- ಗುಬ್ಬಿಗಾ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸ್ತ್ರೀ ಶಕ್ತಿ ಸಂಘಗಳಿಗೆ ಆರ್ಥಿಕ ಸ್ವಾವಲಂಬನೆ ನೀಡಬೇಕು ಎಂಬುದೇ ಸಂಜೀವಿನಿ ಒಕ್ಕೂಟದ ಮುಖ್ಯ ಉದ್ದೇಶವಾಗಿದೆ ಎಂದು ಸಂಜೀವಿನಿ ಒಕ್ಕೂಟದ ಕಾರ್ಯಕ್ರಮ ವ್ಯವಸ್ಥಾಪಕ ಸುಬ್ರಮಣ್ಯ ತಿಳಿಸಿದರು.
ಮಂಗಳವಾರ ಗುಬ್ಬಿಗಾ ಗಣಪತಿ ಪೆಂಡಾಲ್ ನಲ್ಲಿ ಗುಬ್ಬಿಗಾ ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಪ್ರತಿ ಗ್ರಾಪಂಗೆ ಒಂದರಂತೆ ತಾಲೂಕಿನಲ್ಲಿ 14 ಸಂಜೀವಿನಿ ಒಕ್ಕೂಟಗಳಿದ್ದು 13 ಒಕ್ಕೂಟಗಳ 2024-25 ನೇ ಸಾಲಿನ ವಾರ್ಷಿಕ ಸಭೆ ಮುಗಿದಿದೆ. ಇದು 14 ನೇ ಒಕ್ಕೂಟದ ಸಭೆ. ಸರ್ಕಾರ ಪ್ರತಿ ವರ್ಷ ಸಂಜೀವಿನಿ ಒಕ್ಕೂಟಗಳಿಗೆ ಲಕ್ಷಾಂತರ ರು. ಬಿಡುಗಡೆ ಮಾಡುತ್ತದೆ. ಈ ಮಾಹಿತಿಯನ್ನು ವಾರ್ಷಿಕ ಸಭೆಯಲ್ಲಿ ಸದಸ್ಯರಿಗೆ ತಿಳಿಸುತ್ತೇವೆ. ಒಕ್ಕೂಟದ ಜಮಾ ಹಾಗೂ ಖರ್ಚು ಮಂಡನೆ ಮಾಡುತ್ತೇವೆ. ಪ್ರತಿ ತಿಂಗಳು ಮಾಸಿಕ ಸಭೆ ನಡೆಯಲಿದ್ದು ಪ್ರತಿ ಸದಸ್ಯರು ಮಾಸಿಕ ಸಭೆಗೆ ಬಂದರೆ ಹೆಚ್ಚು ಮಾಹಿತಿ ತಿಳಿಯಲಿದೆ. ಗುಬ್ಬಿಗಾ ಸಂಜೀವಿನಿ ಒಕ್ಕೂಟದಲ್ಲಿ 32 ಸ್ವಸಹಾಯ ಸಂಘಗಳಿವೆ. ಕಳೆದ ವರ್ಷಕ್ಕಿಂತ 2 ಸ್ವಸಹಾಯ ಸಂಘ ಜಾಸ್ತಿಯಾಗಿದೆ.ಗ್ರಾಪಂನ ಎಲ್ಲಾ ಮಹಿಳೆಯರು ಎನ್.ಆರ್.ಎಲ್.ಎಂ. ವ್ಯಾಪ್ತಿಗೆ ಬರಬೇಕು. ಪ್ರತಿಯೊಂದು ಒಕ್ಕೂಟದ ಸದಸ್ಯರ ಸಂಖ್ಯೆ ಜಾಸ್ತಿ ಮಾಡಬೇಕು.ಗುಬ್ಬಿಗಾ ಸಂಜೀವಿನಿ ಒಕ್ಕೂಟ ಮುಂದಿನ ಒಂದು ವರ್ಷದಲ್ಲಿ ಕನಿಷ್ಠ 50 ಸ್ವಸಹಾಯ ಗುಂಪುಗಳನ್ನು ಹೊಂದಿರಬೇಕು. ಸಂಜೀವಿನಿ ಒಕ್ಕೂವು 1966 ರ ಸಹಕಾರ ಕಾಯ್ದೆಯಂತೆ ನೋಂದಣಿಯಾಗಿದೆ. ಸಂಘದಲ್ಲಿ 5 ಪದಾಧಿಕಾರಿಗಳು ಇರುತ್ತಾರೆ ಎಂದರು. ಮುಖ್ಯ ಪುಸ್ತಕ ಬರಹಗಾರ ಸುಷ್ಮಾ ವರದಿ ಮಂಡಿಸಿದರು.ಸಭೆ ಅಧ್ಯಕ್ಷತೆಯನ್ನು ಗುಬ್ಬಿಗಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಧನಲಕ್ಷ್ಮಿ ವಹಿಸಿದ್ದರು. ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ನಾಗರತ್ನ ಉದ್ಘಾಟಿಸಿದರು.ಅತಿಥಿಗಳಾಗಿ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್,ಪಿಡಿಒ ಸೀಮಾ, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಶೈಲಾ, ಖಜಾಂಚಿ ಶ್ರೀದೇವಿ, ವಲಯ ಮೇಲ್ವೀಚಾರಕ ಚೇತನ್, ಕೃಷಿಯೇತರ ಅಧಿಕಾರಿ ವಿನೂತ, ಬಿಆರ್.ಪಿಇಪಿ ಕವನ, ತಾಲೂಕು ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷೆ ಶಿಬಿ ಮರಿಯಮ್ಮ, ಕೃಷಿ ಸಖಿ ಅರುಣಾಕ್ಷಿ, ಪಶು ಸಖಿ ರೆನಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಹರಿಣಾಕ್ಷಿ, ಹೇಮಾವತಿ, ಎಫ್.ಎಲ್.ಸಿ.ಆರ್.ಪಿ. ಅನಿತ, ಕೃಷಿ ಸಖಿ ಹರಿಣಾಕ್ಷಿ ಇದ್ದರು.
ಇದಕ್ಕೂ ಮೊದಲು ಮಾಸಿಕ ಸಂತೆಯನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಧನಲಕ್ಷ್ಮಿ ಉದ್ಘಾಟಿಸಿದರು. ಸಂತೆಯಲ್ಲಿ ಸ್ವಸಹಾಯ ಸಂಘದ ಸದಸ್ಯರೇ ತಯಾರಿಸಿದ ಅರಶಿನಪುಡಿ, ಹಿಟ್ಟು ಉಂಡೆ, ಹಾರ್ಪಿಕ್, ಫಿನಾಯಲ್, ಉಲ್ಲನ್ ಕಸೂತಿ, ಹೂವಿನ ಪಾಟ್ ಹಾಗೂ ಇತರ ವಸ್ತುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಗುಬ್ಬಿಗಾ ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ ನೇತೃತ್ವದಲ್ಲಿ ಪೌಷ್ಠಿಕ ಆಹಾರದ ಪ್ರದರ್ಶನ ಏರ್ಪಡಿಸಲಾಗಿತ್ತು.