ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಕಳೆದ 72 ವರ್ಷಗಳಿಂದ ಈ ಭಾಗದಲ್ಲಿ ರೈತರಿಗೆ ಮತ್ತು ಗ್ರಾಹಕರಿಗೆ ನಿರಂತರ ಆರ್ಥಿಕ ಅನುಕೂಲತೆಗಳನ್ನು ಒದಗಿಸುತ್ತ, ಸಂಘವು ಕೃಷಿಕರ ಮತ್ತು ಗ್ರಾಹಕರ ಒಳಿತನ್ನು ಬಯಸುತ್ತ ಬಂದಿದೆ. ಸಂಘ ನಿಮ್ಮದು, ಅದರ ಬೆಳವಣಿಗೆ ನಿಮ್ಮ ಕೈಯಲ್ಲಿದೆ ಎಂದು ಕೋಟೆಕಲ್ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.ತಾಲೂಕಿನ ಕೋಟೆಕಲ್ ಗ್ರಾಮದ ಹೊಳೆ ಹುಚ್ಚೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 15 ವರ್ಷಗಳ ಇಚೀಗೆ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲ ಒದಗಿಸಿ ಕೊಟ್ಟಿದೆ. ಗುಳೇದಗುಡ್ಡ-ಬಾದಾಮಿ ತಾಲೂಕುಗಳಲ್ಲಿಯೇ ಉತ್ತಮ ಕೃಷಿ ಸಹಕಾರಿ ಸಂಘವೆಂದು ಹೆಸರು ಪಡೆದ ಈ ಸಂಘವು ಕಳೆದ18-20 ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಹೊಂದಿದೆ. ರೈತರು ಹಾಗೂ ಗ್ರಾಹಕರಿಗೆ ಸಂಘವು ಹೆಚ್ಚಿನ ಆರ್ಥಿಕ ಸಹಾಯ ಒದಗಿಸುತ್ತ ಬಂದಿದೆ. ಕಳೆದ 15 ವರ್ಷಗಳಿಂದ ಶೇರುದಾರರಿಗೆ ಡಿವಿಡೆಂಡ್ ನೀಡುತ್ತಿದೆ ಎಂದರು. ರೈತರಿಗಾಗಿ ಅಂದಾಜು ₹7 ಕೋಟಿ ವೆಚ್ಚದಲ್ಲಿ ರೈತ ಖರೀದಿ, ಶೇಖರಣೆ ಹಾಗೂ ಮಾರಾಟ ಕೇಂದ್ರವನ್ನು ಸರ್ಕಾರದ ರಾಷ್ಟ್ರೀಯ ಕೃಷಿ ಮಿಷನ್ ಯೋಜನೆಯಡಿ ₹3.15 ಕೋಟಿ ಸಬ್ಸಿಡಿಯೊಂದಿಗೆ ನಿರ್ಮಿಸಲಾಗುತ್ತಿದೆ. ಅಲ್ಲದೇ ಗುಳೇದಗುಡ್ಡ ಪಟ್ಟಣದಲ್ಲಿ ನಬಾರ್ಡ್‌ದಿಂದ ಸಾಲ ಪಡೆದು ಮಾರಾಟ ಮಳಿಗೆ ನಿರ್ಮಿಸಲಾಗುತ್ತಿದೆ. ನೇಕಾರರಿಗಾಗಿ ಗುಳೇದಗುಡ್ಡ ಪಟ್ಟಣದಲ್ಲಿ ಕೈಮಗ್ಗ ಬಟ್ಟೆ ಉತ್ಪನ್ನ ಘಟಕವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. 2023-24ನೇ ಸಾಲಿನಲ್ಲಿ ಸಂಘ ₹70.91 ಲಕ್ಷ ಲಾಭ ಗಳಿಸಿದ್ದೂ ಇದಕ್ಕೆಲ್ಲ ನಿರ್ದೇಶಕ ಮಂಡಳಿಯ ಪರಿಶ್ರಮ, ಗ್ರಾಹಕರ ಸಹಕಾರ, ವಿಶ್ವಾಸ ಕಾರಣವಾಗಿದೆ. ಮುಂದಿನ ದಿನಮಾನಗಳಲ್ಲಿ ಸಂಘವು ಆರ್ಥಿಕ ಚಟುವಟಿಗಳ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕಳಕಳಿ ಹೊಂದಲಿದೆ. ರೈತರಿಗೆ ಶೇ.12 ಪ್ರತಿಶತ ಡಿವಿಡೆಂಡ್ ಕೊಡಲು ಸಂಘ ನಿರ್ಧರಿಸಿದೆ. ರೈತರು, ಗ್ರಾಹಕರು ಸಂಘವನ್ನು ಬೆಳೆಸಲು ಸಹಕರಿಸಬೇಕು ಮತ್ತು ಸಂಘದ ಸದುಪಯೋಗಪಡೆದುಕೊಳ್ಳಬೇಕು ಎಂದು ಕೋರಿದರು.ಹೊಳೆಹುಚ್ಚೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಕೋಟೆಕಲ್ ಕೃಷಿ ಪತ್ತಿನ ಸಹಕಾರಿ ಸಂಘವು ಕೃಷಿಕರ ಮತ್ತು ನೇಕಾರರ ಹಿತದೃಷ್ಟಿಯಿಂದ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಸಹಕಾರಿ ಕ್ಷೇತ್ರದಲ್ಲಿ ವಿಭಿನ್ನವಾದ ಬೆಳವಣಿಗೆಯತ್ತ ಸಾಗಿದೆ. ಸುತ್ತ-ಮುತ್ತಲಿನ ಕೃಷಿಪತ್ತಿನ ಸಹಕಾರಿ ಸಂಘಗಳಿಗೆ ಇದು ಮಾದರಿಯಾಗಿದೆ. ರೈತರು ಬೆಳೆದ ಧಾನ್ಯ ಸಂಗ್ರಹಣೆಗೆ ನಿರ್ಮಿಸಿದ ಗೋದಾಮು, ಮಾರಾಟ ಮಳಿಗೆಗಳ ನಿರ್ಮಾಣ, ನೇಕಾರ ಗ್ರಾಹಕರಿಗಾಗಿ ಬಟ್ಟೆ ತಯಾರಿಕಾ ಘಟಕ ಹೀಗೆ ಸಂಘವು ವಿಶಿಷ್ಟ ಯೋಜನೆಗಳನ್ನು ಹಾಕಿಕೊಂಡು ದಾಪುಗಾಲು ಇಟ್ಟಿರುವುದು ವಿಶೇಷವೆನಿಸೆದೆ. ಭವಿಷ್ಯದಲ್ಲಿ ಸಂಘ ಗ್ರಾಹಕರಿಗೆ ಉತ್ತಮ ಸೇವೆ ನೀಡಲಿ ಎಂದು ಶುಭ ಹಾರೈಸಿದರು. ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಘದ ಬೆಳವಣಿಗೆ, ಅಭಿವೃದ್ಧಿಯ ಕಾರ್ಯಗಳು, ಗ್ರಾಹಕರ ಅಗತ್ಯಗಳಿಗೆ ಪೂರಕವಾದ ಸ್ಪಂದನೆ ಇರುವುದರಿಂದ ಸಂಘ ಬೆಳವಣಿಗೆ ಹೊಂದುತ್ತಿದೆ. ಅದರ ಬೆಳವಣಿಗೆ ಹೀಗೆಯೇ ಸಾಗಲಿ ಎಂದರು. ಮುಖ್ಯ ಕಾರ್ಯ ನಿರ್ವಾಹಕ ಚಂದ್ರಮೋಹನ ಕಲ್ಯಾಣಿ ವಾರ್ಷಿಕ ವರದಿ ಓದಿದರು. ಸಂಘದ ಉಪಾಧ್ಯಕ್ಷ ಲಕ್ಷ್ಮಣ ಹಾಲನ್ನವರ್, ನಿರ್ದೇಶಕರಾದ ಯಲಗುರ್ದಪ್ಪ ತೊದಲಂಗಿ, ಸಂಗಪ್ಪ ಹಡಪದ, ಮಹಾಗುಂಡಪ್ಪ ಸುಂಕದ, ಸಂತೋಷ ತಿಪ್ಪಾ, ನಾಗಪ್ಪ ಮುರಗೋಡ, ನಿರ್ಮಲಾ ಕಳ್ಳಿಗುಡ್ಡ, ಯಮನಪ್ಪ ರಾಠೋಡ, ಮಳಿಯಪ್ಪ ಹಾವಡಿ, ದ್ಯಾಮಣ್ಣ ಗದ್ದನಕೇರಿ, ಶಶಿಕಲಾ ಅಬಕಾರಿ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಚಂದ್ರಮೋಹನ ಕಲ್ಯಾಣಿ ಇದ್ದರು.
ಪ್ರತಿವರ್ಷ 2 ಶಾಲೆಗಳ ದತ್ತಿನಿಧಿ: ಸಂಘದ ಗ್ರಾಮೀಣ ಶಿಕ್ಷಣ ನಿಧಿ ಹಣದಿಂದ ಪ್ರತಿ ಸರ್ಕಾರಿ ಶಾಲೆಗೆ ₹1 ಲಕ್ಷ ದಂತೆ 2 ಶಾಲೆಗಳ ಅಜೀವ ಠೇವು ಸಂಘದಲ್ಲಿ ಮಾಡಿಕೊಂಡು ವರ್ಷದ ಬಡ್ಡಿ ಹಣದಲ್ಲಿ ಶಾಲಾ ಪ್ರಗತಿಗೆ ಬಳಸುವ ಯೋಜನೆ ಹಮ್ಮಿಕೊಂಡಿದೆ. ಇದೇ ಸಲ ತಾಲೂಕಿನ 3 ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.-ಹನಮಂತ ಮಾವಿನಮರದ,
ಕೋಟಿಕಲ್ ಪಿಕೆಪಿಎಸ್ ಅಧ್ಯಕ್ಷರು.