ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಸೆ.24 ಮತ್ತು 25 ರಾಜ್ಯ ಮಟ್ಟದ 46ನೇ ಶ್ರೀಕಾಲಭೈರವೇಶ್ವರ ಜಾನಪದ ಕಲಾಮೇಳ, ಚುಂಚಶ್ರೀ ಪ್ರಶಸ್ತಿ ಪ್ರದಾನ ಹಾಗೂ ಭೈರವೈಕ್ಯ ಶ್ರೀಡಾ.ಬಾಲಗಂಗಾಧರನಾಥಶ್ರೀಗಳ ಗುರು ಸಂಸ್ಮರಣೋತ್ಸವ ಸಮಾರಂಭ ನಡೆಯಲಿದೆ.ಮನುಕುಲದ ಸಂಸ್ಕೃತಿಯಾದ ಜಾನಪದ ಕಲೆಯನ್ನು ಸಂರಕ್ಷಿಸಿ ಅದರ ಪುರೋಭಿವೃದ್ಧಿಗಾಗಿ ಚಿಂತಿಸುತ್ತಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಜನಪದ ಕಲೆ, ಸಾಹಿತ್ಯವನ್ನು ರಕ್ಷಿಸಿ, ಉಳಿಸಿ ಬೆಳೆಸುವ ಜೊತೆಗೆ ಕಲಾವಿದರ ಬದುಕನ್ನು ಹಸನುಗೊಳಿಸುವ ಉದ್ದೇಶದಿಂದ ಸೆ.24 ಮತ್ತು 25ರಂದು ಹಮ್ಮಿಕೊಂಡಿರುವ ಸಮಾರಂಬದಲ್ಲಿ ಶ್ರೀಮಠದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥಸ್ವಾಮೀಜಿ ಅವರ ದಿವ್ಯಸಾನಿಧ್ಯ ವಹಿಸಲಿದ್ದಾರೆ.
ಸೆ.24 ರಂದು ಬೆಳಗ್ಗೆ 10 ಗಂಟೆಗೆ ರಾಜ್ಯಮಟ್ಟದ ಜಾನಪದ ಕಲಾಮೇಳವನ್ನು ಶ್ರೀಗಳ ಜೊತೆಗೂಡಿ ಗಣ್ಯರು ಉದ್ಘಾಟಿಸಲಿದ್ದಾರೆ. ಸೆ.25ರ ಬೆಳಗ್ಗೆ 9.30 ಗಂಟೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೇ ದಿನ ಸಂಜೆ 5 ಗಂಟೆಗೆ ಕ್ಷೇತ್ರದ ಜೋಡಿ ರಸ್ತೆಯಲ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ಸರ್ವಾಲಂಕೃತ ಮುತ್ತಿನ ಪಾಲಕಿ ಉತ್ಸವ ಹಾಗೂ ಜಾನಪದ ಕಲಾವಿದರ ವರ್ಣರಂಜಿತ ಮೆರವಣಿಗೆ ನಡೆದ ಬಳಿಕ ಶ್ರೀಕಾಲಭೈರವೇಶ್ವರಸ್ವಾಮಿ ಪುಷ್ಕರಣೆಯಲ್ಲಿ ತೆಪ್ಪೋತ್ಸವ ಜರುಗಲಿದೆ.ಸೆ.25ರ ಬೆಳಗ್ಗೆ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ವಾರ್ಷಿಕ ಪಟ್ಟಾಭಿಷೇಕ, ಶ್ರೀಗುರು ಸಂಸ್ಮರಣೋತ್ಸವ ಮತ್ತು ರಾಜ್ಯಮಟ್ಟದ 46ನೇ ಶ್ರೀಕಾಲಭೈರವೇಶ್ವರ ಜಾನಪದ ಕಲಾಮೇಳದ ಸಮಾರೋಪ ಸಮಾರಂಭ ನಡೆಯಲಿದೆ. ಜಾನಪದ ಕ್ಷೇತ್ರದ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಜಾನಪದ ಕಲಾಮೇಳದಲ್ಲಿ ಭಾಗವಹಿಸುವ ಎಲ್ಲಾ ಕಲಾವಿದರಿಗೆ ವಸ್ತ್ರ ಸೇರಿದಂತೆ ಪ್ರಯಾಣ ಭತ್ಯೆ ಹಾಗೂ ಉಚಿತ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುವುದು. ಜಾನಪದ ಕಲಾಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಕಲಾವಿದರು ಸೆ.23ರ ಬೆಳಗ್ಗೆ 9 ಗಂಟೆಗೆ ಆಗಮಿಸಿ ನೊಂದಾಯಿಸಿಕೊಳ್ಳಬೇಕು, ನಂತರ ಬಂದವರ ನೋಂದಣಿ ಮಾಡಿಸಿಕೊಳ್ಳುವುದಿಲ್ಲ.ಆಧಾರ್‌ಕಾರ್ಡ್ ಜೊತೆಗೆ ತಮ್ಮ ಜಿಲ್ಲೆಯ ಆದಿಚುಂಚನಗಿರಿ ಶಾಖಾ ಮಠ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾಗವಹಿಸುವಿಕೆಯ ಪತ್ರವನ್ನು ಕಡ್ಡಾಯವಾಗಿ ತರತಕ್ಕದ್ದು. ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಮಠದ ಪ್ರಧಾನಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆದಿಚುಂಚನಗಿರಿಯಲ್ಲಿ ಶರನ್ನವರಾತ್ರಿ ಉತ್ಸವ:
ನವರಾತ್ರಿ ಅಂಗವಾಗಿ ಆದಿಚುಂಚನಗಿರಿ ಮಠದಲ್ಲಿ 9 ದಿನಗಳ ಕಾಲ ಶರನ್ನವರಾತ್ರಿ ಉತ್ಸವ ನಡೆಯಲಿದೆ. ಸೆ.21ರಿಂದ ಆರಂಭಗೊಂಡು ಅ.2 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 9 ದಿನಗಳ ಕಾಲವು ಪ್ರತಿದಿನ ಸಂಜೆ 5.30ಕ್ಕೆ ಒಂದೊಂದು ಶಾಖಾ ಮಠ ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರಿಂದ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸೆ. 22ರಂದು ಸಂಜೆ 5.30 ನವರಾತ್ರಿ ಪೂಜೆ, ಸಿಂಹಾಸನ ಪೂಜೆ ಹಾಗೂ ಷೋಡಶೋಪಚಾರ ಪೂಜೆ ನಡೆಯಲಿದೆ. ಸೆ.29ರಂದು ಬೆಳಗ್ಗೆ 9.30ಕ್ಕೆ ಅಕ್ಷರಾಭ್ಯಾಸ ನಡೆಯಲಿದೆ. ಸೆ.30ರಂದು ದುರ್ಗಾಷ್ಟಮಿ ಪೂಜೆ ಹಾಗೂ ಅ.1 ರಂದು ಆಯುಧ ಪೂಜೆ ಮತ್ತು ಅ.2 ರಂದು ವಿಜಯದಶಮಿ ಮತ್ತು ಶಮೀಪೂಜೆ ನೆರವೇರಲಿದೆ.