ಕೊಟ್ಟಾರಚೌಕಿಯೆಂಬ ಕೃತಕ ಪ್ರವಾಹದ 8ನೇ ಅದ್ಭುತ!

KannadaprabhaNewsNetwork |  
Published : Jun 21, 2025, 12:49 AM IST
ಮಳೆ ಬರುವಾಗ ಹೆದ್ದಾರಿ ಮೇಲೆ ನದಿಯಂತೆ ಪ್ರವಾಹ. | Kannada Prabha

ಸಾರಾಂಶ

ಸ್ವಲ್ಪ ಹೊತ್ತು ಮಳೆ ಬಂದರೂ ಕೊಟ್ಟಾರ ಚೌಕಿ ಪ್ರದೇಶ ಪ್ರವಾಹದ 8ನೇ ಅದ್ಭುತ(?)ದಂತಾಗುತ್ತದೆ. ಮನೆ, ಅಂಗಡಿ ಮುಂಗಟ್ಟು ಮಾಲೀಕರಿಗೆ ನರಕಯಾತನೆ. ಇಲ್ಲಿನ ಭೂ ದಂಧೆಯ ಎದುರು ಆಡಳಿತ ಕೈ-ಬಾಯಿ ಮುಚ್ಚಿ ಕೂತಿದೆ.

ಸಂದೀಪ್‌ ವಾಗ್ಲೆಕನ್ನಡಪ್ರಭ ವಾರ್ತೆ ಮಂಗಳೂರುಮಳೆ ಸುರಿದರೆ ಮೊದಲು ಮುಳುಗುವ ಮಂಗಳೂರಿನ ಹೆದ್ದಾರಿ ಪ್ರದೇಶವೇ ಕೊಟ್ಟಾರ ಚೌಕಿ. ಇಲ್ಲಿ ಮಳೆ ನೀರು ಹರಿಯಲು ರಾಜಕಾಲುವೆಗಳಿವೆ, ಆದರೆ ಅವುಗಳ ಅಗಲವೇ ಕಿರಿದಾಗಿದೆ. ರಸ್ತೆ ಬದಿ ಚರಂಡಿ ಕೆಲವೆಡೆ ಕಾಣುತ್ತದೆ, ಬಹುತೇಕ ಕಡೆ ಮುಚ್ಚಿಬಿಟ್ಟಿದೆ. ರಿಯಲ್‌ ಎಸ್ಟೇಟ್‌ ಕಾರುಬಾರಿಗೆ ಮಳೆ ನೀರ ತೋಡು ಮಾಯವಾಗಿದೆ. ಹೀಗಾಗಿ ಸ್ವಲ್ಪ ಹೊತ್ತು ಮಳೆ ಬಂದರೂ ಕೊಟ್ಟಾರ ಚೌಕಿ ಪ್ರದೇಶ ಪ್ರವಾಹದ 8ನೇ ಅದ್ಭುತ(?)ದಂತಾಗುತ್ತದೆ. ಮನೆ, ಅಂಗಡಿ ಮುಂಗಟ್ಟು ಮಾಲೀಕರಿಗೆ ನರಕಯಾತನೆ. ಇಲ್ಲಿನ ಭೂ ದಂಧೆಯ ಎದುರು ಆಡಳಿತ ಕೈ-ಬಾಯಿ ಮುಚ್ಚಿ ಕೂತಿದೆ.

ಕೊಟ್ಟಾರಚೌಕಿಯ ಪ್ರವಾಹದ ಗೋಳು ಇಂದು ನಿನ್ನೆಯದಲ್ಲ. ಒಂದು ಕಾಲದಲ್ಲಿ ಸುತ್ತ ಗದ್ದೆಗಳಿಂದ ಆವೃತ್ತವಾದ ಈ ಪ್ರದೇಶದಲ್ಲಿ ಒಂದೆರಡು ದಶಕದಿಂದೀಚೆಗೆ ಬಹುಮಹಡಿ ಕಟ್ಟಡಗಳೆದ್ದಿವೆ. ಭೂಮಿಯ ಆಸೆಗೆ ಮಳೆನೀರ ಬೃಹತ್ ತೋಡುಗಳು ಬಲಿಯಾಗಿವೆ. ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಉಕ್ಕಿ ಕೃತಕ ಪ್ರವಾಹ ಉಂಟಾಗುತ್ತಿದೆ. ಪ್ರತಿಬಾರಿ ಪ್ರವಾಹ ಉಂಟಾದಾಗಲೂ ಹತ್ತಾರು ಅಂಗಡಿಗಳು, ಮನೆಗಳಿಗೆ ನೀರು ನುಗ್ಗಿ ಹಾನಿಯಾಗುತ್ತಿದೆ. ಮುಖ್ಯವಾಗಿ ಟೋಲ್‌ ಕಟ್ಟಿ ಸಂಚರಿಸುವ ಹೆದ್ದಾರಿಯ ಸಂಚಾರಕ್ಕೇ ಸಂಚಕಾರ.

ಅಗಲ ಕಿರಿದಾದ ರಾಜಕಾಲುವೆ:

ಮಾಲೆಮಾರ್‌, ಉರ್ವಸ್ಟೋರ್‌, ಮತ್ತೊಂದೆಡೆ ಕೋಡಿಕಲ್‌ ಪ್ರದೇಶದಿಂದ ಕೊಟ್ಟಾರಚೌಕಿಗೆ ಹರಿದುಬರುವ ನೀರು ಅಲ್ಲಿಂದ ತೋಡಿನ ಮೂಲಕ ಫಲ್ಗುಣಿ ನದಿ ಸೇರುತ್ತದೆ. ಹೆದ್ದಾರಿ ಉದ್ದಕ್ಕೂ ರಾಜಕಾಲುವೆ ಇದೆ. ಅದರ ಪಕ್ಕದಲ್ಲಿ ವಾಣಿಜ್ಯ ಕಟ್ಟಡಗಳಿವೆ. ವಾಣಿಜ್ಯ ಕಟ್ಟಡಗಳು ಇರುವಲ್ಲೆಲ್ಲ ರಾಜಕಾಲುವೆಯನ್ನು ಮೇಲ್ಭಾಗದಲ್ಲಿ ಅಕ್ರಮವಾಗಿ ಮುಚ್ಚಲಾಗಿದೆ. ಕೊಟ್ಟಾರಚೌಕಿ ಫ್ಲೈಓವರ್‌ ಹತ್ತಿರ (ಎಜೆ ಆಸ್ಪತ್ರೆ ಕಡೆ ಹೋಗುವ ಹೆದ್ದಾರಿ) ಸುಮಾರು 200 ಮೀ.ನಷ್ಟು ಮಳೆ ನೀರ ತೋಡನ್ನು ಅಲ್ಲಿನ ವಾಣಿಜ್ಯ ಕಟ್ಟಡದವರು ಅಗಲ ಕಿರಿದು ಮಾಡಿ ಮೇಲ್ಭಾಗದಲ್ಲಿ ಸಂಪೂರ್ಣ ಮುಚ್ಚಿಬಿಟ್ಟಿದ್ದಾರೆ. ಅಡಿ ಭಾಗದಲ್ಲಿ ಸಂಪೂರ್ಣ ಹೂಳು ತುಂಬಿ ತೋಡಿನಲ್ಲಿ ನೀರು ಹೋಗಲು ಜಾಗವೇ ಇಲ್ಲದಂತಾಗಿದೆ. ಹೂಳೆತ್ತುವ ಕಾಮಗಾರಿ ನಡೆಸಿದ್ದೇವೆ ಎನ್ನುವವರು ಇಲ್ಲಿಗೊಮ್ಮೆ ಭೇಟಿ ನೀಡಬಹುದು. ಈ ತೋಡನ್ನು ಅಗಲ ಕಿರಿದಾದ ಪೈಪಿನ ಮೂಲಕ ಮುಖ್ಯ ಕಾಲುವೆಗೆ ಸಂಪರ್ಕಿಸಲಾಗಿದೆ.

ಇನ್ನೊಂದು ಪಾರ್ಶ್ವದಲ್ಲಿ, ಕೊಟ್ಟಾರಚೌಕಿಯಿಂದ ಬಂಗ್ರಕೂಳೂರು ಹೆದ್ದಾರಿ ಪಕ್ಕದ ರಾಜಕಾಲುವೆಯನ್ನು ಖಾಸಗಿ ಸಂಸ್ಥೆಯೊಂದು ಮಣ್ಣು ಹಾಕಿ ಅರ್ಧಕ್ಕರ್ಧ ಮುಚ್ಚಿಬಿಟ್ಟಿದ್ದು ನೀರಿನ ಹರಿವಿಗೆ ಬಹುದೊಡ್ಡ ಕಂಟಕವಾಗಿದೆ. ಈ ರಾಜಕಾಲುವೆಯೂ ಉದ್ದಕ್ಕೂ ಖಾಸಗಿಯವರ ಆಸೆಗೆ ಅಗಲ ಕಿರಿದಾಗಿದೆ.

ಚರಂಡಿ ಇದೆ, ಆದರೆ ಮುಚ್ಚಿದೆ!:

ಇನ್ನು ಹೆದ್ದಾರಿ ಪಕ್ಕ ಚರಂಡಿಗಳನ್ನು ಭೂತಗನ್ನಡಿ ಹಿಡಿದು ಹುಡುಕಬೇಕು. ಚರಂಡಿ ಇರುವ ಕಡೆಗಳಲ್ಲಿ ಸಿಮೆಂಟ್‌ ಸ್ಲ್ಯಾಬ್‌ಗಳನ್ನು ಹಾಕಿ ಮುಚ್ಚಲಾಗಿದೆ. ಒಳಗೆ ಮಣ್ಣಿನಿಂದ ಮುಚ್ಚಿ ಮಳೆ ನೀರು ರಸ್ತೆ ಮೇಲೆ ಜಲಪಾತದಂತೆ ಹರಿಯುತ್ತದೆ.

ಉರ್ವಸ್ಟೋರ್‌ ಕಡೆಯಿಂದ ಚರಂಡಿಯಲ್ಲಿ ಹರಿದು ಬರುವ ನೀರು ನಡುವೆ ಹೂಳು ತುಂಬಿದ್ದರಿಂದ ರಸ್ತೆಗೆ ಉಕ್ಕುತ್ತದೆ. ಕೊಟ್ಟಾರಚೌಕಿ ಮುಖ್ಯ ಭಾಗದಲ್ಲಿ ಸರ್ವಿಸ್‌ ರಸ್ತೆಯ ಉದ್ದಕ್ಕೂ ಚರಂಡಿಗಳೇ ಇಲ್ಲ. ಅಲ್ಲಲ್ಲಿ ಚರಂಡಿಯ ಕುರುಹು ಕಾಣುತ್ತದೆಯಾದರೂ ಸಂಪೂರ್ಣ ಮುಚ್ಚಲಾಗಿದೆ. ಚರಂಡಿ ಮಾಡುವ ಗೋಜಿಗೇ ಆಡಳಿತ ಹೋಗಿಲ್ಲ.

ಬಂಗ್ರ ಕೂಳೂರಿನಲ್ಲಿ ಹೆದ್ದಾರಿ ಬದಿಯ ಸಣ್ಣ ಚರಂಡಿ ಹಾಗೂ 150- 200 ಮೀ. ಉದ್ದದ ಮಳೆ ನೀರ ತೋಡನ್ನು ಸಂಪೂರ್ಣವಾಗಿ ಮುಚ್ಚಿರುವುದು ಮೇಲ್ನೋಟಕ್ಕೆ ಕಂಡುಬಂದರೂ ಅದರ ವಿರುದ್ಧ ಕ್ರಮವಾಗಲೀ, ಮಣ್ಣು ತೆಗೆದು ತೋಡು ಮರುನಿರ್ಮಾಣ ಮಾಡುವ ಕಾರ್ಯವೂ ಆಗಿಲ್ಲ. ಅಲ್ಲಿಂದ ಮುಂದೆ ಕೊಟ್ಟಾರಚೌಕಿ ಕಡೆ ಬರುವಾಗ ಮಳೆನೀರ ತೋಡು ಸಂಪೂರ್ಣ ಹೂಳು ತುಂಬಿ ತೋಡು ಇದೆಯೋ ಇಲ್ಲವೋ ಎಂಬ ಗೊಂದಲ ಕಾಡುತ್ತದೆ, ಅದರ ನಡುವೆ ಬೃಹತ್‌ ಪೈಪ್‌ ಬೇರೆ ಹಾದುಹೋಗಿದೆ.

ಪರಿಹಾರ ಮರೀಚಿಕೆ:

ಕೊಟ್ಟಾರಚೌರಿ, ಮಾಲೆಮಾರ್‌ ಪ್ರದೇಶ ಆಗಾಗ ಮುಳುಗಡೆಯಾಗುವ ಕಾರಣಗಳನ್ನು ಹುಡುಕಲು ಎನ್‌ಐಟಿಕೆ ತಜ್ಞರ ತಂಡ ಕೆಲ ವರ್ಷಗಳ ಮೊದಲು ಅಧ್ಯಯನ ನಡೆಸಿ ಪರಿಹಾರೋಪಾಯಗಳನ್ನು ಸೂಚಿಸಿತ್ತು. ಮಳೆನೀರ ತೋಡನ್ನು ಅಗಲಗೊಳಿಸಬೇಕು ಎನ್ನುವುದು ಅದರ ಮುಖ್ಯ ಅಂಶವಾಗಿತ್ತು. ಅದನ್ನು ಮಹಾನಗರ ಪಾಲಿಕೆ ಇನ್ನೂ ಕಾರ್ಯಗತಗೊಳಿಸದೆ ಇರುವುದೇ ಈಗಿನ ಕೃತಕ ಪ್ರವಾಹದ ಅನಾಹುತಗಳಿಗೆ ಕಾರಣ. ಮುಖ್ಯವಾಗಿ ಇಲ್ಲಿನ ತೋಡನ್ನು ಅಗಲಗೊಳಿಸಲು ಭೂಸ್ವಾಧೀನ ಮಾಡಬೇಕು, ಅದಕ್ಕೆ ದೊಡ್ಡ ಮೊತ್ತದ ಅನುದಾನ ಬೇಕು ಎನ್ನುತ್ತಾರೆ ಅಧಿಕಾರಿಗಳು.

-------------ಪ್ರತಿವರ್ಷ ಮಳೆಗಾಲ ಬರುವಾಗ ಮಾತ್ರ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಕೊಟ್ಟಾರಚೌಕಿಯ ನೆನಪಾಗುತ್ತದೆ. ಹಾಗೆ ಮಾಡ್ತೇವೆ, ಹೀಗೆ ಮಾಡ್ತೇವೆ ಎನ್ನುತ್ತಾರೆ. ಮಳೆಗಾಲ ಮುಗಿದ ಬಳಿಕ ಅದರ ಮಾತೇ ಇರಲ್ಲ. ಮೊನ್ನೆಯ ಮಳೆಗೆ ನೀರು ನುಗ್ಗಿ ಅಂಗಡಿಯಲ್ಲಿದ್ದ ಸಾಮಗ್ರಿಗಳೆಲ್ಲ ನೀರುಪಾಲಾಗಿವೆ. ಇದಕ್ಕೆ ಹೊಣೆ ಯಾರು? ಪರಿಹಾರ ಕೊಡುವವರು ಯಾರು? ಯಾರ ತಪ್ಪಿಗೆ ನಾವು ಈ ಶಿಕ್ಷೆ ಅನುಭವಿಸಬೇಕು?

- ಅಂಗಡಿ ಮಾಲೀಕ, ಕೊಟ್ಟಾರ ಚೌಕಿ.

------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಲ ಡಿಪಿಆರ್ ನಂತೆ ಯೋಜನೆ ಅನುಷ್ಠಾನಕ್ಕೆ ಆಗ್ರಹ
ಕಾಲೇಜು ಪ್ರವೇಶ ವೇಳೆಯೇ ಡ್ರಗ್ಸ್‌ ಪರೀಕ್ಷೆ ಅಗತ್ಯ: ಕಮಿಷನರ್‌