ಡಿಸೆಂಬರ್‌ ಐದರ ಸಮಾವೇಶವನ್ನು ಎಐಸಿಸಿಯೇ ಒಪ್ಪಿಕೊಂಡಿದೆ : ಮಾಜಿ ಸಚಿವ ಬಿ. ಶಿವರಾಮ್

KannadaprabhaNewsNetwork | Updated : Nov 30 2024, 01:38 PM IST

ಸಾರಾಂಶ

ಪಕ್ಷದ ಸಂಘಟನೆ ದೃಷ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಡಿಸೆಂಬರ್‌ 5ರಂದು ನಡೆಸುತ್ತಿರುವ ಸಮಾವೇಶ ಸರ್ವ ಸಮ್ಮತದ್ದಾಗಿದೆ. ಆದರೆ, ಯಾರೋ ಕೆಲವರು ಎಐಸಿಸಿಗೆ ಪತ್ರ ಬರೆದಿದ್ದಾರೆ. ಆದರೆ, ಎಐಸಿಸಿ ಕೂಡ ಸಮಾವೇಶವನ್ನು ಒಪ್ಪಿಕೊಂಡಿದೆ.  

  ಹಾಸನ : ಪಕ್ಷದ ಸಂಘಟನೆ ದೃಷ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಡಿಸೆಂಬರ್‌ 5ರಂದು ನಡೆಸುತ್ತಿರುವ ಸಮಾವೇಶ ಸರ್ವ ಸಮ್ಮತದ್ದಾಗಿದೆ. ಆದರೆ, ಯಾರೋ ಕೆಲವರು ಎಐಸಿಸಿಗೆ ಪತ್ರ ಬರೆದಿದ್ದಾರೆ. ಆದರೆ, ಎಐಸಿಸಿ ಕೂಡ ಸಮಾವೇಶವನ್ನು ಒಪ್ಪಿಕೊಂಡಿದೆ. ಎಐಸಿಸಿಗೆ ಪತ್ರ ಹೋದ ಮೇಲೂ ಸಮಾವೇಶ ನಡೆಯುತ್ತಿದೆ ಎಂದರೆ ಎಐಸಿಸಿ ದೃಷ್ಟಿಯಿಂದಲೂ ಸಮಾವೇಶ ಸರಿ ಇದೆ ಎಂದು ಅರ್ಥ. ಭಿನ್ನಮತ ಮಾಡಲು ಈ ರೀತಿ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ. ಶಿವರಾಮ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಯಾವುದೇ ವ್ಯಕ್ತಿ ನಿರ್ದಿಷ್ಟವಾಗಿ ನಾನು ಪತ್ರ ಕಳುಹಿಸಿದ್ದೇನೆ ಎನ್ನುವುದು ಇಲ್ಲ. ವ್ಯಕ್ತಿಯ ಶಕ್ತಿ ನೋಡದೆ ಟೀಕೆ, ಟಿಪ್ಪಣಿ ಮಾಡೋದು ಅಥವಾ ಪ್ರಶಂಸೆ ಮಾಡಲ್ಲ. ಭಿನ್ನಾಭಿಪ್ರಾಯ ಒಬ್ಬರಿಂದ ಒಬ್ಬರಿಗೆ ಇದ್ದೇ ಇರುತ್ತದೆ. ಅವರ ಚಿಂತನೆಗೆ ತಕ್ಕಂತೆ ಬರೆದಿರುತ್ತಾರೆ, ಮಾತನಾಡಿರುತ್ತಾರೆ. ಎಐಸಿಸಿ ಅಧ್ಯಕ್ಷರಿಗೆ ಫೋನ್‌ನಲ್ಲೇ ಮಾತನಾಡಬಹುದು. ಎಐಸಿಸಿಗೆ ಪತ್ರ ಹೋದ ಮೇಲೂ ಸಮಾವೇಶ ನಡೆಯುತ್ತಿದೆ ಎಂದರೆ ಎಐಸಿಸಿ ದೃಷ್ಟಿಯಿಂದಲೂ ಸಮಾವೇಶ ಸರಿ ಇದೆ ಎಂದು ಅರ್ಥ ಎಂದರು.

ಪತ್ರಕ್ಕೆ ಮನ್ನಣೆ ಕೊಡುವ ಅಗತ್ಯವಿಲ್ಲ: ಬೇರೆ ಪಕ್ಷದವರು ಪತ್ರ ಬರೆದಿದ್ದರೆ, ಅದರಲ್ಲಿ ಯಾರ ಹೆಸರಿಲ್ಲ ಅಂದರೆ ಅದು ಫೇಕ್ ಲೇಟರ್. ಅವನು ಧೈರ್ಯಗಾರ, ಅಭಿಮಾನಿ ಆಗಿದ್ದರೆ ನೇರವಾಗಿ ಹೇಳಬೇಕಿತ್ತು ಎಂದರು.

 ಪತ್ರ ಬರೆದವನಿಗೆ ವ್ಯಕ್ತಿ, ಪಕ್ಷದ ಬಗ್ಗೆ ಮಾತನಾಡುವ ಧೈರ್ಯ ಇಲ್ಲ. ಅದಕ್ಕೆ ಒಂದು ಫೇಕ್ ಲೆಟರ್ ರೆಡಿ ಮಾಡಿ ಕಳುಸ್ದಾ, ಗೊಂದಲ ಸೃಷ್ಟಿ ಮಾಡ್ದಾ. ಸರ್ಕಾರದ ಒಂದು ಭಾಗವಾಗಿ ನಾವು ಅವರ ಜೊತೆ ಇರ್ತಿವಿ. ಎಲ್ಲರೂ ಒಗ್ಗಟ್ಟಾಗಿ ಸಮಾವೇಶ ಮಾಡೋಣ, ಇಡೀ ರಾಜ್ಯಕ್ಕೆ ಒಂದು ಸಂದೇಶ ಹೋಗಲಿ ಎಂದು ಹೇಳಿದ್ದಾರೆ.

 ಎ.ಐ.ಸಿ.ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆಯಲಾಗಿದೆ ಎಂಬುದನ್ನು ಮಾಧ್ಯಮದ ಮೂಲಕ ಗಮನಿಸಿದ್ದೇನೆ. ಆದರೆ ಆ ಪತ್ರದಲ್ಲಿ ವ್ಯಕ್ತಿ ಯಾರು? ಆತನ ಶಕ್ತಿ ಏನು? ಎಂಬುದು ಗೊತ್ತಿಲ್ಲ. ಆದುದರಿಂದ ಆ ಪತ್ರಕ್ಕೆ ಅಷ್ಟೊಂದು ಮನ್ನಣೆ ಕೊಡುವ ಅಗತ್ಯವಿಲ್ಲ. ಈಗಾಗಲೇ ಪತ್ರ ಹೈಕಮಾಂಡ್ ಕೈ ಸೇರಿದ್ದು ಆದಾಗ್ಯೂ ಕಾರ್ಯಕ್ರಮ ನಡೆಸಲು ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದಾರೆ ಎಂದರೆ ಸಮಾವೇಶಕ್ಕೆ ಹೈಕಮಾಂಡ್ ಒಪ್ಪಿಗೆ ಇದೆ ಎಂದರ್ಥ. 

ಅಪರಿಚಿತ ವ್ಯಕ್ತಿ ಬರೆದಿರುವ ಪತ್ರಕ್ಕೆ ಅರ್ಥವಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಡಿಸೆಂಬರ್ 5ರಂದು ಹಾಸನ ನಗರದ ಎಸ್.ಎಂ.ಕೃಷ್ಣನಗರದಲ್ಲಿ ಜರುಗುತ್ತಿದೆ. ಒಂದು ಪಕ್ಷಕ್ಕೆ ಶಕ್ತಿ ತುಂಬಲು ಸಮಾವೇಶ. ಉಸ್ತುವಾರಿ ಸಚಿವರು ಈಗಾಗಲೇ ಹೇಳಿದ್ದಾರೆ. ಸಮಾವೇಶದ ಮೂಲಕ ರಾಜ್ಯಕ್ಕೆ ನಮ್ಮ ಮುಖ್ಯಮಂತ್ರಿಗಳು ಒಂದು ಸಂದೇಶ ಕೊಡಲಿದ್ದಾರೆ ಎಂದು ಹೇಳಿದರು. 

ಬಿಕ್ಕೋಡಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಇದ್ದು, ಇಲ್ಲಿ ಮಕ್ಕಳು ಶಿಕ್ಷಣಕ್ಕಿಂತ ಹೆಚ್ಚು ಬೀಡಿ ಸೇದುವುದು, ಗುಟ್ಕಾ, ಮದ್ಯ ಸೇವನೆ ಸೇರಿದಂತೆ ಈ ರೀತಿಯ ಅನೈತಿಕ ಚಟುವಟಿಕೆಗಳಿಗೆ ಬಲಿಯಾಗಿರುವುದನ್ನು ಪೋಷಕರೇ ಬಹಿರಂಗಗೊಳಿಸಿದ್ದಾರೆ. ಇದರ ಜೊತೆಗೆ ಆಡಿಯೋ ರಿಲೀಜ್ ಮಾಡಿದ್ದಾರೆ. ಆದಾಗ್ಯೂ ಈ ಬಗ್ಗೆ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದ ಮಕ್ಕಳ ಭವಿಷ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಿ ಶಿವರಾಂ ಆಗ್ರಹಿಸಿದರು. 

60 ಮಕ್ಕಳು ಇರಬಹುದಾದ ಈ ಹಾಸ್ಟೆಲ್‌ನಲ್ಲಿ ಕೇವಲ 15 ಮಕ್ಕಳು ಇದ್ದಾರೆ. ಅವರು ಕೂಡ ಸರಿಯಾಗಿ ಬರುತ್ತಿಲ್ಲ. ನಾನು ಸಮಸ್ಯೆ ತಿಳಿದ ಬಳಿಕ ತಾಲೂಕು ಪಂಚಾಯಿತಿ ಕೆಡಿಪಿ ಸದಸ್ಯರ ಮೂಲಕ ಎಲ್ಲಾ ಹಾಸ್ಟೆಲ್‌ಗಳಲ್ಲಿ ತನಿಖೆ ನಡೆಸಿದ್ದೇನೆ. ಮಕ್ಕಳು ಕಡಿಮೆ ಇದ್ದಾರೆ, ಪೋಷಕರು ತಮ್ಮ ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸುತ್ತಿಲ್ಲ ಎಂದರು. ಈ ಅವ್ಯವಸ್ಥೆ ಬಗ್ಗೆ ನಾನು ಸರ್ಕಾರದ ಗಮನಕ್ಕೆ ತಂದಿದ್ದೇನೆ. 

ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಗಮನಕ್ಕೆ ತಂದಿದ್ದೇನೆ. ಅಲ್ಲದೆ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗದಿಂದ ಮಾತ್ರ ಒಂದು ಉತ್ತರ ಬಂದಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಆದರೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಂದ ಇಲ್ಲಿವರೆಗೆ ಒಂದು ಬಾರಿಯೂ ಉತ್ತರ ಬಂದಿಲ್ಲ. ಇವರು ಎಷ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡ್ತಿದಾರೆ ಎಂಬುದಕ್ಕೆ ಇದು ಉದಾಹರಣೆ ಎಂದು ಅಸಮಾಧಾನ ಹೊರಹಾಕಿದರು.

ನಮ್ಮ ಸಚಿವರು, ನಮ ಸರ್ಕಾರ, ನಮ್ಮ ಆಪ್ತರ ವಿರುದ್ಧ ಮಾತನಾಡುವ ಅವಶ್ಯಕತೆ ಇರಲಿಲ್ಲ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಈ ಕೆಲಸ ಮಾಡುತ್ತಿದ್ದೇನೆ. ಬೇಲೂರು ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ೧೩ ಹಾಸ್ಟೆಲ್‌ಗಳಿವೆ. ೯೬೪ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆದರೆ ಹಾಜರಾತಿ ತೀರಾ ಕಡಿಮೆ ಇದೆ. ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

 ಇದರಿಂದ ಮಕ್ಕಳ ಭವಿಷ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ತಕ್ಷಣವೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಯೋಮೆಟ್ರಿಕ್ ಕೊಟ್ಟು 10 ವರ್ಷವಾದರೂ ಸಮರ್ಪಕವಾಗಿ ಅನುಷ್ಟಾನಗೊಳಿಸಿಲ್ಲ. ಬಯೋ ಮೆಟ್ರಿಕ್ ನಲ್ಲಿ ಲೋಪ ಎಸಗಿದ ಹಿನ್ನಲೆಯಲ್ಲಿ ಯಾದಗಿರಿ ಹಾಗೂ ಹುಣಸೂರಿನಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇಂತಹ ಕೆಲಸ ಬೇಲೂರು ತಾಲೂಕಿನ ಬಿಕ್ಕೋಡಿನಲ್ಲೂ ಆಗಬೇಕು. ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ಕೊಟ್ಟಿರುವ ಸೌಲಭ್ಯ ಸಮರ್ಪಕವಾಗಿ ಅನುಷ್ಠಾನ ಬರುತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.

Share this article