ರಾಯಚೂರು: ನಾಟಕ ಎಂಬುವುದು ದೃಶ್ಯ ಮಾಧ್ಯಮವಾಗಿದೆ. ಎಲ್ಲಾ ಕಲೆಗಳಲ್ಲಿ ರಂಗಕಲೆ ವಿಷಯ ವಿಶಿಷ್ಟವಾಗಿದೆ. ಜನರ ಮನ ಮುಟ್ಟುವ ರೀತಿ ನಾಟಕಗಳು ಕೆಲಸ ಮಾಡುತ್ತವೆ ಎಂದು ಹಿರಿಯ ರಂಗಕರ್ಮಿ ವಿ.ಎನ್.ಅಕ್ಕಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸ್ವಪ್ನ ದರ್ಶನಿ ನಾಟಕ ಹೊಸ ಅಲೆಯ ಹೊಸ ತಲೆಮಾರಿನ ನಾಟಕವಾಗಿದ್ದು, ಅಕ್ಷರಗಳು ನಿಂತ ನೀರಾಗದೆ ಹರಿಯುವ ನೀರಾದಾಗ ಅದಕ್ಕೆ ಒಂದು ಅರ್ಥ ಬರುತ್ತದೆ. 26 ಪಾತ್ರಧಾರಿಗಳನ್ನೊಳಂಗೊಂಡ ಈ ನಾಟಕ ತುಂಬಾ ಅರ್ಥಪೂರ್ಣವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ಕೃತಿ ಬಿಡುಗಡೆಗೊಳಿಸಿದ ಹಿರಿಯ ಬಂಡಾಯ ಸಾಹಿತಿ ಭಗತರಾಜ ನಿಜಾಮಕಾರಿ ಮಾತನಾಡಿ, ಹೊಸಮನಿ ಪ್ರಕಾಶನದ ಬಶೀರ್ ಅಹ್ಮದ್ ಹೊಸಮನಿಯವರು ಕನ್ನಡವೇ ತಮ್ಮ ಉಸಿರಾಗಿಸಿಕೊಂಡು ಪ್ರತಿ ಹೆಜ್ಜೆ ಹೆಚ್ಚು ಹೆಚ್ಚು ಕನ್ನಡವನ್ನು ನೆನೆಯುತ್ತಾ ತಮ್ಮ ಮನೆಗೂ ಕನ್ನಡ ಡಿಂಡಿಮ ನಿಲಯ ಎಂದು ಹೆಸರಿಟ್ಟು ಅವರು ಉದ್ಯೋಗದಲ್ಲಿದ್ದಾಗ ಸಹ ಕನ್ನಡ ಅಭಿಮಾನವನ್ನು ಹೊಂದಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.ಮುಖ್ಯ ಅತಿಥಿಗಳಾದ ಡಾ.ಅಲ್ಲಮಪ್ರಭು ಅಂಬಿ ಮಾತನಾಡಿ, ಕನ್ನಡವೇ ಮನ ಕನ್ನಡವೇ ಆದಾಗ ಮನೆ ಮನೆಯಲ್ಲಿ ಊರಿನಲ್ಲಿ, ತಾಲೂಕಿನಲ್ಲಿ, ಜಿಲ್ಲೆಯಲ್ಲಿ, ನಾಡಿನಲ್ಲಿ ಹಾಗೆ ಜಗತ್ತಿನಲ್ಲಿ ಕನ್ನಡವನ್ನು ಬಳಸಲು ಸಾಧ್ಯ ಮೊದಲು ನಾವೆಲ್ಲರೂ ಕನ್ನಡವನ್ನು ಗೌರವಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯ ಬಯಲಾಟ ಕಲಾವಿದರಾದ ರಾಮಣ್ಣ ಗುರುಪಾದ ಹಾಗೂ ಸಿನಿಮಾ ಕಲಾವಿದರಾದ ಬಸವರಾಜ್ ಮತ್ತು ಕವಿಗಳಾದ ತಿಮ್ಮಯ್ಯ ರಾಯಚೂರ್ ಹಾಗೂ ಬಾಗಲಕೋಟೆಯ ಹಿರಿಯ ಶಿಕ್ಷಕ ಶಕುಂತಲಾ ಸುರೇಶ ಸಾಲ ಮಂಟಪ ಗೂಡೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಬೂದೆಪ್ಪ ಮಾತನಾಡಿ, ಓದಿನೊಂದಿಗೆ ಕಲೆಯ ಆಸಕ್ತಿಯನ್ನು ಹೊಂದಿದರೆ, ಸಾಕಷ್ಟು ಜ್ಞಾನ ಪಡೆಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.