ಮಹಿಳೆಗೆ ಚಾಕು ಇರಿದ ಆರೋಪಿಗೆ ಗುಂಡೇಟು

KannadaprabhaNewsNetwork |  
Published : Sep 26, 2024, 10:20 AM IST
ಗಾಯಾಳು | Kannada Prabha

ಸಾರಾಂಶ

ಕೊಲೆ ಮಾಡಿ ಪರಾರಿಯಾಗುವ ಉದ್ದೇಶದಿಂದ ಆರೋಪಿ ಸ್ನೇಹಿತರಿಂದ ₹ 20 ಸಾವಿರ ಸಾಲ ಪಡೆದಿದ್ದ. ವಿಚಾರಣೆ ವೇಳೆ ಈ ವಿಷಯ ಬಾಯಿ ಬಿಟ್ಟಿದ್ದ. ಆರೋಪಿಯನ್ನು ಸ್ಥಳ ಪರಿಶೀಲನೆಗೆ ಹೋದಾಗ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ಹುಬ್ಬಳ್ಳಿ:

ಹುಬ್ಬಳ್ಳಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದೆ. ತಾನು ಪ್ರೀತಿಸುತ್ತಿದ್ದ ಯುವತಿಯ ತಾಯಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕಳೆದ ಎರಡ್ಮೂರು ತಿಂಗಳಲ್ಲಿ 4ನೇ ಬಾರಿಗೆ ಪೊಲೀಸರ ಬಂದೂಕು ಸದ್ದು ಮಾಡಿದಂತಾಗಿದೆ.

ಆಗಿರುವುದೇನು?:

ಲೋಹಿಯಾನಗರದಲ್ಲಿ ತಾಯಿ, ಮೂವರು ಮಕ್ಕಳು, ಅಜ್ಜಿ ಇರುವ ಕುಟುಂಬವದು. ಆ ಮನೆಯ ಯಜಮಾನ 2013ರಲ್ಲಿ ತೀರಿಕೊಂಡಿದ್ದ. ಈ ಮನೆಯ ಯುವತಿಯೊಬ್ಬಳು ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಗೆ ಕಳೆದ ಐದು ವರ್ಷದಿಂದ ಮಹೇಶ ಮೇಟಿ (24) ಎಂಬಾತ ತನ್ನನ್ನು ಪ್ರೀತಿಸು ಎಂದು ಬಲವಂತ ಮಾಡುತ್ತಿದ್ದ. ಆದರೆ, ಕಳೆದ ಕೆಲ ದಿನಗಳಿಂದ ಆತ ಸುಮ್ಮನಾಗಿದ್ದ. ಇವತ್ತು ಮಧ್ಯಾಹ್ನ ಏಕಾಏಕಿಯಾಗಿ ಅವರ ಮನೆಗೆ ನುಗ್ಗಿ ತನ್ನನ್ನು ಮದುವೆಯಾಗು ಇಲ್ಲದಿದ್ದಲ್ಲಿ ನಿಮ್ಮ ಮನೆಯಲ್ಲಿದ್ದವರನ್ನು ಚಾಕುವಿನಿಂದ ಇರಿದುಕೊಲ್ಲುತ್ತೇನೆ ಎಂದು ಹೆದರಿಸಿದ್ದಾನೆ. ಅಲ್ಲದೇ, ಯರ್ರಾಬಿರ್ರಿ ಚಾಕು ಬೀಸಲು ಶುರು ಮಾಡಿದ್ದಾನೆ.

ಆಗ ಯುವತಿಯ ತಾಯಿ ನೀಲಾ ಹಂಪಣ್ಣವರ ಆತನಿಗೆ ಬುದ್ಧಿ ಹೇಳಲು ಮುಂದಾಗಿದ್ದಾಳೆ. ಆದರೆ ಕೇಳುವ ಸ್ಥಿತಿಯಲ್ಲಿದ್ದ ಆತ ಆಕೆಯ ಹೊಟ್ಟೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಕೂಡಲೇ ಮನೆಯಲ್ಲಿದ್ದ ಉಳಿದ ಹೆಣ್ಮಕ್ಕಳು ಆತನನ್ನು ಬಾಗಿಲಿನಿಂದ ಹೊರಗೆ ತಳ್ಳಿದ್ದಾರೆ. ಅಷ್ಟರಲ್ಲೇ ಸುತ್ತಮುತ್ತಲಿನವರು ಸೇರಿದ್ದಾರೆ. ಆತ ಅಲ್ಲಿಂದ ಓಡಿ ಹೋಗಿದ್ದಾನೆ.

ಬಳಿಕ ಸ್ಥಳೀಯರು ಸೇರಿಕೊಂಡು ಚಾಕುವಿನ ಇರಿತಕ್ಕೊಳಗಾದ ನೀಲಾ ಹಂಪಣ್ಣವರ ಅವರನ್ನು ಕೆಎಂಸಿಆರ್‌ಐಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನೀಲಾ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು. ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ.

ಆರೋಪಿಗೆ ಗುಂಡೇಟು:

ಈ ನಡುವೆ ಪ್ರಕರಣ ದಾಖಲಿಸಿಕೊಂಡ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು, ಆರೋಪಿ ಮಹೇಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಸ್ಥಳ ಪರಿಶೀಲನೆ ಕರೆದುಕೊಂಡು ಹೋದ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಆಗ ಪೊಲೀಸ್‌ ಇನ್‌ಸ್ಪೆಕ್ಟರ್‌ ಸುರೇಶ ಯಳ್ಳೂರ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡಿರುವ ಪೊಲೀಸ್‌ ಅಧಿಕಾರಿ ಸುರೇಶ ಯಳ್ಳೂರ, ಸಿಬ್ಬಂದಿ ನಿಂಗಪ್ಪ ಲಮಾಣಿ ಹಾಗೂ ಆರೋಪಿಯನ್ನು ಕೆಎಂಸಿಆರ್‌ಐನಲ್ಲಿ ದಾಖಲಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲರ ಆರೋಗ್ಯ ವಿಚಾರಿಸಿದರು.

ಈ ವೇಳೆ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್. ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು