ಕನ್ನಡಪ್ರಭ ವಾರ್ತೆ ನಾಪೋಕ್ಲುಕೊಡಗು ಜಿಲ್ಲೆಯಲ್ಲಿ ಮಹಿಳಾ ಸಾಹಿತಿಗಳು ಪುರುಷರಿಗಿಂತ ಮೇಲುಗೈ ಸಾಧಿಸಿದ್ದಾರೆ. ಕೊಡಗಿನ ಗೌರಮ್ಮ ಪ್ರಶಸ್ತಿಯನ್ನು ಜಿಲ್ಲೆಯ 23 ಮಹಿಳಾ ಸಾಹಿತಿಗಳು ಸ್ವೀಕರಿಸಿರುವುದು ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಮಹಿಳೆಯರ ಕೊಡುಗೆಯಾಗಿದೆ ಎಂ ಎಂದು ಕಡಗದಳು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಡೈಸಿ ಸಿ.ಸಿ. ಹೇಳಿದರು.ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕಡಗದಳು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ 2026-27 ನೇ ಸಾಲಿನ ‘ದಿ.ಮಂಡೆಪಂಡ ಅಕ್ಕಮ್ಮ ಗಣಪತಿ ದತ್ತಿ ಉಪನ್ಯಾಸ’ ಹಾಗೂ ‘ದಿ. ದಂಬೆಕೋಡಿ ಚಿಣ್ಣಪ್ಪ ದತ್ತಿ ಪುರಸ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಡ್ಲೆರ ತುಳಸಿ ಮೋಹನ್ ಅಧ್ಯಕ್ಷತೆ ವಹಿಸಿ ‘ಮಾಧ್ಯಮ ಮತ್ತು ಅಂತರ್ಜಾಲದ ಬಳಕೆ’ ಕುರಿತು ಮಾತನಾಡಿ, ಮಾಧ್ಯಮ ಮತ್ತು ಅಂತರ್ಜಾಲ ದೈನಂದಿನ ಜೀವನದಲ್ಲಿ ಮಾಹಿತಿ ಪಡೆಯಲು ಕಲಿಯಲು ಮತ್ತು ಸಂಪರ್ಕ ಸಾಧಿಸಲು ಅತ್ಯಂತ ಮುಖ್ಯವಾದ ಸಾಧನೆಗಳಾಗಿವೆ ಎಂದರು. 2025- 26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಮಡಿಕೇರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕಡಗದಾಳು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷಿತಾ ಬಿ ಎಸ್ ಇವರಿಗೆ ದಿ. ದಂಬೆಕೋಡಿ ಚಿನ್ನಪ್ಪ ದತ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ದತ್ತಿ ದಾನಿಗಳಾದ ದಂಬೆಕೋಡಿ ಲೀಲಾ ಚಿಣ್ಣಪ್ಪ ಮೃಣಾಲಿ ಚಿಣ್ಣಪ್ಪ, ಸಾಹಿತಿ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಗೌರಮ್ಮ ಮಾಧಮಯ್ಯ, ಗೌರವ ಕಾರ್ಯದರ್ಶಿ ಗುಡ್ಡೆರ ಲಕ್ಷು ಸೋಮಣ್ಣ ಮತ್ತಿತರರಿದ್ದರು.ಕೊರವಂಡ ತಿಮ್ಮಯ್ಯ ಮತ್ತು ರೇವತಿ ದಂಪತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿ ಸ್ಥಾಪನೆ ಮಾಡಲು 2.50 ಲಕ್ಷ ರು. ಚೆಕ್ ನೀಡಿದರು. ವಿದ್ಯಾರ್ಥಿಗಳಾದ ಶಿಯಾ ಮತ್ತು ತಂಡದವರು ಪ್ರಾರ್ಥಿಸಿದರು. ಶಿಕ್ಷಕಿ ಭಾರತಿ ಸ್ವಾಗತಿಸಿದರು. ವಿಮಲಾ ಪಿ.ಎಸ್.ನಿರೂಪಿಸಿದರು. ಪವಿತ್ರ ಕೆಎಸ್ ವಂದಿಸಿದರು.