ಯೂರಿಯಾ ಬೇಕಾಬಿಟ್ಟಿ ಬಳಕೆ: ಭೂಮಿ ಆರೋಗ್ಯ ಕಳಪೆ

KannadaprabhaNewsNetwork |  
Published : Aug 11, 2025, 12:35 AM IST
೧೦ಎಸ್.ಆರ್.ಎಸ್೧ (ತಾಲೂಕಿನ ಪೂರ್ವಭಾಗವಾದ ಬನವಾಸಿಯಲ್ಲಿ ನಾಟಿ ಕಾರ್ಯ ನಡೆಸುತ್ತಿರುವುದು.) | Kannada Prabha

ಸಾರಾಂಶ

ಕೃಷಿಯಲ್ಲಿ ಬೇಕಾಬಿಟ್ಟಿ ಯೂರಿಯಾ ಬಳಕೆ ಮಣ್ಣಿನ ಆರೋಗ್ಯ ಹದಗೆಡಲು ಪ್ರಮುಖ ಕಾರಣವಾಗಿದೆ.

ಪ್ರವೀಣ ಹೆಗಡೆ ಕರ್ಜಗಿ

ಶಿರಸಿ: ಕೃಷಿಯಲ್ಲಿ ಬೇಕಾಬಿಟ್ಟಿ ಯೂರಿಯಾ ಬಳಕೆ ಮಣ್ಣಿನ ಆರೋಗ್ಯ ಹದಗೆಡಲು ಪ್ರಮುಖ ಕಾರಣವಾಗಿದೆ. ಸಮತೋಲನ ಪೋಷಕಾಂಶ ಬಳಕೆಯಿಂದ ಮಾತ್ರ ಉತ್ತಮ ಬೆಳೆ, ಒಳ್ಳೆಯ ಇಳುವರಿ ಸಾಧ್ಯ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು ರೈತರಿಗೆ ಅರಿವು ಮೂಡಿಸಲು ಮುಂದಾಗಿದೆ.

ಕಳೆದ ಹಲವಾರು ವರ್ಷಗಳಿಂದ ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗಿ ಸರಿಯಾದ ಪ್ರಮಾಣದಲ್ಲಿ ಪೂರೈಕೆಯ ಸಮಸ್ಯೆಯಾಗಿತ್ತು. ರೈತರು ಯಥೇಚ್ಛವಾಗಿ ಯೂರಿಯಾ ಬಳಕೆಯಿಂದ ಅಭಾವ ಉಂಟಾಗಿತ್ತು. ತಾಲೂಕಿನಲ್ಲಿ ೨೫೦೦ ಟನ್ ಯೂರಿಯಾ ಗೊಬ್ಬರ ಬೇಡಿಕೆಯಿದ್ದು, ಈಗಾಗಲೇ ೧೨೦೦ ಟನ್ ವಿತರಣೆಯಾಗಿದೆ. ಪ್ರತಿ ವರ್ಷ ತಾಲೂಕಿನ ಪೂರ್ವ ಭಾಗದ ೫ ಗ್ರಾಪಂಗಳಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಬೇಡಿಕೆ ಇರುತ್ತದೆ. ಆ ಪ್ರದೇಶದಲ್ಲಿ ಯೂರಿಯಾ ಬಳಕೆಯಿಂದ ಮಾನವನ ಆರೋಗ್ಯದ ಮಣ್ಣು ಮತ್ತು ಪರಿಸರದ ಮೇಲೆ ಹಾನಿಕಾರ ಎಂದು ಕೃಷಿ ಇಲಾಖೆಯು ಜಾಗೃತಿ ಮೂಡಿಸಲು ಆರಂಭಿಸಿದೆ.

ನಿರಂತರ ಹಾಗೂ ಅತಿಯಾದ ಯೂರಿಯಾ ಬಳಕೆ ಮಣ್ಣಿನ ಆರೋಗ್ಯ ಕಡಿಮೆ ಮಾಡಿ ಅದನ್ನು ಆಮ್ಲೀಯವಾಗಿಸುತ್ತದೆ. ಆಮ್ಲಿಯ ಮಣ್ಣುಗಳಲ್ಲಿ ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳ ಅಸಮತೋಲನ ಮತ್ತು ಸಸ್ಯದ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಯೂರಿಯಾ ಭೂಮಿಯ ಅಂತರ್ಜಲಕ್ಕೆ ಹೋಗಿ ಕುಡಿಯುವ ನೀರಿನ ಮೂಲಗಳನ್ನು ಮಾಲಿನ್ಯಗೊಳಿಸಬಹುದು. ನದಿ-ಕೆರೆಗಳಿಗೆ ಹೋಗಿ ಯೂಟ್ರಿಫಿಕೇಶನ್ ಉಂಟು ಮಾಡಬಹುದು. ನೈಟ್ರಸ್ ಶಕ್ತಿಶಾಲಿ ಹಸಿರುಮನೆ ಅನಿಲ ಪರಿವರ್ತನೆಯಾಗಿ ಹವಾಮಾನ ಬದಲಾವಣೆಗೆ ಕಾರಣವಾಗಬಹುದು. ಅತಿಯಾದ ಸಾರಜನಕ ಬಳಕೆ ಸಸ್ಯಗಳನ್ನು ಕೆಲವು ಕೀಟಗಳು ಮತ್ತು ರೋಗಗಳಿಗೆ ಹೆಚ್ಚು ಪೂರಕವಾಗುತ್ತದೆ.

ಸಮತೋಲನ ಗೊಬ್ಬರ ಹೆಚ್ಚು ಬಳಸಿ:

ಸಮತೋಲನ ರಸಗೊಬ್ಬರ ಬಳಕೆ ಅತ್ಯಂತ ಅಗತ್ಯ. ಸಾರಜನಕದ ಜತೆ ಫಾಸ್ಪರಸ್ ಮತ್ತು ಪೋಟ್ಯಾಸಿಯಂ ಮುಂತಾದ ಮುಖ್ಯ ಪೋಷಕಾಂಶಗಳನ್ನು ಸಹ ಒಳಗೊಂಡಿರಬೇಕು. ಹೆಚ್ಚು ಹಸಿರೆಲೆ, ಎರೆಹುಳು, ಸಾವಯವ ದ್ರವ್ಯಗಳು ಮತ್ತು ಜೈವಿಕ ಗೊಬ್ಬರಗಳಂತಹ ಪರ್ಯಾಯ ಸಾರಜನಕ ಮೂಲಗಳನ್ನು ಬಳಸುವುದರಿಂದ ಯೂರಿಯಾ ಮೇಲೆ ಅವಲಂಬನೆಯು ಕಡಿಮೆಯಾಗಿ ಮಣ್ಣಿನ ಆರೋಗ್ಯವು ಸುಧಾರಿಸುತ್ತದೆ.

ಬೆಳೆಗಳಿಗೆ ಸಾರಜನಕ, ರಂಜಕ ಹಾಗೂ ಪೋಟ್ಯಾಶ್ ಬಳಕೆ ಮಾಡಬೇಕು. ಸಾರಜನಕರಿಂದ ಸಸ್ಯ ಬೆಳವಣಿಗೆ, ರಂಜಕದಿಂದ ಬೇರಿನ ಬೆಳವಣಿಗೆ, ಪೋಷ್ಯಾಶ್‌ನಿಂದ ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮೂರು ಪೋಷಕಾಂಶಗಳು ಸಮತೋಲದಲ್ಲಿರುವ ಗೊಬ್ಬರ ಬಳಕೆ ಮಾಡುವುದರಿಂದ ಉತ್ತಮ ಬೆಳೆ ಹಾಗೂ ಮಣ್ಣಿನ ಗುಣಮಟ್ಟವೂ ಉತ್ತಮವಾಗಿರುತ್ತದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ತಿಳಿಸಿದರು.

ಸಮತೋಲನ ಗೊಬ್ಬರ ಬಳಕೆಯಿಂದ ಸಸ್ಯಗಳಿಗೂ, ಮಣ್ಣಿಗೂ ಉತ್ತಮವಾಗಿದೆ. ಭತ್ತದ ನಾಟಿ ಕಾರ್ಯ ಆರಂಭಗೊಂಡಿರುವುದರಿಂದ ಗದ್ದೆಗಳಿಗೆ ತೆರಳಿ, ಯೂರಿಯಾದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ ನಾಯ್ಕ.

ನೈಸರ್ಗಿಕ ಕೃಷಿ ಯೋಜನೆ:

ಮಣ್ಣಿನ ಗುಣಮಟ್ಟ ಸುಧಾರಣೆ ಜತೆ ರಾಸಾಯನಿಕ ಮುಕ್ತ ಆಹಾರ ಉತ್ಪಾದಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ರಾಷ್ಟ್ರೀಯ ನೈಸರ್ಗಿಕ ಕೃಷಿ ಯೋಜನೆಯು ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಗೋ ಆಧಾರಿತ ಗೊಬ್ಬರ ಬಳಕೆ, ರಾಸಾಯನಿಕ ಮುಕ್ತ, ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ೪೭ ಕ್ಲಸ್ಟರ್ ಗುರುತಿಸಿ, ೨೩೫೦ ಹೆಕ್ಟೇರ್ ಪ್ರದೇಶ ಆಯ್ಕೆ ಮಾಡಲಾಗಿದೆ. ಪ್ರತಿ ಕ್ಲಸ್ಟರ್‌ನಿಂದ ೧೨೫ ರೈತರನ್ನು ಆಯ್ಕೆಗೊಳಿಸಲಾಗಿದೆ. ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವವರಿಗೆ ಪ್ರತಿ ಎಕರೆಗೆ ಪ್ರತಿ ವರ್ಷಕ್ಕೆ ₹೪ ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ