರಣ ಆಚಾರ್ಯರಿಂದ ನಡೆದ ಪ್ರವಚನ ಸಪ್ತಾಹದ ಮಂಗಳ ಜರುಗಿದವು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಕಂಠಪಲ್ಲಿ ಸಮೀರಣ ಆಚಾರ್ಯರು, ಗುರುಸಾರ್ವಭೌಮರಲ್ಲಿ ಕಾಣುವ ಪೂಜ್ಯತ್ವಕ್ಕೆ ಅವರಲ್ಲಿರುವ ಸತ್ಯ-ಧರ್ಮವೇ ಕಾರಣವಾಗಿವೆ. ರಾಯರು ಜಾತಿಮೀರಿ ಸ್ಪಂದನೆ ನೀಡುವರು, ಹೀಗಾಗಿ ಅವರು ಓರ್ವ ಜಾತ್ಯಾತೀತ ಸ್ವಾಮಿಗಳು. ಭಾಗವತವನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಲ್ಲಿ ಭಾರತವನ್ನು ವಿಶ್ವಗುರುವಾಗಿ ಗುರುತಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸುವರ್ಣ ಮಂತ್ರಾಲಯದ ನಿರ್ಮಾಪಕರು ಅದರಂತೆ ಭಕ್ತರಿಗೆ ಸುಧೆಯ ರಸದೌತಣವನ್ನು ಹರಿಸಿದವರು ಎಂದು ಬಣ್ಣಿಸಿದರು.

ವಿಚಾರಣಕರ್ತಾ ಗೋಪಾಲ ನಾಯಕರು ಮಾತನಾಡಿ, ನವಭಕ್ತಿಯನ್ನು ಶ್ರವಣ ಭಕ್ತಿ ಶ್ರೇಷ್ಠವಾದುದು. ಅದರಂತೆ ಏಳು ದಿನಗಳ ಕಾಲ ನಡೆದ ಪ್ರವಚನ ಸಪ್ತಾಹಕ್ಕೆ ಭಕ್ತರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಭಕ್ತ ಪ್ರವಾಹ ಹರಿದು ಬಂದದ್ದೇ ಸಾಕ್ಷಿ ಎಂದು ಹೇಳಿದರು.

ಪ್ರವಚನ ಸಪ್ತಾಹದ ಸೇವೆಗೈದ ಹುಬ್ಬಳ್ಳಿಯ ಆನಂದರಾವ ನಾಯಕ ದಂಪತಿ ಆಚಾರ್ಯರಿಗೆ ಗುರುಕಾಣಿಕೆ ನೀಡಿ ಗೌರವಿಸಿದರು. ಮಠದ ಭಕ್ತ ಭೀಮಣ್ಣ ಕುಲಕರ್ಣಿಯವರು ಪ್ರವಚನಗೈದ ಆಚಾರ್ಯರಿಗೆ ತಿರುಪತಿಯಿಂದ ಪ್ರಸಾದವನ್ನು ನೀಡಿ ಗೌರವಿಸಿದರು.

ಮಠದ ವಿಚಾರಣಕರ್ತಾ ಗೋಪಾಲ ನಾಯಕ, ವಾಮನರಾವ ದೇಶಪಾಂಡೆ, ಕೃಷ್ಣ ಬೀಡಕರ, ವಾರಕರ, ವಿಜಯೀಂದ್ರ ಜೋಶಿ, ಶ್ರೀಕೃಷ್ಣ ಪಡಗಾನೂರ, ಪ್ರಕಾಶ ಬಿಜಾಪುರ, ಬಿ.ಜಿ.ಜೋಶಿ, ಶ್ರೀಧರ ಹರಿದಾಸ, ಬಂಡಾಚಾರ್ಯ ಜೋಶಿ, ಶ್ರೀಧರ ಜೋಶಿ(ಮುತ್ತಗಿ), ಭೀಮಣ್ಣ ಕುಲಕರ್ಣಿ, ಬಿ.ಬಿ.ಕುಲಕರ್ಣಿ, ಡಿ.ಆರ್.ನಾಡಿಗ ಮುಂತಾದವರು ಭಾಗವಹಿಸಿದ್ದರು.

Share this article