ಶಿರಸಿ: ಧರ್ಮಸ್ಥಳದಂತಹ ಶ್ರೇಷ್ಠ ಕ್ಷೇತ್ರದ ಘನತೆಗೆ ಕುಂದು ತರುವ ಇಂತಹ ನಡೆಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ರಾಜ್ಯ ಸರ್ಕಾರವು ಈ ವಿಷಯದ ಕುರಿತು ತಕ್ಷಣವೇ ಪಾರದರ್ಶಕ ಮತ್ತು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.
ನಾಮಿಕ ವ್ಯಕ್ತಿಯು ಮೊದಲು ೧೩ ಸ್ಥಳ ಹೇಳಿದ್ದು, ನಂತರ ೧೮ ಸ್ಥಳ ಎಂದು ಹೇಳುತ್ತಿದ್ದಾನೆ. ದಿನದಿಂದ ದಿನಕ್ಕೆ ತನಿಖೆಯ ದಿಕ್ಕು ತಪ್ಪುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಹಿಂದೂಗಳ, ಭಾರತೀಯರ ಶ್ರದ್ಧಾ-ಭಕ್ತಿ ಕೇಂದ್ರವಾಗಿರುವ ಧರ್ಮಸ್ಥಳದ ಹೆಸರಿಗೆ ಅಗೌರವ, ಕುಂದುಂಟು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಇದನ್ನು ಖಂಡಿಸಬೇಕು ಎಂದು ಕರೆ ನೀಡಿದರು.
ಧರ್ಮಸ್ಥಳವು ಕೇವಲ ಒಂದು ಧಾರ್ಮಿಕ ಕೇಂದ್ರ ಮಾತ್ರವಲ್ಲ. ಅದು ಕೋಟ್ಯಂತರ ಭಕ್ತರಿಗೆ ಶ್ರದ್ಧಾ-ಭಕ್ತಿಯ ಕೇಂದ್ರವಾಗಿದೆ. ಧಾರ್ಮಿಕ ಚಟುವಟಿಕೆಗಳ ಜತೆಗೆ ಕ್ಷೇತ್ರವು ನೂರಾರು ಜನೋಪಕಾರಿ ಯೋಜನೆಗಳನ್ನು ಕೈಗೊಂಡಿದೆ. ಸಾವಿರಾರು ದೇವಸ್ಥಾನಗಳ ಜೀರ್ಣೋದ್ಧಾರ, ಕೆರೆಗಳ ಪುನಶ್ಚೇತನ, ವ್ಯಸನಮುಕ್ತಿ ಅಭಿಯಾನ ಹಾಗೂ ಸ್ವಸಹಾಯ ಸಂಘಗಳ ಸ್ಥಾಪನೆ ಮೂಲಕ ಸಮಾಜಕ್ಕೆ ಬಹು ದೊಡ್ಡ ಕೊಡುಗೆಗಳನ್ನು ನೀಡಿದೆ ಎಂದು ಹೇಳಿದರು.ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಜನೋಪಕಾರಿ ಕೆಲಸಗಳು ಎಡಪಂಥೀಯ ವಿಚಾರಧಾರೆಯುಳ್ಳವರ ನಿದ್ದೆಗೆಡಿಸಿದೆ. ಸುಖಾಸುಮ್ಮನೆ ಆಪಾದನೆ-ಆರೋಪ ಮಾಡುತ್ತಿದ್ದಾರೆ. ಹಿಂದೂಗಳಾದ ನಾವೆಲ್ಲರೂ ಇದನ್ನು ಖಂಡಿಸಬೇಕು. ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ
ಅನಾಮಧೆಯ ವ್ಯಕ್ಯಿ ಯಾರು? ಆದರೆ ಆತನ ಹಿನ್ನೆಲೆ, ಈ ೧೫ ವರ್ಷ ಆತ ಎಲ್ಲಿದ್ದ, ಏನು ಮಾಡುತ್ತಿದ್ದ ಆತನಿಗೆ ನಾಟಕ ತಯಾರು ಮಾಡಿಕೊಡುತ್ತಿರುವವರು ಯಾರು? ಅದರಂತೆ ಪಾತ್ರಧಾರಿಗಳಾಗಿ ಹಿಂದೆ, ಮುಂದೆ ವರ್ತಿಸುತ್ತಿರುವವರು ಯಾರು? ಇದರ ಬಗ್ಗೆಯೂ ಸೂಕ್ತ ಮಾಹಿತಿಯನ್ನು ರಾಜ್ಯ ಸರ್ಕಾರ, ಎಸ್‌ಐಟಿ ರಾಜ್ಯದ ಜನತೆಗೆ ನೀಡಬೇಕು. ಅನಾಮಿಕ ಹೆಸರಿನಲ್ಲಿ ರಾಜ್ಯದ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಸರಿಯಲ್ಲ. ಇದೆಲ್ಲವೂ ಬಹಿರಂಗಗೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.