ಡಿಸೆಂಬರ್ ತಿಂಗಳಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ

KannadaprabhaNewsNetwork |  
Published : Apr 16, 2025, 12:43 AM IST
ಸಾಹಿತ್ಯ ಸಮ್ಮೇಳನ ಆಯೋಜನೆಯ ಕುರಿತು ಪೂರ್ವಭಾವಿ ಸಭೆಯಲ್ಲಿ ಡಾ. ಮಹೇಶ್ ಜೋಶಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡದ ನಾಡು-ನುಡಿ, ಭಾಷಾಭಿಮಾನ, ಕನ್ನಡದ ಅಸ್ಮಿತೆಯನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ಕನ್ನಡದ ತೇರನ್ನು ಎಳೆಯಲು ನಾವೆಲ್ಲರೂ ಸಿದ್ಧರಾಗೋಣ.

ಕನ್ನಡದ ತೇರು ಎಳೆಯಲು ಸಿದ್ಧರಾಗೋಣ: ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿಕನ್ನಡಪ್ರಭ ವಾರ್ತೆ ಬಳ್ಳಾರಿ

ಬಳ್ಳಾರಿಯಲ್ಲಿ ಬರುವ ಡಿಸೆಂಬರ್ ತಿಂಗಳಲ್ಲಿ ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿಯಲ್ಲಿ ಮಾತನಾಡಿದ ಅವರು, ಕನ್ನಡದ ನಾಡು-ನುಡಿ, ಭಾಷಾಭಿಮಾನ, ಕನ್ನಡದ ಅಸ್ಮಿತೆಯನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ಕನ್ನಡದ ತೇರನ್ನು ಎಳೆಯಲು ನಾವೆಲ್ಲರೂ ಸಿದ್ಧರಾಗೋಣ. ಸಮ್ಮೇಳನಗಳಲ್ಲಿ ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ, ಭಾಷೆ ಬೆಳವಣಿಗೆ, ಗಡಿ ಭಾಗದ ಶಾಲಾ ವಿಚಾರಗಳ ಸಂಬಂಧಿಸಿದಂತೆ ಹಲವು ನಿರ್ಣಯಗಳನ್ನು ತೆಗೆದುಕೊಂಡು ಸರ್ಕಾರದ ಮುಂದಿಡಲಾಗುತ್ತದೆ ಎಂದರು.

ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 5 ಸಾಹಿತ್ಯ ಸಮ್ಮೇಳನಗಳು ನಡೆದಿವೆ. 1920ರಲ್ಲಿ ಮೊದಲ ಬಾರಿಗೆ ಅಖಂಡ ಜಿಲ್ಲೆಯ ಹೊಸಪೇಟೆಯಲ್ಲಿ ರೊದ್ದ ಶ್ರೀನಿವಾಸ ರಾವ್ ಅವರ ಅಧ್ಯಕ್ಷತೆಯಲ್ಲಿ 6ನೇ ಸಮ್ಮೇಳನ ನಡೆಯಿತು. 1926 ರ ಮೇ 22 ರಿಂದ 24 ರ ವರೆಗೆ ಮೂರು ದಿನಗಳ ಕಾಲ 12 ನೇ ಸಮ್ಮೇಳನ ಬಳ್ಳಾರಿ ನಗರದಲ್ಲಿ ನಡೆದಿತ್ತು. ಇದರ ಅಧ್ಯಕ್ಷತೆಯನ್ನು ವಚನ ಪಿತಾಮಹ ಫಕೀರಪ್ಪ ಗುರುಬಸಪ್ಪ ಹಳಕಟ್ಡಿ (ಫ.ಗು.ಹಳಕಟ್ಟಿ) ವಹಿಸಿದ್ದರು. 12 ವರ್ಷಗಳ ನಂತರ ಮೂರನೇ ಬಾರಿಗೆ 1938 ರ ಡಿ.29 ರಿಂದ 31 ರ ವರೆಗೆ 23 ನೇ ಸಮ್ಮೇಳನ ರಂಗನಾಥ್ ದಿವಾಕರ್ ಅಧ್ಯಕ್ಷತೆಯಲ್ಲಿ ನಡೆದಿತ್ತು. 4ನೇ ಬಾರಿಗೆ ಹರಪನಹಳ್ಳಿಯಲ್ಲಿ 1947 ರಲ್ಲಿ ಸಿ.ಕೆ.ವೆಂಕಟರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಳಿಕ 11 ವರ್ಷಗಳ ನಂತರ 1958ರ ಜ. 18 ರಿಂದ 20 ರ ವರೆಗೆ ವಿನಾಯಕ್ ಕೃಷ್ಣ ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ 5ನೇ ಬಾರಿಗೆ ನಡೆಯಿತು. ಈಗ 67 ವರ್ಷದ ಬಳಿಕ ಮರಳಿ ಸಾಹಿತ್ಯ ಸಮ್ಮೇಳನದ ಆತಿಥ್ಯ ದೊರೆತಿದೆ. 2025ರ ಡಿಸೆಂಬರ್‌ನಲ್ಲಿ ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.

ಡಿಸೆಂಬರ್ ತಿಂಗಳಲ್ಲಿ ವಾತಾವರಣ ಮತ್ತು ಹವಾಮಾನ ಚೆನ್ನಾಗಿರುವುದರಿಂದ ಆಯೋಜನೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯದಂತೆ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ವಿಶ್ವ-ವಿದ್ಯಾಲಯಗಳ ವಿದ್ಯಾರ್ಥಿಗಳು, ಶಾಲಾ-ಕಾಲೇಜು, ವಸತಿ ನಿಲಯಗಳ ಮಕ್ಕಳು ಸೇರಿದಂತೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಳ್ಳಾರಿ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸರ್ ಥಾಮಸ್ ಮುನ್ರೋ ಅವರ ಕುಟುಂಬಸ್ಥರನ್ನು ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸಲಾಗುವುದು ಎಂದು ಇದೇ ಸಂದರ್ಭ ಮಹೇಶ್ ಜೋಶಿ ತಿಳಿಸಿದರು.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿರುವ ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಮತ್ತು ಅಚ್ಚು-ಕಟ್ಟಾಗಿ ಆಯೋಜಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭಾರಾಣಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?